ಬೆಂಗಳೂರು: ರಾಜ್ಯದ ಶಾಲಾ ಮಕ್ಕಳಿಗೆ ಮಹತ್ವದ ಮಾಹಿತಿ ಎನ್ನುವಂತೆ 2025-26ನೇ ಸಾಲಿನ ಆರ್ ಟಿ ಇ ಅಡಿಯಲ್ಲಿ ದಾಖಲಾತಿಗೆ ಪರಿಷ್ಕೃತ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದೆ.
ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, 2025-26ನೇ ಸಾಲಿನ ಶಿಕ್ಷಣ ಹಕ್ಕು ಕಾಯಿದೆಯ ಸೆಕ್ಷನ್ 12(1)(ಬಿ) ಮತ್ತು 12(1)(ಸಿ) ಅಡಿ ಪ್ರವೇಶ ಪ್ರಕ್ರಿಯೆ ಸಂಬಂಧ ಉಲ್ಲೇಖ(10) ರನ್ವಯ ಮಾರ್ಗಸೂಚಿಗಳನ್ನೊಳಗೊಂಡಂತೆ ವೇಳಾಪಟ್ಟಿ ಸಹಿತ ಸುತ್ತೋಲೆ ಹೊರಡಿಸಲಾಗಿರುತ್ತದೆ ಎಂದಿದ್ದಾರೆ.
ಸದರಿ ಸುತ್ತೋಲೆಯಲ್ಲಿ ಸರ್ಕಾರದ ಆದೇಶ ಸಂಖ್ಯೆ: ಇಪಿ 100 ಪಿಜಿಸಿ 2024 ದಿನಾಂಕ:26.06.2024 ರನ್ವಯ ಎಲ್.ಕೆ.ಜಿ ತರಗತಿಗೆ ಕನಿಷ್ಟ ವಯೋಮಿತಿ 04 ವರ್ಷ ಮತ್ತು ಗರಿಷ್ಟ ವಯೋಮಿತಿ 06 ವರ್ಷಗಳಾಗಿದ್ದು ಮತ್ತು 01ನೇ ತರಗತಿಗೆ ಕನಿಷ್ಟ 06 ವರ್ಷ ಮತ್ತು ಗರಿಷ್ಮ 08 ವರ್ಷವೆಂದು ಆದೇಶವಾಗಿರುವಂತೆ ಮಕ್ಕಳಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಲಾಗಿರುತ್ತದೆ.
ಪುಸ್ತುತ ಉಲ್ಲೇಖ(11)ರ ಸರ್ಕಾರದ ಆದೇಶದಲ್ಲಿ ಶೈಕ್ಷಣಿಕ ವರ್ಷದ ಜೂನ್ 01ನೇ ತಾರೀಖಿಗೆ 06 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು 01ನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು 01 ಬಾರಿಯ ಕ್ರಮವಾಗಿ ಸಡಿಲಿಕೆ ನೀಡಿ ಪೂರ್ವ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿರುವ ಹಾಗೂ ಜೂನ್ 01ನೇ ತಾರೀಖಿಗೆ 05 ವರ್ಷ 05 ತಿಂಗಳು ಪೂರ್ಣಗೊಂಡಿರುವ ಮಕ್ಕಳನ್ನು 2025-26ನೇ ಶೈಕ್ಷಣಿಕ ವರ್ಷಕ್ಕೆ ಮಾತ್ರ 01ನೇ ತರಗತಿಗೆ ದಾಖಲು ಮಾಡಿಕೊಳ್ಳಲು ಆದೇಶಿಸಲಾಗಿದೆ. ಆದ್ದರಿಂದ ಸರ್ಕಾರದ ಆದೇಶದಂತೆ 2025 ರ ಜೂನ್ 01ನೇ ತಾರೀಖಿಗೆ 05 ವರ್ಷ 05 ತಿಂಗಳು ಪೂರ್ಣಗೊಂಡಿರುವ ಮಕ್ಕಳಿಗೂ ಸಹ 2025-26ನೇ ಸಾಲಿಗೆ ಆರ್.ಟಿ.ಇ. ಅಡಿ ಒಂದನೇ ತರಗತಿಗೆ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅದರಂತೆ ಅರ್ಜಿ ಸಲ್ಲಿಸಲು 07 ದಿನಗಳ ಕಾಲಾವಕಾಶ ನೀಡಿ ಪರಿಷ್ಕೃತ ವೇಳಾಪಟ್ಟಿಯೊಂದಿಗೆ ಸುತ್ತೋಲೆಯನ್ನು ಹೊರಡಿಸಿದೆ. ಮುಂದುವರೆದು 2025-26ನೇ ಉಲ್ಲೇಖ(10)ರ ಸಾಲಿನ ಆರ್.ಟಿ.ಇ ಅಡಿ ಪ್ರವೇಶ ಪ್ರಕ್ರಿಯೆಗೆ ದಿನಾಂಕ : 25.03.2025 ರ ಸುತೋಲೆಯಲ್ಲಿನ ಮಾರ್ಗಸೂಚಿಯಲ್ಲಿನ ಅಂಶಗಳು ಯಥಾವತ್ತಾಗಿ ಮುಂದುವರೆಯುತ್ತವೆ.
ವಿಶೇಷ ಸೂಚನೆ :
ಉಪನಿರ್ದೇಶಕರು(ಆಡಳಿತ), ಕ್ಷೇತ್ರ ಶಿಕ್ಷಣಾಧಿಕಾರಿಗಳು, ಆರ್.ಟಿ.ಇ. ನೋಡಲ್ ಅಧಿಕಾರಿಗಳು 2025- 26ನೇ ಸಾಲಿನ ಆರ್.ಟಿ.ಇ ಅಡಿ ಪ್ರವೇಶಕ್ಕೆ ಸಂಬಂಧಿಸಿದಂತೆ ದಿನಾಂಕ; 25/03/2025 ಮತ್ತು ಪರಿಷ್ಕೃತ ಸುತ್ತೋಲೆಯ ಮಾರ್ಗಸೂಚಿ ಅಂಶಗಳನ್ನು ಅನುಷ್ಠಾನಗೊಳಿಸುವುದು ಮತ್ತು ಪರಿಷ್ಕೃತ ವೇಳಾಪಟ್ಟಿಯಂತೆ ಸಲ್ಲಿಕೆಯಾಗುವ ಅರ್ಜಿಗಳನ್ನು ಆಯಾ ದಿನವೇ ಪರಿಶೀಲಿಸಿ ಇತ್ಯರ್ಥಪಡಿಸಲು ಕ್ರಮವಹಿಸುವುದು. ವ್ಯತ್ಯಯವಾದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ನೇರ ಹೊಣೆಗಾರನ್ನಾಗಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಚಾಂಪಿಯನ್ಸ್ ಟ್ರೋಫಿ 2025: 368 ಬಿಲಿಯನ್ ವೀಕ್ಷಣಾ ನಿಮಿಷ ದಾಖಲಿಸಿ ಎಲ್ಲಾ ದಾಖಲೆ ಉಡೀಸ್ | Champions Trophy 2025