ಬೆಂಗಳೂರು :ರಾಜ್ಯದ ಗ್ರಾಪಂಗಳಲ್ಲಿ 11 ಬಿ ಆಸ್ತಿ ನೋಂದಣಿ ಮತ್ತು ಇ-ಖಾತಾ ನೀಡುವ ಪ್ರಕ್ರಿಯೆ ಆರಂಭಿಸಲು ಇನ್ನೂ ಒಂದೂವರೆ ತಿಂಗಳ ಕಾಲಾವಕಾಶದ ಅಗತ್ಯವಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಐಹೊಳೆ ದುರ್ಯೋಧನ ಮಹಾಲಿಂಗಪ್ಪ 11 ಬಿ’ ಆಸ್ತಿ ನೋಂದಣಿ ಮತ್ತು ‘ಇ-ಸ್ವತ್ತು’, ಬಿ ಖಾತಾ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದರು. ಕಳೆದ ಅಧಿವೇಶನದಲ್ಲಿ ಅಂಗೀಕಾರಗೊಂಡಿರುವ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಅಧಿನಿಯಮ 2025 ಕ್ಕೆ ಕರಡು ನಿಯಮಾವಳಿ ರೂಪಿಸಿ ಆಕ್ಷೇಪಣೆಗಳನ್ನು ಪಡೆಯಲಾಗಿದೆ ಎಂದರು.
ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಕ್ರಮಬದ್ಧವಲ್ಲದ ನಿವೇಶನಗಳು ಮತ್ತು ಕಟ್ಟಡಗಳನ್ನು (ಸರ್ಕಾರಿ/ಸ್ಥಳೀಯ ಸಂಸ್ಥೆ/ಶಾಸನಬದ್ಧ ಸಂಸ್ಥೆ/ಅರಣ್ಯ ಭೂಮಿಯನ್ನು ಹೊರತುಪಡಿಸಿ) ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಪ್ರತ್ಯೇಕ ವಹಿಯಲ್ಲಿ ದಾಖಲಿಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ಕ್ಕೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಅಧಿನಿಯಮ, 2025 ರನ್ವಯ ಪ್ರಕರಣ 199 ಬಿ ಮತ್ತು 199 ಸಿ ಹೊಸ ಪ್ರಕರಣಗಳನ್ನು ಸೇರ್ಪಡೆ ಮಾಡಿ ದಿನಾಂಕ:07-04-2025 ರಂದು ಅಧಿಸೂಚನೆ ಹೊರಡಿಸಲಾಗಿದೆ.
ಈ ಅಧಿನಿಯಮ, ಪ್ರಾರಂಭದ ದಿನಾಂಕದ ತರುವಾಯ ಪ್ರಕರಣ 199 ಸಿ ರಂತೆ ರಿಜಿಸ್ಟರ್ನಲ್ಲಿ ಯಾವುದೇ ಹೊಸ ಸ್ವತ್ತನ್ನು ನಮೂದಿಸತಕ್ಕದ್ದಲ್ಲ ಎಂದು ತಿಳಿಸಲಾಗಿರುವುದರಿಂದ ಮುಂದಿನ ಆದೇಶದವರೆಗೆ ಇ-ಸ್ವತ್ತು ತಂತ್ರಾಂಶದಡಿ ನಮೂನೆ-11ಬಿ ರಡಿ ಆಸ್ತಿಗಳ ಸೃಜನೆಯನ್ನು ಮತ್ತು ಮ್ಯಾನುಯಲ್ ಸಮೀಕ್ಷೆ ನಡೆದ ನಂತರ ಆಸ್ತಿ ತೆರಿಗೆ ವ್ಯಾಪ್ತಿಯಲ್ಲಿ ಬಿಟ್ಟು ಹೋದ ಮತ್ತು ಹೊಸದಾಗಿ ಗುರುತಿಸಲಾದ ಆಸ್ತಿಗಳನ್ನು ಇ-ಸ್ವತ್ತು ತಂತ್ರಾಂಶದ ಮೂಲಕ ಸೇರ್ಪಡೆ ಮಾಡುತ್ತಿರುವ ಆಯ್ಕೆಯನ್ನು ಸ್ಥಗಿತಗೊಳಿಸಲಾಗಿದೆ.
ಅಧಿನಿಯಮಕ್ಕೆ ತಿದ್ದುಪಡಿ ತರಲಾಗಿರುವುದರಿಂದ ಸರ್ಕಾರದ :RDPR 422 GPA 2025, ໖:04-07-2025 ರಂದು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತೆರಿಗೆ, ದರ ಮತ್ತು ಫೀಜುಗಳು) ನಿಯಮಗಳು, 2025 ರ ಕರಡನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಿ ಬಾಧಿತರಾಗುವ ಎಲ್ಲಾ ವ್ಯಕ್ತಿಗಳಿಂದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಆಹ್ವಾನಿಸಿದ್ದು, ಈ ಸಂಬಂಧ ಸ್ವೀಕೃತವಾಗಿರುವ ಆಕ್ಷೇಪಣೆಗಳು ಮತ್ತು ಸಲಹೆಗಳು ಸರ್ಕಾರದ ಪರಿಶೀಲನೆಯಲ್ಲಿದ್ದು, ನಿಯಮಗಳನ್ನು ಅಂತಿಮಗೊಳಿಸಿದ ನಂತರ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ-11ಬಿ ಖಾತೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.