ಬೆಂಗಳೂರು: ರಾಜ್ಯದಲ್ಲಿನ ಎಲ್ಲ ಕಡೆ 1200 ಚದರಡಿ ನಿವೇಶನಗಳಲ್ಲಿ ಇರುವ ಮೂರು ಅಂತಸ್ತಿನ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ (ಒಸಿ) ಪಡೆಯುವುದಕ್ಕೆ ವಿನಾಯಿತಿ ನೀಡಲು ನಗರಾಭಿವೃದ್ಧಿ ಇಲಾಖೆ ತೀರ್ಮಾನಿಸಿದೆ.
ಕಟ್ಟಡ ನಿರ್ಮಾಣ ಪ್ರಮಾಣ ಪತ್ರ, ಸ್ವಾಧಿನಾನುಭವ ಪ್ರಮಾಣ ಪತ್ರ ಇಲ್ಲದ ಕಟ್ಟಡಗಳಿಗೆ ವಿದ್ಯುತ್, ನೀರಿನ ಸಂಪರ್ಕ ಕಲ್ಪಿಸದಂತೆ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾಜ್ಯದ ಲಕ್ಷಾಂತರ ಕಟ್ಟಡ ಮಾಲೀಕರು ತೊಂದರೆಗೆ ಸಿಲುಕಿದ್ದಾರೆ. ಅವರ ನೆರವಿಗೆ ನಗರಾಭಿವೃದ್ಧಿ ಇಲಾಖೆ ಮುಂದಾಗಿದೆ.
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ (ಜಿಬಿಎ)– 2024, ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆ 1976 (ಕೆಎಂಸಿ ಕಾಯ್ದೆ), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಾದರಿ ಕಟ್ಟಡ ಬೈ–ಲಾಗಳನ್ನು ತಿದ್ದುಪಡಿ ಮಾಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.
1200 ಚದರಡಿ ವಿಸ್ತೀರ್ಣದ ನಿವೇಶನದಲ್ಲಿ ನೆಲ ಅಂತಸ್ತು + ಎರಡು ಅಂತಸ್ತು ಅಥವಾ ಸ್ಟಿಲ್ಟ್ + ಮೂರು ಅಂತಸ್ತಿನವರೆಗಿನ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆಯುವುದರಿಂದ ವಿನಾಯಿತಿ ನೀಡಲಾಗುತ್ತದೆ. ವಿಶೇಷವಾಗಿ 30*40 ನಿಮಿಷದಲ್ಲಿ ನಿರ್ಮಾಣಗೊಂಡ ಕಟ್ಟಡ ಮಾಲೀಕರಿಗೆ ಅನುಕೂಲವಾಗುತ್ತದೆ. ಬೆಂಗಳೂರಿನಲ್ಲಿ ಜಲಮಂಡಳಿ ಸಾವಿರಾರು ಮನೆಗಳಿಗೆ ನೀರಿನ ಸಂಪರ್ಕ ನೀಡಿದೆ. ಆದರೆ ಒಸಿ ಪಡೆಯದ ಕಾರಣ ನೀರಿನ ಶುಲ್ಕದ ಜೊತೆಗೆ ದಂಡ ಕೂಡ ವಿಧಿಸಲಾಗುತ್ತಿದೆ.
ಜಿಬಿಎ–2024 ಕಾಯ್ದೆಯಲ್ಲಿ ಒಸಿಗೆ ವಿನಾಯಿತಿ ನೀಡಲು ಸರ್ಕಾರ ಅಧಿಸೂಚನೆ ಹೊರಡಿಸಬಹುದು ಎಂದು ಸೆಕ್ಷನ್ 241(7)ರಲ್ಲಿ ಹೇಳಲಾಗಿದೆ. ಆದರೆ, ಬಿಬಿಎಂಪಿ ಕಾಯ್ದೆ–2020, ಕೆಎಂಸಿ– 1976 ಕಾಯ್ದೆ, ಕರ್ನಾಟಕ ಪುರಸಭೆ ಕಾಯ್ದೆ 1964ರಲ್ಲಿ ಈ ಅವಕಾಶ ಇರುವುದಿಲ್ಲ.