ಬೆಂಗಳೂರು: ಮನೆ ಬಾಗಿಲಲ್ಲಿಯೇ ತಪಾಸಣೆ ನಡೆಸಿ, ಅಗತ್ಯ ಔಷಧಿಗಳನ್ನು ಒದಗಿಸುವ ಗೃಹ ಆರೋಗ್ಯ ಯೋಜನೆಯನ್ನು ಮುಂದಿನ ತಿಂಗಳು ರಾಜ್ಯದಲ್ಲಿ ಜಾರಿ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಸಮಸ್ಯೆ ಎದುರಿಸುತ್ತಿರುವವರಲ್ಲಿ ಕೆಲವರು ನಿಯಮಿತವಾಗಿ ಮಾತ್ರೆಗಳನ್ನು ಸೇವಿಸುತ್ತಿಲ್ಲ. ಆರ್ಥಿಕ ಹೊರೆ ಸೇರಿ ವಿವಿಧ ಕಾರಣಗಳಿಂದ ಮಾತ್ರೆಗಳನ್ನು ಖರೀದಿಸುತ್ತಿಲ್ಲ. ಗೃಹ ಆರೋಗ್ಯ ಯೋಜನೆಯಡಿ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರಿಗೆ ಮೂರು ತಿಂಗಳಿಗೆ ಆಗುವಷ್ಟು ಮಾತ್ರೆಗಳನ್ನು ಮನೆಗಳಿಗೆ ನೇರವಾಗಿ ಒದಗಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಅತಿವೃಷ್ಟಿ, ಪ್ರವಾಹ ಸಮಸ್ಯೆಯಾದ ಎಲ್ಲ ಕಡೆ ಭೇಟಿ ನೀಡುತ್ತಿದ್ದೇನೆ. ರಸ್ತೆ, ವಿದ್ಯುತ್, ಕುಡಿಯುವ ನೀರು, ಕಾಳಜಿ ಕೇಂದ್ರ ಸೇರಿದಂತೆ ಅಗತ್ಯ ಪರಿಹಾರೋಪಾಯಗಳನ್ನು ಆರಂಭಿಸಲಾಗಿದೆ. ಮುಂದಿನ ವಾರ ಇನ್ನೂ ಹೆಚ್ಚಿನ ಮಳೆ ಬೀಳುವ ಮುನ್ಸೂಚನೆ ಇದೆ. ವಿಪತ್ತು ನಿರ್ವಹಣೆಗೆ ಎಲ್ಲ ಇಲಾಖೆಗಳನ್ನೂ ಸಜ್ಜುಗೊಳಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.