ಬೆಂಗಳೂರು: ರಾಜ್ಯದಲ್ಲಿ ಇನ್ಮುಂದೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸೋ ವಿದ್ಯಾರ್ಥಿಗಳಿಗೆ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಅದೇನೆಂದ್ರೆ ಇನ್ಮುಂದೆ ಲ್ಯಾಪ್ ಟಾಪ್ ಬದಲಾಗಿ ರೂ.50,000 ಪ್ರೋತ್ಸಾಹಧನ ನೀಡಲು ನಿರ್ಧರಿಸಿದೆ.
ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ 2025-26ನೇ ಸಾಲಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ರಾಜ್ಯ ವಲಯದ ಆಯವ್ಯಯದಲ್ಲಿ “ಗುಣಮಟ್ಟ ಭರವಸೆ ಮತ್ತು ವಿದ್ಯಾರ್ಥಿ ಪ್ರೇರಣಾ ಉಪಕ್ರಮ” ಲೆಕ್ಕಶೀರ್ಷಿಕ 2202-01-109-0-10 ರ ಉಪ ಲೆಕ್ಕಶೀರ್ಷಿಕೆ 015 ರಲ್ಲಿ ಸರ್ಕಾರಿ ಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲಾ / ತಾಲ್ಲೂಕು ಹಂತದಲ್ಲಿ ಅತೀ ಹೆಚ್ಚು ಅಂಕ ಪಡೆದ 3 ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆಗಾಗಿ ರೂ.325.00 ಅನುಷ್ಠಾನಗೊಳಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಲಾಗಿದೆ.
ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, ಬೆಂಗಳೂರು, ಇವರ ಪುಸ್ತಾವನೆಯಲ್ಲಿ 2024-25-3 ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಅತೀ ಹೆಚ್ಚು ಅಂಕ ಪಡೆದ ಪ್ರತೀ ತಾಲ್ಲೂಕಿನ 03 ವಿದ್ಯಾರ್ಥಿಗಳಿಗೆ ಹಾಗೂ ಪ್ರತಿ ಜಿಲ್ಲೆಯಲ್ಲಿ ಅತೀ ಹೆಚ್ಚು ಅಂಕ ಪಡೆದ 03 ವಿದ್ಯಾರ್ಥಿಗಳಿಗೆ “ಗುಣಮಟ್ಟ ಭರವಸೆ ಮತ್ತು ವಿದ್ಯಾರ್ಥಿ ಪ್ರೇರಣಾ ಉಪಕ್ರಮ” ಕ್ರಿಯಾ ಯೋಜನೆಯ ಪ್ರೋತ್ಸಾಹಕ ಕಾರ್ಯಕ್ರಮದಡಿಯಲ್ಲಿ ಲ್ಯಾಪ್‌ಟಾಪ್‌ಗಳನ್ನು ವಿತರಿಸುವ ಪದ್ಧತಿ ಪ್ರಸ್ತುತ ಜಾರಿಯಲ್ಲಿದ್ದು, ಸದರಿ ಲ್ಯಾಪ್‌ಟಾಪ್ ವಿತರಿಸುವ ಬದಲು ನಗದು ಪುರಸ್ಕಾರವನ್ನು DBT ಮೂಲಕ ವಿತರಿಸುವ ಸಂಬಂಧ ಸರ್ಕಾರದ ಅನುಮೋದನೆ ನೀಡುವಂತೆ ಕೋರಿರುತ್ತಾರೆ.
ಮಾನ್ಯ ಮುಖ್ಯಮಂತ್ರಿಗಳು ದಿನಾಂಕ:14.11.2025 ರಂದು ಬ್ಯಾಂಕ್ವೆಟ್ ಹಾಲ್, ವಿಧಾನಸೌಧ ಬೆಂಗಳೂರು ಇಲ್ಲಿ ನಡೆದ ರಾಜ್ಯ ಮಟ್ಟದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಯೋಜನೆಗೆ ಚಾಲನೆ ನೀಡಿರುತ್ತಾರೆ.
ಪುಸ್ತಾವನೆಯಲ್ಲಿನ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ, 2024-25ನೇ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಅತೀ ಹೆಚ್ಚು ಅಂಕ ಪಡೆದ ಪ್ರತಿ ತಾಲ್ಲೂಕಿನ 03 ವಿದ್ಯಾರ್ಥಿಗಳಿಗೆ ಹಾಗೂ ಪ್ರತೀ ಜಿಲ್ಲೆಯಲ್ಲಿ ಅತೀ ಹೆಚ್ಚು ಅಂಕ ಪಡೆದ 03 ವಿದ್ಯಾರ್ಥಿಗಳಿಗೆ “ಗುಣಮಟ್ಟ ಭರವಸೆ ಮತ್ತು ವಿದ್ಯಾರ್ಥಿ ಪ್ರೇರಣಾ ಉಪಕ್ರಮ” ಕ್ರಿಯಾ ಯೋಜನೆಯ ಪ್ರೋತ್ಸಾಹಕ ಕಾರ್ಯಕ್ರಮದ ಅನುಷ್ಠಾನಕ್ಕೆ ನಿಗದಿಯಾಗಿರುವ ರೂ.325.00 ಲಕ್ಷಗಳಲ್ಲಿ ಲ್ಯಾಪ್‌ಟಾಪ್‌ಗಳನ್ನು ವಿತರಿಸುವ ಬದಲು ಒಟ್ಟು 758 ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವಾಗಿ ಪ್ರತಿ ವಿದ್ಯಾರ್ಥಿಗೆ ರೂ.50,000.00 ಗಳ ಮೊತ್ತವನ್ನು State Scholarship Portal (SSP) ಮೂಲಕ ವಿದ್ಯಾರ್ಥಿಗಳ ಆಧಾರ್ ಸಂಖ್ಯೆ, ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ DBT ಮೂಲಕ ವಿತರಿಸಲು ಮತ್ತು ಕೊರತೆಯಾಗುವ ಅನುದಾನವನ್ನು ಮಂಡಲಿಯ ಸ್ವಂತ ಮೂಲಗಳಿಂದ ಭರಿಸಲು ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, ಬೆಂಗಳೂರು ಇವರಿಗೆ ಅನುಮತಿ ನೀಡಿ ಆದೇಶಿಸಿದ್ದಾರೆ.
