ಬೆಂಗಳೂರು : ರಾಜ್ಯ ಸರ್ಕಾರವು ಕ್ರೀಡಾಪಟುಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಸಿವಿಲ್ ಸೇವೆಗಳ ನೇರ ನೇಮಕಾತಿಗೂ ಕ್ರೀಡಾಪಟುಗಳಿಗೆ ಶೇ. 2ರಷ್ಟು ಮೀಸಲಾತಿ ಒದಗಿಸುವ ಸಂಬಂಧ ಗಜೆಟ್ ಅಧಿಸೂಚನೆ ಪ್ರಕಟಿಸಿದೆ.
ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 2024ಕ್ಕೆ ಮತ್ತಷ್ಟು ತಿದ್ದುಪಡಿ ಮಾಡಲು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ 1978 (1990ರ ಕರ್ನಾಟಕ ಅಧಿನಿಯಮ ಸಂಖ್ಯೆ: 14)ರ 3ನೇ ಪ್ರಕರಣದ 2(ಎ) ಉಪ ಪ್ರಕರಣವನ್ನು ಪ್ರಕರಣ 8 ರೊಂದಿಗೆ ಓದಿಕೊಂಡು ಅದರಲ್ಲಿ ಅಗತ್ಯಪಡಿಸಲಾದಂತೆ, ಕರಡು ನಿಯಮಗಳನ್ನು ದಿನಾಂಕ:15.02.2024ರ ರಾಜ್ಯ ಪತ್ರ ವಿಶೇಷ ಸಂಚಿಕೆಯ ಭಾಗ-IV-ಎ (ನಂ.84) ರಲ್ಲಿ ಅಧಿಸೂಚನೆ ಸಂಖ್ಯೆ:ಸಿಆಸುಇ 295 ಸನನಿ 2023, ದಿನಾಂಕ:15.02.2024ರಲ್ಲಿ ಪ್ರಕಟಿಸಿ ಅದರಿಂದ ಬಾಧಿತರಾಗಬಹುದಾದಂತಹ ವ್ಯಕ್ತಿಗಳಿಂದ ಅಧಿಕೃತ ರಾಜ್ಯಪತ್ರದಲ್ಲಿ ಆ ಕರಡು ನಿಯಮಗಳು ಪ್ರಕಟವಾದ ದಿನಾಂಕದಿಂದ 15 ದಿನಗಳ ಒಳಗಾಗಿ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿರುವುದರಿಂದ,
ಮತ್ತು, ಸದರಿ ರಾಜ್ಯಪತ್ರವನ್ನು ದಿನಾಂಕ:15ನೇ ಫೆಬ್ರವರಿ 2024ರಂದು ಸಾರ್ವಜನಿಕರಿಗೆ ದೊರೆಯುವಂತೆ ಮಾಡಲಾಗಿರುವುದರಿಂದ,
ಮತ್ತು ಸ್ವೀಕೃತವಾಗಿರುವ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ರಾಜ್ಯ ಸರ್ಕಾರವು ಪರಿಗಣಿಸಿರುವುದರಿಂದ,
ಪ್ರಸ್ತುತ, ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ 1978 (1990ರ ಕರ್ನಾಟಕ ಅಧಿನಿಯಮ ಸಂಖ್ಯೆ: 14)ರ 3ನೇ ಪ್ರಕರಣದ 1ನೇ ಉಪ ಪ್ರಕರಣವನ್ನು 8ನೇ ಪ್ರಕರಣದೊಂದಿಗೆ ಓದಿಕೊಂಡಂತೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಕೆಳಗಿನ ನಿಯಮಗಳನ್ನು ರಚಿಸುತ್ತದೆ, ಎಂದರೆ:-
ನಿಯಮಗಳು
1. ಶೀರ್ಷಿಕೆ ಮತ್ತು ಪ್ರಾರಂಭ:- (1) ಈ ನಿಯಮಗಳನ್ನು ಕರ್ನಾಟಕ ಸಿವಿಲ್ ಸೇವಾ (ಸಾಮಾನ್ಯ ನೇಮಕಾತಿ) (ತಿದ್ದುಪಡಿ) ನಿಯಮಗಳು, 2024 ಎಂದು ಕರೆಯತಕ್ಕದ್ದು,
(2) ಈ ನಿಯಮಗಳು ಅಧಿಕೃತ ರಾಜ್ಯಪತ್ರದಲ್ಲಿ ಅಂತಿಮ ಪ್ರಕಟಣೆಯ ದಿನಾಂಕದಿಂದ ಜಾರಿಗೆ ಬರತಕ್ಕದ್ದು,
ನಿಯಮ 9ಕ್ಕೆ ತಿದ್ದುಪಡಿ:- ಕರ್ನಾಟಕ ನಾಗರಿಕ ಸೇವೆಗಳ (ಸಾಮಾನ್ಯ
2. ನೇಮಕಾತಿ)ನಿಯಮಗಳು, 1977 ರಲ್ಲಿ ನಿಯಮ 9 ರ ಉಪ-ನಿಯಮ (1), ಖಂಡ (1D) ನಂತರ ಈ ಕೆಳಕಂಡಂತೆ ಸೇರಿಸತಕ್ಕದ್ದು:-
“(1E) ಯಾವುದೇ ಸೇವೆಯ ಅಥವಾ ಹುದ್ದೆಯ ಸಂಬಂಧದಲ್ಲಿ ರಚಿಸಿದ ನೇಮಕಾತಿ ನಿಯಮಗಳಲ್ಲಿ ಏನೇ ಒಳಗೊಂಡಿದ್ದರೂ ಮತ್ತು ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸುವ ಸಾಮಾನ್ಯ ಸೂಚನೆಗಳಿಗೆ ಒಳಪಟ್ಟು ಅಂಥ ನೇಮಕಾತಿ ನಿಯಮಗಳಲ್ಲಿ ನೇರ ನೇಮಕಾತಿಯನ್ನು ಒಂದು ವಿಧಾನವನ್ನಾಗಿ ನಿಗದಿಪಡಿಸಿದ್ದಲ್ಲಿ ಅಂಥ ವಿಧಾನದ ಮೂಲಕ ನೇಮಕ ಮಾಡುವುದಕ್ಕಾಗಿ ಸಾಮಾನ ವರ್ಗ, ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳ ಪ್ರತಿಯೊಂದು ಪ್ರವರ್ಗದಿಂದಲೂ ಪ್ರತಿ ಇಲಾಖೆಯ ಮಂಜೂರಾದ ವೃಂದ ಬಲದ ಶೇಕಡಾ ಎರಡರಷ್ಟು ಹುದ್ದೆಗಳನ್ನು ಕ್ರೀಡಾ ಸಾಧಕ ಅಭ್ಯರ್ಥಿಗಳಿಗೆ ಮೀಸಲಿರಿಸತಕ್ಕದ್ದು.