ಬೆಂಗಳೂರು: ನಗರದ 18 ರಸ್ತೆಗಳನ್ನು ವೈಟ್ ಟಾಪಿಂಗ್ ಮಾಡಲಾಗುತ್ತಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅವರು ತಿಳಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ ರಾಜರಾಜೇಶ್ವರಿ ನಗರ ವಲಯದಲ್ಲಿ ಮುಖ್ಯ ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮದಡಿ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಇಂದು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಯಶವಂತಪುರದ ಎಂಇಐ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪರಿಶೀಲನೆ:
ಯಶವಂತಪುರದ 950 ಮೀ. ಉದ್ದ ಎಂಇಐ ರಸ್ತೆಯಲ್ಲಿ ಕೈಗೆತ್ತಿಕೊಂಡಿರುವ ವೈಟ್ ಟಾಪಿಂಗ್ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು.
ಎಂಇಐ ರಸ್ತೆಯಲ್ಲಿ ಸಂಚಾರಿ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದು ಕಳೆದ 1 ತಿಂಗಳಿಂದ ವೈಟ್ ಟಾಪಿಂಗ್ ಕಾಮಾಗರಿ ಪ್ರಾರಂಭಿಸಲಾಗಿದೆ. ಒಂದು ಬದಿಯ ರಸ್ತೆಯನ್ನು ಸಂಪೂರ್ಣ ಮುಚ್ಚಿ ಕಾಮಗಾರಿ ನಡೆಸಲಾಗುತ್ತಿದೆ. ಸದರಿ ರಸ್ತೆಯಲ್ಲಿ ನೀರುಗಾಲುವೆ, ಸ್ಯಾನಿಟರಿ ಲೈನ್, ಡಕ್ಟ್ ಅಳವಡಿಕೆ, ಚೇಂಬರ್, ಪಾದಚಾರಿ ಮಾರ್ಗ ಕಾಮಗಾರಿ ಪ್ರಗತಿಯಲ್ಲಿದೆ.
ಕಾಮಗಾರಿಗೆ ವೇಗ ನೀಡಿ, ಕಾಮಗಾರಿಯ ನಡೆಯುತ್ತಿರುವ ಬಗ್ಗೆ ಪ್ರತಿ ವಾರ ವರದಿ ನೀಡಬೇಕು. ಸರಿಯಾದ ಯೋಜನೆ ರೂಪಿಸಿಕೊಂಡು ನಿಗದಿತ ಸಮಯದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸಾ ಕೇಂದ್ರ ಪರಿಶೀಲನೆ:
ಸುಮ್ಮನಹಳ್ಳಿ ಬಳಿ ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸಾ ಕೇಂದ್ರದ ಪುನರ್ ನವೀಕರಣ ನಡೆಯುತ್ತಿದ್ದು, ಈ ಹಿಂದೆ 50 ನಾಯಿಗಳಿಗೆ ಎಬಿಸಿ ಮಾಡಲಾಗುತ್ತಿತ್ತು. ನವೀಕರಣ ಮಾಡಿದ ಬಳಿಕ 80 ನಾಯಿಗಳಿಗೆ ಎಬಿಸಿ ಮಾಡಬಹುದಾಗಿದ್ದು, ಒಂದು ತಿಂಗಳೊಳಗಾಗಿ ಕೆಲಸವನ್ನು ಪೂರ್ಣಗೊಳಿಸಿ ಎಬಿಸಿ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆನೈನ್ ಡಿಸ್ಟೆಂಪರ್ ರೋಗದಿಂದ ಚೇತರಿಸಕೊಂಡ ಬೀದಿ ನಾಯಿಗಳಿಗೆ ಎಬಿಸಿ ಮಾಡುವ ಸಲುವಾಗಿ ಪ್ರತ್ಯೇಕ ಕೇಂದ್ರವಿದ್ದು, ಅದನ್ನು ಪರಿಶೀಲಿಸಿ ಸರಿಯಾಗಿ ನಿರ್ವಹಣೆ ಮಾಡಲು ಸೂಚಿಸಿದರು.
