ಬೆಂಗಳೂರು: ನಗರಾಭಿವೃದ್ಧಿ ಇಲಾಖೆಯು ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಆಸ್ತಿಗಳ ಹಕ್ಕು ವರ್ಗಾವಣೆಗೆ ಸಂಬಂಧಿಸಿದಂತೆ ಇ-ಆಸ್ತಿ ತಂತ್ರಾಂಶ ಮತ್ತು ಕಾವೇರಿ ತಂತ್ರಾಂಶವನ್ನು ಸಂಯೋಜನೆ ಮಾಡಲು ಸಮ್ಮತಿ ನೀಡಿದೆ. ಧಾರವಾಡ ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಯನ್ನು ಇ-ಆಸ್ತಿ ತಂತ್ರಾಂಶದಿಂದ ಕಡ್ಡಾಯವಾಗಿ ಮಾಹಿತಿ ಪಡೆದು ನೋಂದಾಯಿಸಲು ಸೂಚಿಸಿದ್ದು, ಇ-ಆಸ್ತಿ ತಂತ್ರಾಂಶವನ್ನು ಕಾವೇರಿ-2.0 ತಂತ್ರಾಂಶದೊಂದಿಗೆ ಸಂಯೋಜಿಸಿ, ಅಕ್ಟೊಬರ್ 07, 2024 ರಿಂದ ಜಾರಿಗೆ ಬರುವಂತೆ ಸರ್ಕಾರವು ಆದೇಶಿಸಿದೆ.
ಈ ಕುರಿತು ಪ್ರಕಟಣೆ ನೀಡಿದ್ದು, ಕೃಷಿ ಜಮೀನಿನ ನೋಂದಣಿಗೆ ಭೂಮಿ ತಂತ್ರಾಂಶದೊಂದಿಗೆ 2006 ರಿಂದಲೇ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ ತಂತ್ರಾಂಶವನ್ನು ಸಂಯೋಜನೆ ಮಾಡಲಾಗಿದೆ. ಜಮೀನಿನ ಸರ್ವೇ ನಕ್ಷೆ (ಸ್ಕೆಚ್) ನಮೂನೆ 11 ಇ ಇರುವ ಮೋಜಣಿ ತಂತ್ರಾಂಶದೊಂದಿಗೆ ಕಾವೇರಿ ತಂತ್ರಾಂಶವನ್ನು ಅಕ್ಟೋಬರ್ 05, 2016 ರಿಂದ ಸಂಯೋಜನೆ ಮಾಡಲಾಗಿದೆ. ಗ್ರಾಮ ಪಂಚಾಯತ ವ್ಯಾಪ್ತಿಯ ಕೃಷಿಯೇತರ ಸ್ವತ್ತುಗಳ ದಸ್ತಾವೇಜುಗಳ ನೋಂದಣಿಗಾಗಿ 2014 ರಿಂದ ಸಂಯೋಜನೆಗೊಳಿಸಲಾಗಿದೆ ಎಂದಿದೆ.
ನಗರ ಪ್ರದೇಶಗಳಲ್ಲಿನ ಕೃಷಿಯೇತರ ಆಸ್ತಿಗಳಿಗೆ ಸಂಬಂಧಿಸಿದಂತೆ ಇ- ಆಸ್ತಿ ತಂತ್ರಾಂಶ ವನ್ನು ರೂಪಿಸಿದ್ದು, ಇ-ಆಸ್ತಿ ತಂತ್ರಾಂಶವನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ 2.0 ತಂತ್ರಾಂಶದೊಂದಿಗೆ ಪ್ರಾಯೋಗಿಕವಾಗಿ ರಾಮನಗರ ಮತ್ತು ಕನಕಪುರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸ್ವತ್ತುಗಳಿಗೆ ಸಂಬಂಧಿಸಿದಂತೆ ಕಾವೇರಿ-2.0 ತಂತ್ರಾಂಶದೊಂದಿಗೆ ಸಂಯೋಜನೆ ಮಾಡಿ ದಿನಾಂಕ:29-01-2020 ರಿಂದ ನೊಂದಣಿ ಮಾಡುತ್ತಿರುವುದು ಯಶಸ್ವಿಯಾಗಿರುತ್ತದೆ.
ಇ-ಖಾತಾ ಸಂಯೋಜನೆ ಪ್ರಯೋಜನಗಳು ಇ-ಆಸ್ತಿ ತಂತ್ರಾಂಶದಿಂದಾಗಿ ಸ್ವತ್ತುಗಳ ನೋಂದಣಿ ವೇಳೆ ಸಾರ್ವಜನಿಕರು ಮೊಸಹೋಗುವುದನ್ನು ತಡೆಯುವುದು. ಮತ್ತು ಇ-ಖಾತಾದಿಂದ ಮಾತ್ರ ಸ್ವತ್ತಿನ ಸ್ವರೂಪ ಮತ್ತು ನೈಜ ಮಾಲೀಕರನ್ನು ಗುರುತಿಸಲು ಸಾಧ್ಯವಾಗುತ್ತದೆ.
ನೈಜ ಮಾಲೀಕರಿಗೆ ವಂಚಿಸಿ ಬೇರೆಯವರಿಂದ ಸ್ವತ್ತುಗಳ ನೋಂದಣಿ ಆಗುವುದನ್ನು ತಪ್ಪಿಸಬಹುದಾಗಿದೆ. ಹಾಗೂ ಸ್ವತ್ತುಗಳ ಖರೀದಿದಾರರಿಗೆ ಸ್ವತ್ತಿನ ನೈಜ ಮಾಲೀಕರನ್ನು ಗುರುತಿಸುವುದು. ಭವಿಷ್ಯದಲ್ಲಿ ಉಂಟಾಗಬಹುದಾದ ವ್ಯಾಜ್ಯ ಕಾನೂನು ತೊಂದರೆಗಳನ್ನು ತಪ್ಪಿಸುವ ಉದ್ದೇಶವನ್ನು ಈ ತಂತ್ರಾಂಶ ಹೊಂದಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದೆ.