ಬೆಂಗಳೂರು : ವಿದ್ಯಾವಿಕಾಸ ಯೋಜನೆಯಡಿ 2024-25ನೇ ಸಾಲಿಗೆ ಎಲ್ಲಾ ವಿಭಾಗದ ಜಿಲ್ಲೆಗಳ ಸರ್ಕಾರಿ ಶಾಲಾ ಮಕ್ಕಳಿಗೆ ಎರಡು ಜೊತೆ ಉಚಿತ ಸಮವಸ್ತ್ರ ಬಟ್ಟೆ ಸರಬರಾಜು ಮಾಡುವ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
2024-25ನೇ ಸಾಲಿಗೆ ವಿಧ್ಯಾವಿಕಾಸ ಯೋಜನೆಯಡಿ ರಾಜ್ಯದಲ್ಲಿನ ಎಲ್ಲಾ ಜಿಲ್ಲೆಗಳ 1 ರಿಂದ 10ನೇ ತರಗತಿಯ ಸರ್ಕಾರಿ ಶಾಲಾ ಮಕ್ಕಳಿಗೆ ಕೆಳಕಂಡ ಸಂಸ್ಥೆಗಳ ಮೂಲಕ ಎರಡುಜೊತೆ ಉಚಿತ ಸಮವಸ್ತ್ರ ಬಟ್ಟೆಗಳ ಸರಬರಾಜು ಕಾರ್ಯಕ್ರಮವನ್ನು ಕೈಗೊಳ್ಳಲಾಗಿರುತ್ತದೆ.
2024-25ನೇ ಸಾಲಿಗೆ ಮೇಲಿನ ಕೋಷ್ಟಕದಲ್ಲಿ ವಿವರಿಸಿರುವಂತೆ ವಿವಿಧ ಸಂಸ್ಥೆಗಳಿಗೆ ಕಾರ್ಯಾದೇಶ ನೀಡಲಾಗಿದೆ. ಸಂಸ್ಥೆಗಳು ಈಗಾಗಲೇ ತಾಲ್ಲೂಕುಗಳಿಗೆ ಸಮವಸ್ತ್ರ ಸರಬರಾಜು ಕೈಗೊಂಡಿರುತ್ತಾರೆ.
1. ಸರ್ಕಾರಿ ಶಾಲೆಗಳಲ್ಲಿನ 1 ರಿಂದ 10 ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ಮಕ್ಕಳಿಗೆ ಅನುಬಂಧ-1 ರಲ್ಲಿ ಸೂಚಿಸಿರುವ ಕೋಷ್ಟಕದಂತೆ ವಿವಿಧ ಪರಿಷ್ಕೃತ ಅಳತೆಗಳಿಗನುಗುಣವಾಗಿ ಸಮವಸ್ತ್ರ ಬಟ್ಟೆಗಳನ್ನು ಸರಬರಾಜು ಮಾಡುತ್ತಾರೆ.
2. ಸಮವಸ್ತ್ರಬಟ್ಟೆಗಳನ್ನು ರಾಜ್ಯದಲ್ಲಿನ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗಳಿಗೆ ಸರಬರಾಜು ಮಾಡಬೇಕು. ತಾಲ್ಲೂಕು ಮಟ್ಟದವರೆಗೆ ಸರಬರಾಜು ಮಾಡುವ ಸಾಗಾಣಿಕೆ ವೆಚ್ಚ ಸರಬರಾಜು ಸಂಸ್ಥೆಯದ್ದಾಗಿರುತ್ತದೆ. 3. ತಾಲ್ಲೂಕುಗಳಿಂದ ಶಾಲೆಗಳಿಗೆ ಕ್ಷೇತ್ರಶಿಕ್ಷಣಾಧಿಕಾರಿಗಳು ಸಾಗಣಿಕೆ ಮಾಡಬೇಕಿದ್ದು, ಸದರಿ ಸಾಗಾಣಿಕಾ ವೆಚ್ಚವಾಗಿ ಪ್ರತಿ
ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ರೂ.20.000/-ದಂತೆ ಬಿಡುಗಡೆ ಮಾಡಲಾಗುತ್ತದೆ. 4. ಸಮವಸ್ತ್ರದ ಬಟ್ಟೆಯನ್ನು ಮಾತ್ರ ಸರ್ಕಾರದ ವತಿಯಿಂದ ಉಚಿತವಾಗಿ ನೀಡುತ್ತಿದ್ದು, ಹೊಲಿಗೆ ವೆಚ್ಚವನ್ನು ಫಲಾನುಭವಿ ಮಕ್ಕಳ ಪೋಷಕರೇ ಭರಿಸಬೇಕು.
[ಅ] ಉಪನಿರ್ದೇಶಕರು / ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಂತದಲ್ಲಿ ಸಮವಸ್ತ್ರಗಳ ಸರಬರಾಜು ಮತ್ತು ಬಳಕೆಯ ಬಗ್ಗೆ ನಿಬಂಧನೆಗಳು:-
01. ಅನುಬಂಧ-1ರ ಕೋಷ್ಟಕದಲ್ಲಿ ವಿವರಿಸಿರುವಂತೆ ವಿವಿಧ ಅಳತೆಗಳಲ್ಲಿ ಸಮವಸ್ತ್ರಗಳನ್ನು ತಾಲ್ಲೂಕುವಾರು, ತರಗತಿವಾರು 2022-23ನೇ ಸಾಲಿನ SATS ದಾಖಲಾತಿಯಂತೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಬಾಲಕ ಹಾಗೂ ಬಾಲಕಿಯರ ಸಮವಸ್ತ್ರ ಬಟ್ಟೆಗಳನ್ನು ಸೆಟ್ ರೂಪದಲ್ಲಿ ಸರಬರಾಜು ಮಾಡಲಾಗುತ್ತದೆ.
02. ಪ್ರಸ್ತುತ 1 ರಿಂದ 7 ನೇ ತರಗತಿಯ ಹೆಣ್ಣು ಮಕ್ಕಳಿಗೆ ಸ್ಕರ್ಟ್/ಲಂಗದ ರೂಪದಲ್ಲಿ ಹಾಗೂ 8 ರಿಂದ 10 ನೇ ತರಗತಿಯ ಹೆಣ್ಣು ಮಕ್ಕಳಿಗೆ ಚೂಡೀದಾರ್ ಸಮವಸ್ತ್ರ ಬಟ್ಟೆಯನ್ನು ವಿತರಿಸಲಾಗಿತ್ತಿದ್ದು, ವಿದ್ಯಾರ್ಥಿನಿಯರ ರಕ್ಷಣೆ ಹಾಗೂ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ 6 ಮತ್ತು 7ನೇ ತರಗತಿಯ ಹೆಣ್ಣು ಮಕ್ಕಳಿಗೂ ಚೂಡಿದಾರ್ ಸಮವಸ್ತ್ರ ಬಟ್ಟೆ ವಿತರಿಸಲಾಗಿತ್ತಿದೆ.