ಚನ್ನಪಟ್ಟಣ: ಎಂದಿನಿಂದ ಬಸ್ ವ್ಯವಸ್ಥೆ ಮಾಡುತ್ತೀರಾ, ಸೋಮವಾರದಿಂದಲೇ ಈ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಆಗಬೇಕು..” ಇದು ‘ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದಲ್ಲಿ ಬಸ್ ವ್ಯವಸ್ಥೆ ಇಲ್ಲ ಎಂಬ ವಿದ್ಯಾರ್ಥಿನಿಯರ ಮನವಿಗೆ ಸ್ಪಂದಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ ಪರಿ.
ಬೇವೂರು ಮತ್ತು ತಿಟ್ಟಮಾರನಹಳ್ಳಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಜನರ ಅರ್ಜಿಗಳನ್ನು ಸ್ವೀಕರಿಸಿ ಪರಿಹಾರ ನೀಡುವ ಭರವಸೆ ನೀಡಿದರು.
ಸಿದ್ದರಾಮೇಶ್ವರ ಕಾಲೇಜು ಹಾಗೂ ಇತರೆ ಸರ್ಕಾರಿ ಶಾಲೆಗಳ 20 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು “ಸರ್ ನಮಗೆ ಸಮಯಕ್ಕೆ ಸರಿಯಾಗಿ ಬಸ್ ಇಲ್ಲ. ಚನ್ನಪಟ್ಟಣದಿಂದ ಮಲ್ಲನಕುಪ್ಪೆಗೆ ಪ್ರತಿದಿನ 9 ಗಂಟೆಗೆ ತಲುಪುವಂತೆ ಬಸ್ ವ್ಯವಸ್ಥೆ ಕಲ್ಪಿಸಿ” ಎಂದು ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಶಿವಕುಮಾರ್ ಅವರು “ನಮ್ಮ ಹೆಣ್ಣು ಮಕ್ಕಳು ಧೈರ್ಯ, ಓದುವ ಛಲದಿಂದ ಇಲ್ಲಿಯವರೆಗೂ ಬಂದಿದ್ದಾರೆ. ನಿಮ್ಮ ಅಧಿಕಾರಿಗೆ ಹೇಳಿ” ಎಂದು ಪಕ್ಕದಲ್ಲಿದ್ದ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರಿಗೆ ಹೇಳಿದರು. ಆಗ ಕೆಎಸ್ ಆರ್ ಟಿಸಿ ಅಧಿಕಾರಿಯನ್ನು ಕರೆದ ಸಾರಿಗೆ ಸಚಿವರಾದ ರಾಮಲಿಂಗರೆಡ್ಡಿ ಅವರು “ಸೋಮವಾರವೇ ಬಸ್ ಬರಬೇಕು. ಈ ವಿದ್ಯಾರ್ಥಿನಿಯರ ಸಮಸ್ಯೆ ಬಗೆಹರಿಸಬೇಕು” ಎಂದು ಸ್ಪಷ್ಟ ಸೂಚನೆ ನೀಡಿದರು.
ಕೆಲಸ ಮಾಡದೆ ಏನು ಮಾಡುತ್ತಿದ್ದಾರೆ
ಕಾವೇರಿ ನೀರಾವರಿ ನಿಗಮದವರು ಜಮೀನುಗಳಿಗೆ ರಸ್ತೆ ನಿರ್ಮಾಣ ಮಾಡಿದ್ದು, ಅದನ್ನು ಒಂದಷ್ಟು ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ತೊಂದರೆ ಕೊಡುತ್ತಿದ್ದಾರೆ ಎಂದು ನಾಗವಾರ ಶ್ರೀಧರ್ ಮನವಿ ಸಲ್ಲಿಸಿದಾಗ, “”ಜಿಲ್ಲಾಧಿಕಾರಿಗಳೇ, ಇಂತಹ ಸಣ್ಣ ಸಮಸ್ಯೆಗಳನ್ನು ಬಗೆಹರಿಸದ ಅಧಿಕಾರಿಗಳು ಪ್ರತಿ ದಿನ ಏನು ಕೆಲಸ ಮಾಡುತ್ತಾರೆ” ಎಂದು ಡಿಸಿಎಂ ಕಿಡಿಯಾದರು.
ನನಗೆ ಹಾವು ಕಚ್ಚಿದ ಕಾರಣ ಎರಡು ಬೆರಳುಗಳನ್ನು ಕತ್ತರಿಸಿ ಹಾಕಿದ್ದಾರೆ. ಗಂಡ ತೀರಿ ಹೋಗಿದ್ದು ಅಂಗನವಾಡಿಯಲ್ಲಿ ಕೆಲಸ ಹಾಗೂ ವಿಧವಾ ವೇತನ ಹೆಚ್ಚಳ ಮಾಡಬೇಕು ಎಂದು ಬೇವೂರು ನಿವಾಸಿ ಲೀಲಾ ಅವರ ಮನವಿ ಆಲಿಸಿದ ನಂತರ “ದಿಗ್ವಿಜಯ ಬೊಡಕೆ ಅವರೇ ಈ ಮಹಿಳೆಗೆ ಆದಷ್ಟು ಬೇಗ ನೆರವು ನೀಡಿ. ನನಗೆ ವರದಿ ನೀಡಿ” ಎಂದು ಜಿಲ್ಲಾ ಪಂಚಾಯತಿ ಮುಖ್ಯಾಧಿಕಾರಿಗೆ ಸೂಚಿಸಿದರು.
ನನ್ನ ಮೇಲೆ ಮೂರು ಸುಳ್ಳು ಕೇಸುಗಳನ್ನು ಹಾಕಿದ್ದು ಮಾನಸಿಕ ಕಿರುಕುಳವಾಗುತ್ತಿದೆ ದಯವಿಟ್ಟು ಬಗೆಹರಿಸಿ ಕೊಡಿ ಎಂದು ಚನ್ನಪಟ್ಟಣದ ಎನ್ ಎಸ್ ಯುಐ ಅಧ್ಯಕ್ಷ ಅಭಿಷೇಕ್ ಮನವಿಗೆ “ಡಿವೈಎಸ್ ಪಿ ಅವರೇ ನಮ್ಮ ಪಕ್ಷದ ಕಾರ್ಯಕರ್ತರ ಸ್ಥಿತಿಯೇ ಹೀಗಾದರೆ ಹೇಗೆ? ಬೇಗ ಬಗೆಹರಿಸಿ” ಎಂದು ಸೂಚನೆ ನೀಡಿದರು.
ನಾವು ಮನೆಯಲ್ಲಿ ಐದಾಳುಗಳು ಇದ್ದೇವೆ. ಈಗ ಇರುವ ಚಿಕ್ಕಮನೆ ಬಿದ್ದು ಹೋಗುವ ಸ್ಥಿತಿಯಲ್ಲಿದ್ದು, ಮನೆಕೊಡಿ ಎಂದು ದೇವರ ಮಂಡ್ಯ ಗ್ರಾಮದ ಚಂದ್ರಮ್ಮ ಕಣ್ಣೀರು ಹಾಕಿದಾಗ “ಅಳಬೇಡಮ್ಮ ನಾನು ಈಗ ನಿಮ್ಮ ಊರಿಗೆ ಬಂದಿದ್ದೇನಲ್ಲ, ಎಲ್ಲ ಸಮಸ್ಯೆ ಬಗೆಹರಿಸುತ್ತೇನೆ” ಎಂದು ಧೈರ್ಯ ತುಂಬಿದರು.
ಸಂತೆಯಲ್ಲಿ ಕಟ್ಟಿರುವ ಶೆಡ್ ಅಲ್ಲಿ ವಾಸವಾಗಿ ಇದ್ದೇನೆ ಎಂದು ಬೇವೂರು ಸಂತೆಮಾಳದ ಅಲಮೇಲಮ್ಮ ಅವರ ಮಾತುಗಳನ್ನು ಆಲಿಸಿದ ಡಿಸಿಎಂ ಅವರು “ಯಾವುದೇ ಚಿಂತೆ ಮಾಡಬೇಡಿ. ಪ್ರತಿ ಪಂಚಾಯತಿ ಮಟ್ಟದಲ್ಲಿ ಆದಷ್ಟು ಬೇಗ ಮನೆ ಹಂಚಿಕೆ ಮಾಡುತ್ತೇವೆ” ಎಂದು ಭರವಸೆ ನೀಡಿದರು.
ಚನ್ನಪಟ್ಟಣದಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು ಕೊಡಿ ಎಂದು ಮಾಕಳಿ ಗ್ರಾಮ ಪಂಚಾಯತಿಯ ಸೂರಜ್ ಮನವಿಗೆ “ನಿಮ್ಮ ಕಷ್ಟ ನಿವಾರಣೆ ಮಾಡಲೆಂದೇ ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇನೆ. ಉದ್ಯೋಗ, ಮನೆ, ಭೂಮಿ ಎಲ್ಲಾ ಸಮಸ್ಯೆ ಬಗೆಹರಿಸುತ್ತೇನೆ” ಎಂದರು.
ಎರಡು ಪಂಚಾಯತಿಗಳು ಸೇರಿ 3 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ನಾಗರೀಕರು ಸಲ್ಲಿಸಿದರು. ಬಗರ್ ಹುಕುಂ ಜಮೀನು, ನಿವೇಶನ, ಉತ್ತಮ ರಸ್ತೆ, ಬಸ್ ವ್ಯವಸ್ಥೆಗಾಗಿ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು.
ಜುಲೈ 2ನೇ ವಾರದಲ್ಲಿ ಬೆಂಗಳೂರಿನ ‘ಯಲಹಂಕದ ಅನಿಲ ವಿದ್ಯುತ್ ಘಟಕ’ ಲೋಕಾರ್ಪಣೆ: ಸಚಿವ ಕೆ.ಜೆ ಜಾರ್ಜ್
ವಿದ್ಯಾರ್ಥಿಗಳೇ ಗಮನಿಸಿ: ಜುಲೈ.13, 14ರಂದು ನಿಗದಿ ಪಡಿಸಿದ್ದ ‘PG CET-2024ರ ಪರೀಕ್ಷೆ’ ಮುಂದೂಡಿಕೆ