ಸಹಾಯಕ ಕಂದಾಯ ಅಧಿಕಾರಿ ಕಛೇರಿ ಪರಿಶೀಲನೆ:
ಲಗ್ಗೆರೆಯ ಸಹಾಯಕ ಕಂದಾಯ ಅಧಿಕಾರಿ ಕಛೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಸಾರ್ವಜನಿಕರ ಬಳಿ ಅಹವಾಲು ಆಲಿಸಿದರು. ಜಾಗ ತ್ವರಿತವಾಗಿ ಮಾರಾಟ ಅಥವಾ ಹಸ್ತಾಂತರ ಮಾಡುವುದಿದ್ದರೆ ಸಹಾಯಕ ಕಂದಾಯ ಅಧಿಕಾರಿ ಕಛೇರಿಗೆ ಭೇಟಿ ನೀಡಿ ಕೂಡಲೆ ಇ-ಖಾತಾ ಪಡೆಯಬಹುದೆಂದು ಮಾಹಿತಿ ನೀಡಿದರು.
ಬಳಿಕ ಸಹಾಯಕ ಕಂದಾಯ ಅಧಿಕಾರಿ 2ನೇ ಮಹಡಿಯಲ್ಲಿದ್ದು, ಇ-ಖಾತಾ ನೀಡುವ ಸಲುವಾಗಿ ಹೆಲ್ಪ್ ಡೆಸ್ಕ್ ಮಾಡಿರುವುದನ್ನು ಪರಿಶೀಲಿಸಿ, ನಾಗರೀಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೆಲಮಹಡಿಯಲ್ಲಿ ಸವಿವರವಾದ ಮಾಹಿತಿಯುಳ್ಳ ನಾಮಫಲಕ ಅಳವಡಿಸಲು ಸೂಚನೆ ನೀಡಿದರು.
ಹೆಚ್ಚು ಬಾಕಿ ಉಳಿಸಿಕೊಂಡಿರುವ ವಸತಿಯೇತರ ಕಟ್ಟಡಗಳಿಗೆ ಬೀಗ ಹಾಕಿ ವಸೂಲಿ ಮಾಡಿ:
ಆರ್.ಆರ್ ನಗರ ವಲಯ ವ್ಯಾಪ್ತಿಯಲ್ಲಿ ಹೆಚ್ಚಾ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರು ಹಾಗೂ ಪರಿಷ್ಕರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ವಸತಿಯೇತರ ಕಟ್ಟಡಗಳಿಗೆ ಬೀಗ ಮುದ್ರೆ ಹಾಕಿ ಬಾಕಿ ಆಸ್ತಿ ತೆರಿಗೆಯನ್ನು ವಸೂಲಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಾಗರಭಾವಿ ಕೆರೆ ಪರಿಶೀಲನೆ:
ನಾಗರಭಾವಿ ಕರೆ 4.7 ಗುಂಟೆ ಇದ್ದು, ಲೋಕಾಯುಕ್ತ ನಿರ್ದೇಶನದ ಮೇರೆಗೆ ಸರ್ವೇ ಮಾಡಿ ಕೆರೆ ಸುತ್ತಲು ಫೆನ್ಸಿಂಗ್ ಮಾಡಲಾಗುತ್ತಿದೆ. ಕೆರೆ ಪಕ್ಕದಲ್ಲಿರುವ ರಾಜಕಾಲುವೆಯಲ್ಲಿ ಸೀವೇಜ್ ನೀರು ಬರುತ್ತಿದ್ದು, ಕೆರೆಗೆ ಸೇರುತ್ತಿದೆ. ಈ ಸಂಬಂಧ ಕೆರೆ ಸೀವೇಜ್ ನೀರು ಹೋಗದಂತೆ ತಡೆ ಗೋಡೆ ಎತ್ತರಿಸಿ, ಮಳೆ ಗಾಲದ ವೇಳೆ ಮಾತ್ರ ರಾಜಕಾಲುವೆಯಿಂದ ಕೆರೆಗೆ ನೀರು ಹೋಗುವಂತೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇನ್ನು ಕೆರೆ ಪಕ್ಕದಲ್ಲಿ ಉದ್ಯಾನದ ಖಾಲಿ ಜಾಗವಿದ್ದು, ಅದನ್ನು ಸರ್ವೇ ಮಾಡಿ ಗಡಿ ಗುರುತಿಸಿ ಫೆನ್ಸಿಂಗ್ ಮಾಡಲು ಸೂಚಿಸಿದರು.
