ಬೆಂಗಳೂರು : ಹೃದಯದ ಪ್ರತಿ ಬಡಿತವೂ ನಮ್ಮ ಜೀವಂತಿಕೆಗೆ ಸಾಕ್ಷಿ. ಪ್ರಸ್ತುತ ಹೃದಯದ ಕಾಳಜಿಗೆ ಆದ್ಯತೆ ನೀಡಬೇಕಿರುವುದು ಅನಿವಾರ್ಯ. ಹಠಾತ್ ಹೃದಯಾಘಾತದ ಸಂದರ್ಭದಲ್ಲಿ ತುರ್ತು ಚಿಕಿತ್ಸೆ ಅತ್ಯಗತ್ಯ. ಇಂತಹ ಪ್ರಕರಣಗಳ ಆರೈಕೆಗಾಗಿ ರಾಜ್ಯ ಸರ್ಕಾರ ಪುನೀತ್ ರಾಜ್‌ಕುಮಾರ್ ಹೃದಯಜ್ಯೋತಿ ಯೋಜನೆ ಆರಂಭಿಸಿದ್ದು, ಈವರೆಗೆ ನೂರಾರು ಜೀವಗಳನ್ನು ಉಳಿಸಿದೆ.
ಪುನೀತ್ ರಾಜ್‌ಕುಮಾರ್ ಹೃದಯಜ್ಯೋತಿ ಯೋಜನೆಯಡಿ ಹೃದಯಾಘಾತದ ಸಂದರ್ಭದಲ್ಲಿ 25,000 ರೂ. ಮೌಲ್ಯದ ಜೀವರಕ್ಷಕ ಇಂಜೆಕ್ಷನ್ ಉಚಿತವಾಗಿ ನೀಡಲಾಗುತ್ತಿದೆ. 1 ಮತ್ತು 2 ನೇ ಹಂತದಲ್ಲಿ 15 ಜಿಲ್ಲೆಗಳ 70 ತಾಲೂಕು ಆಸ್ಪತ್ರೆಗಳಲ್ಲಿ ಈ ಯೋಜನೆ ಜಾರಿಯಾಗಿದ್ದು, 3 ಮತ್ತು 4 ನೇ ಹಂತದಲ್ಲಿ ಉಳಿದ 16 ಜಿಲ್ಲೆಗಳ ಎಲ್ಲಾ ತಾಲೂಕುಗಳಲ್ಲಿ ಪುನೀತ್ ರಾಜ್‌ಕುಮಾರ್ ಹೃದಯಜ್ಯೋತಿ ಯೋಜನೆ ವಿಸ್ತರಣೆ ಮಾಡಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಪುನೀತ್ ರಾಜ್‌ಕುಮಾರ್ ಹೃದಯಜ್ಯೋತಿ ಯೋಜನೆಯಡಿ ರಾಜ್ಯದಲ್ಲಿ ಈವರೆಗೆ 1.81 ಲಕ್ಷ ಮಂದಿಗೆ ಇಸಿಜಿ ಮೂಲಕ ಪರೀಕ್ಷೆ ಮಾಡಲಾಗಿದೆ. 2 ಲಕ್ಷ ಹೃದಯ ಸಂಬಂಧಿ ರೋಗ ಲಕ್ಷಣವುಳ್ಳವರ ತಪಾಸಣೆ ನಡೆಸಲಾಗಿದೆ. 11,606 ಗಂಭೀರ ಪ್ರಕರಣಗಳು ಪತ್ತೆಯಾಗಿದ್ದು, 3,218 ರೋಗಿಗಳಿಗೆ ಹಬ್ ಆಸ್ಪತ್ರೆಗಳಿಗೆ ಚಿಕಿತ್ಸೆ ಶಿಫಾರಸು ಮಾಡಲಾಗಿದೆ.
ಇತ್ತೀಚೆಗೆ ಹೆಚ್ಚುತ್ತಿರುವ ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಹೃದಯದ ಆರೋಗ್ಯಕ್ಕೆ ಒತ್ತು ನೀಡುವ ಸಲುವಾಗಿ ಸೆಪ್ಟೆಂಬರ್ 29 ರಂದು ವಿಶ್ವ ಹೃದಯ ದಿನ ಆಚರಿಸಲಾಗುತ್ತದೆ.