ಬೆಂಗಳೂರು : ಸರ್ಕಾರಿ ಶಾಲೆಗಳಲ್ಲಿ 56 ಸಾವಿರ ಶಿಕ್ಷಕರ ಕೊರತೆ ಇದೆ. 45 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. 12,500 ಶಿಕ್ಷಕರ ನೇಮಕಾತಿಯಾಗುತ್ತಿದೆ. 5 ಸಾವಿರ ಶಿಕ್ಷಕರ ನೇಮಕಾತಿ ಸದ್ಯದಲ್ಲೇ ಆಗಲಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಆಯೋಜಿಸಿದ್ದ “ಸಿ.ಎಸ್.ಆರ್ ಶಿಕ್ಷಣ ಸಮಾವೇಶ-2024″ (CSR EDU CONCLAVE – 2024) ಕನಸುಗಳನ್ನು ಪೋಷಿಸೋಣ, ಭವಿಷ್ಯಗಳನ್ನು ರೂಪಿಸೋಣ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ 56 ಸಾವಿರ ಶಿಕ್ಷಕರ ಕೊರತೆಯಿದ್ದು, 45,000 ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗಿದೆ. 12,500 ಶಿಕ್ಷಕರ ನೇಮಕಾತಿಯಾಗುತ್ತಿದ್ದು, ಶೀಘ್ರದಲ್ಲಿ 5000 ಶಿಕ್ಷಕರ ನೇಮಕಾತಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದ ವಿವಿಧ ಭಾಗಗಳಿಂದ ಶಿಕ್ಷಣ ಅರಸಿ ಮಕ್ಕಳು ಬೆಂಗಳೂರಿಗೆ ಬರುತ್ತಿದ್ದು, ಸಿಎಸ್‌ಆರ್ ನಿಧಿ ಮೂಲಕ ಹಳ್ಳಿಗಳಲ್ಲೇ ಉತ್ತಮ ಮೂಲಸೌಕರ್ಯ ಹಾಗೂ ಗುಣಮಟ್ಟದ ಶಿಕ್ಷಣ ಕಲ್ಪಿಸುವುದು, ಕನ್ನಡ ಮಾಧ್ಯಮ ಶಾಲೆಗಳ ಜೊತೆ ಇಂಗ್ಲಿಷ್ ಮಾಧ್ಯಮದ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸುವುದು, ಗ್ರಾಮೀಣ ಪ್ರದೇಶಗಳಲ್ಲಿ ಈಗ ಆರಂಭಿಸಿರುವ 2,000 ಕರ್ನಾಟಕ ಪಬ್ಲಿಕ್ ಶಾಲೆಗಳ ಜೊತೆಗೆ ಇನ್ನೂ 500 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಲಾಗುವುದು ಎಂದು ಹೇಳಿದ್ದಾರೆ.
ಈ ವೇಳೆ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ, ಶಾಸಕರಾದ ಶ್ರೀ ಡಾ.ಅಜಯ್ ಧರ್ಮಸಿಂಗ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀಮತಿ ರಜನೀಶ್ ಗೋಯಲ್, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ರಿತೇಶ್ ಕುಮಾರ್ ಸಿಂಗ್, ಆಯುಕ್ತರಾದ ಶ್ರೀಮತಿ ಬಿ.ಬಿ ಕಾವೇರಿ ಸೇರಿದಂತೆ ಇಲಾಖೆಗೆ ಸಂಬಂಧಿಸಿದ ಅನೇಕ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.