ಈ ಕಾರ್ಯಕ್ರಮದ ಅನುಷ್ಠಾನಕ್ಕೆ ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, ಬೆಂಗಳೂರು ಇವರು ಪಾಲಿಸಬೇಕಾದ ಷರತ್ತುಗಳು ಮತ್ತು ನಿಬಂಧನೆಗಳು :
1. ಬಿಡುಗಡೆ ಮಾಡಲಾಗಿರುವ ಅನುದಾನದ ಬಳಕೆಯ ಬಗ್ಗೆ ಸಂಬಂಧಿಸಿದ ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, ಇವರು ನಿಯಮಾನುಸಾರ ಲೆಕ್ಕ ಪತ್ರಗಳನ್ನು ಇಡತಕ್ಕದ್ದು. 2. ಅರ್ಹತೆಗೆ ಅನುಗುಣವಾಗಿ ನಗದು ಪುರಸ್ಕಾರವನ್ನು ಕಡ್ಡಾಯವಾಗಿ State Scholarship Porlal ಮೂಲಕ ವಿದ್ಯಾರ್ಥಿಗಳ ಆಧಾರ್ ಸಂಖ್ಯೆ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ DBT ಮೂಲಕವೇ ಪಾವತಿಸಲು ಕ್ರಮವಹಿಸತಕ್ಕದ್ದು.
3. ನಗದು ಪುರಸ್ಕಾರವನ್ನು DBT ಮೂಲಕ ವಿತರಿಸುವಾಗ ಈಗಾಗಲೇ ಪುರಸ್ಕಾರ ವಿತರಿಸಿರುವ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದ ವಿದ್ಯಾರ್ಥಿಗಳಿಗೆ ವಿತರಿಸಲು ಕ್ರಮವಹಿಸತಕ್ಕದ್ದು 4. ವರ್ಷಾಂತ್ಯದಲ್ಲಿ ಕಡ್ಡಾಯವಾಗಿ ಇಲಾಖಾ ಮುಖ್ಯಸ್ಥರು ಉಪಯೋಗಿತಾ ಪ್ರಮಾಣ ಪತ್ರ (Utilisation certificate), ಅನುದಾನ ಬಳಕೆಯ ವಿವರವನ್ನು ಸರ್ಕಾರಕ್ಕೆ ಒದಗಿಸತಕ್ಕದ್ದು.. 5. ನಗದು ಪುರಸ್ಕಾರದ ಅನುದಾನ ಬಿಡುಗಡೆ ಸಂಬಂಧ ತಮ್ಮ ಹಂತದಲ್ಲಿ ಹೊರಡಿಸುವ ಜ್ಞಾಪನಾ, ಸದರಿ ಆದೇಶದ ಪ್ರತಿ ಮತ್ತು ಪುರಸ್ಕೃತ ವಿದ್ಯಾರ್ಥಿಗಳ ತಾಲ್ಲೂಕುವಾರು, ಜಿಲ್ಲಾವಾರು ಪಟ್ಟಿಯನ್ನು ನ್ನು ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಇವರು ತಮ್ಮ ಇಲಾಖಾ ವೆಬ್‌ಸೈಟ್‌ನಲ್ಲಿ ಕಡ್ಡಾಯವಾಗಿ ಪಕಟಿಸುವುದು.
6. ಯಾವ ಉದ್ದೇಶಕ್ಕೆ ಅನುದಾನ ಬಿಡುಗಡೆಗೊಳಿಸಲಾಗಿದೆಯೋ ಅದೇ ಉದ್ದೇಶಕ್ಕೆ ಅನುದಾನ ಬಳಕ್ಕೆ ಮಾಡತಕ್ಕದ್ದು.
7. ಮೇಲ್ಕಂಡಂತೆ ಬಿಡುಗಡೆಗೊಳಿಸಿರುವ ಅನುದಾನದ ಅಡಿಯಲ್ಲಿ ಭರಿಸಲಾಗುವ ವೆಚ್ಚದ ವಿವರಗಳನ್ನು ಅವಲೋಕನ ತಂತ್ರಾಂಶದಲ್ಲಿ (ಹೊಸ ಡಿಸಿಷನ್ ಸಪೋರ್ಟಿಂಗ್ ಸಿಸ್ಟಂ) ಅಂಕಿ-ಅಂಶಗಳನ್ನು ಇಂದೀಕರಿಸತಕ್ಕದ್ದು ಎಂದಿದ್ದಾರೆ.