ಇಂದಿರಾ ಕ್ಯಾಂಟೀನ್ ನಲ್ಲಿ ಮುದ್ದೆ ಊಟಕ್ಕೆ ಮೆಚ್ಚುಗೆ:
ಕೊಟ್ಟಿಗೆ ಪಾಳ್ಯದಲ್ಲಿರುವ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ, ನಾಗರೀಕರಿಂದ ಊಟ ಗುಣಮಟ್ಟದ ಬಗ್ಗೆ ಕೇಳಿದರು. ಅದಕ್ಕೆ ನಾಗರೀಕರೊಬ್ಬರು ಪ್ರತಿಕ್ರಿಯಿಸಿ, ಇದೀಗ ಮುದ್ದೆ ನೀಡುತ್ತಿರುವುದಕ್ಕಾಗಿ ಸಂತಸ ವ್ಯಕ್ತಪಡಿಸಿ ಒಳ್ಳೆಯ ಊಟ ನೀಡುವುದಾಗಿ ತಿಳಿಸಿದರು.
ನಂತರ ಕ್ಯಾಂಟೀನ್ ಸ್ವಚ್ಛತೆ ಪರಿಶೀಲಿಸಿದ ವೇಳೆ ಕಳೆದ ಎರಡು ದಿನಗಳಿಂದ ಮುದ್ದೆ ನೀಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಆ ಬಳಿಕ ಮುದ್ದೆ, ಸಾರು ಹಾಗೂ ಮೊಸರನ್ನದ ರುಚಿ ನೋಡಿದರು. ಗುಣಮಟ್ಟ ಕಾಪಾಟಿಕೊಂಡು ಉತ್ತಮ ರುಚಿಗೆ ನೀಡುತ್ತಿದ್ದು, ಅದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಇದೇ ಗುಣಮಟ್ಟವನ್ನು ಕಾಪಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಟ್ರಾನ್ಸ್ ಫರ್ ಸ್ಟೇಷನ್ ಪರಿಶೀಲನೆ:
ಮೈಸೂರು ರಸ್ತೆ ವೃಷಭಾವತಿ ಕಾಲುವೆ ಪಕ್ಕದಲ್ಲಿರುವ ಟ್ರಾನ್ಸ್ ಫರ್ ಸ್ಟೇಷನ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸುತ್ತಮುತ್ತಲು ದುರ್ವಾಸನೆ ಹೋಗದಂತೆ ಸ್ವಚ್ಛತೆ ಕಾಪಾಡಲು ಸೂಚಿಸಿದರು.
ಈ ವೇಳೆ ವಿಶೇಷ ಆಯುಕ್ತರಾದ ಅವಿನಾಶ್ ಮೆನನ್ ರಾಜೇಂದ್ರನ್, ವಲಯ ಆಯುಕ್ತರಾದ ಬಿ.ಸಿ ಸತೀಶ್ ಕುಮಾರ್, ವಲಯ ಜಂಟಿ ಆಯುಕ್ತರಾದ ಅಜಯ್, ಪ್ರಧಾನ ಅಭಿಯಂತರರಾದ ಪ್ರಹ್ಲಾದ್, ಮುಖ್ಯ ಅಭಿಯಂತರರಾದ ಸ್ವಯಂಪ್ರಭ, ಲೋಕೇಶ್ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
ನಮ್ಮಿಂದ ಸಾಧ್ಯವಾಗಿದ್ದು, ಕುಮಾರಸ್ವಾಮಿಯಿಂದ ಸಾಧ್ಯವಾಗಲಿಲ್ಲ ಯಾಕೆ?: ಡಿಸಿಎಂ ಡಿ.ಕೆ ಶಿವಕುಮಾರ್ ಪ್ರಶ್ನೆ