ಮಂಡ್ಯ: ಕಳೆದ ಎರಡು ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಇಂದೇ ಜಮಾ ಮಾಡಲಾಗುವುದು. ಎರಡು ತಿಂಗಳ ಹಣ ಇಂದು ಮನೆ ಒಡತಿಯರ ಬ್ಯಾಂಕ್ ಅಕೌಂಟ್ ಗೆ ಜಮಾ ಆಗಲಿದ್ದು, ಇದರ ಬಗ್ಗೆ ಗೊಂದಲ ಬೇಡ. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ ಎಂಬುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಈ ಮೂಲಕ ರಾಜ್ಯದ ಯಜಮಾನಿ ಮಹಿಳೆಯರಿಗೆ ಸಿಹಿಸುದ್ದಿಯನ್ನು ನೀಡಿದ್ದಾರೆ.
ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಮುಂದಾಳತ್ವದಲ್ಲಿ ಮಂಡ್ಯದಲ್ಲಿ ಮಂಗಳವಾರ ನಡೆದ ಜನಾಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರ 10 ವರ್ಷದಿಂದ ಅಧಿಕಾರದಲ್ಲಿದ್ದರೂ ಕರ್ನಾಟಕಕ್ಕೆ ಅವರ ಕೊಡುಗೆ ಶೂನ್ಯ. ತಮ್ಮ ವೈಫಲ್ಯವನ್ನು ಮುಚ್ಚಿಹಾಕಿಕೊಳ್ಳಲು ಇಂದು ಬಿಜೆಪಿ ಪಾದಯಾತ್ರೆ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ ಎಂದರು.
ಬಿಜೆಪಿ ಹಾಗೂ ಜೆಡಿಎಸ್ ಪಕ್ಷದವರು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವನ್ನು ಬೀಳಿಸುವ ಕನಸು ಕಾಣುತ್ತಿದ್ದಾರೆ. ಕರ್ನಾಟಕದ ಜನತೆಗೆ ಕೇಂದ್ರ ಸರ್ಕಾರ ಮೋಸ ಮಾಡುತ್ತಲೇ ಬಂದಿದೆ ಎಂದರು.
ತನ್ನ ಗರ್ಭದಲ್ಲಿ ಭ್ರಷ್ಟಾಚಾರವನ್ನೇ ತುಂಬಿಕೊಂಡು, ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರು ಎನ್ನುವಂತಿರುವ ಬಿಜೆಪಿ ಮತ್ತು ಜೆಡಿಎಸ್ ನವರು ಕೇವಲ ಒಂದು ವರ್ಷದ ಹಿಂದೆ ಆಡಳಿತಕ್ಕೆ ಬಂದಿರುವ ನಮ್ಮ ಸರಕಾರದ ಮೇಲೆ ಇಲ್ಲದ ಆರೋಪಗಳನ್ನು ಮಾಡುವ ಮೂಲಕ ಜನಪರ ಆಡಳಿತ ನಡೆಸುವುದಕ್ಕೆ ಸಹಕಾರ ನೀಡುವ ಬದಲು ವಿನಾಕಾರಣ ಅಡ್ಡಿ ಉಂಟು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಎರಡನೇ ಬಾರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿರುವುದನ್ನು ಸಹಿಸದ ಬಿಜೆಪಿ-ಜೆಡಿಎಸ್ ಪಕ್ಷದವರು, ಇಂದು ಇಲ್ಲ ಸಲ್ಲದ ಆರೋಪ ಮಾಡುವ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಸರ್ಕಾರವನ್ನು ಅಸ್ಥಿರಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಇಂದಿರಾಗಾಂಧಿ ಪ್ರಧಾನಿಯಾಗಿದ್ದ ವೇಳೆ ಬ್ಯಾಂಕ್ ಗಳನ್ನು ರಾಷ್ಟ್ರೀಕರಣ ಮಾಡಿ, ಜನ ಸಾಮಾನ್ಯರಿಗೂ ಸಾಲ ಸಿಗುವಂತೆ ಮಾಡಿದರು. ಆದರೆ, ಇಂದಿನ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ದೇಶದ ಬ್ಯಾಂಕ್ ಗಳನ್ನೇ ಖಾಸಗೀಕರಣ ಮಾಡುತ್ತಿದೆ. ದೇಶದ ಶ್ರೀಮಂತರ ಪರವಾಗಿ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಿಡಿ ಕಾರಿದರು.
ಕುಮಾರಸ್ವಾಮಿ ನೈತಿಕತೆ ಇಲ್ಲದ ರಾಜಕಾರಣಿ
ನಮ್ಮ ಕುಟುಂಬಕ್ಕೆ ವಿಷ ಹಾಕಿದ ಹಾಸನದ ಮಾಜಿ ಶಾಸಕ ಪ್ರೀತಂ ಗೌಡ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳುತ್ತಿದ್ದ ಕುಮಾರಸ್ವಾಮಿ ಅವರು ಪ್ರಜ್ವಲ್ ರೇವಣ್ಣ ಅವರಿಂದ ಅವಮಾನವಾಗಿರುವ ನೂರಾರು ಮಹಿಳೆಯರ ಬಗ್ಗೆ ಯೋಚಿಸುತ್ತಿಲ್ಲ. ಇಂದೆಥಾ ನ್ಯಾಯ. ಇದನ್ನು ನೋಡಿದರೆ ಕುಮಾರಸ್ವಾಮಿ ಒಬ್ಬ ನೈತಿಕತೆ ಇಲ್ಲದ ರಾಜಕಾರಣಿ ಎಂದು ಟೀಕಾ ಪ್ರಹಾರ ನಡೆಸಿದರು.
ಈ ಹಿಂದೆ ವಿಧಾನ ಪರಿಷತ್ ನಲ್ಲಿ ಬಿಎಸ್ ಯಡಿಯೂರಪ್ಪ ಅವರೇ, ಮುಡಾದಲ್ಲಿ ದೇವೇಗೌಡ, ಕುಮಾರಸ್ವಾಮಿ ಕುಟುಂಬಕ್ಕೆ ಸೈಟ್ ಹಂಚಲಾಗಿದೆ ಎಂದು ಆರೋಪಿಸಿದ್ದರು. ಆದರೆ, ಈಗ ಕುಮಾರಸ್ವಾಮಿ, ವಿಜಯೇಂದ್ರ ಅವರೇ ಒಟ್ಟಾಗಿ ಪಾದಯಾತ್ರೆ ನಡೆಸುತ್ತಿರುವುದು ವಿಪರ್ಯಾಸ ಎಂದರು.
ಈ ವೇಳೆ ಸಚಿವರಾದ ಕೆ.ಎಚ್.ಮುನಿಯಪ್ಪ, ಬೋಸರಾಜು, ಚಲುವರಾಯಸ್ವಾಮಿ, ಕೃಷ್ಣ ಬೈರೇಗೌಡ, ಡಿ.ಸುಧಾಕರ್, ರಾಮಲಿಂಗ ರೆಡ್ಡಿ, ಪ್ರಿಯಾಂಕ್ ಖರ್ಗೆ, ಶರಣ್ ಪ್ರಕಾಶ್ ಪಾಟೀಲ್, ಸಂತೋಷ್ ಲಾಡ್, ಬೈರತಿ ಸುರೇಶ್ ಮಾಜಿ ಸಚಿವರಾದ ರಮಾನಾಥ್ ರೈ, ವಿನಯ್ ಕುಮಾರ್ ಸೊರಕೆ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಪುಷ್ಪ ಅಮರ್ ನಾಥ್, ರಾಜ್ಯಸಭಾ ಸದಸ್ಯರಾದ ಜಿ.ಸಿ.ಚಂದ್ರಶೇಖರ್, ಶಾಸಕರಾದ ರವಿಕುಮಾರ್ ಗಣಿಗ, ಎಚ್.ಸಿ. ಬಾಲಕೃಷ್ಣ, ಟಿ.ರಘುಮೂರ್ತಿ, ಗೋವಿಂದಪ್ಪ, ರಮೇಶ್ ಬಾಬು ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ್ ರಾಥೋಡ್, ನಾಗರಾಜ್ ಯಾದವ್, ಐವಾನ್ ಡಿಸೋಜ, ಮಧು ಮಾದೇಗೌಡ, ಮುಖ್ಯಮಂತ್ರಿಗಳ ಕಾರ್ಯದರ್ಶಿ ನಸೀರ್ ಅಹಮದ್, ಗ್ಯಾರಂಟಿ ಯೋಜನೆಗಳ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
BREAKING : ಸಾಗರದಲ್ಲಿ ಹೊತ್ತಿ ಉರಿದ ಸರ್ಕಾರಿ ಬಸ್ : ಪ್ರಾಣಾಪಾಯದಿಂದ ಪ್ರಯಾಣಿಕರು ಪಾರು