ಬೆಂಗಳೂರು : ಪ್ರಬುದ್ಧ ಯೋಜನೆಯಡಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ವಿದೇಶದಲ್ಲಿ ಪಿಹೆಚ್ ಡಿ ಅಧ್ಯಯನ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಗೊಂದಲಗಳು ಉಂಟಾಗಿದ್ದು ಸರ್ಕಾರವು ಈ ಹಿಂದಿನ ರೀತಿಯಲ್ಲೇ ಈ ಯೋಜನೆಯನ್ನು ಮುಂದುವರೆಸಲಿದೆ ಎಂದು ಸಚಿವ ಹೆಚ್.ಸಿ. ಮಹದೇವಪ್ಪ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಚಿವರು, ಪರಿಶಿಷ್ಟ ಸಮುದಾಯದ ಜನರು ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡಿದಾಗ ಮಾತ್ರ ಅವರು ಘನತೆಯುತ ಸ್ಥಾನಗಳಿಗೆ ಏರಲು ಸಾಧ್ಯ ಎಂಬ ಬಾಬಾ ಸಾಹೇಬರ ಆಶಯಗಳನ್ನು ಸಾಕಾರಗೊಳಿಸುವುದು ನಮ್ಮ ಜವಾಬ್ದಾರಿಯೇ ಆಗಿದೆ. ಈ ಹಿನ್ನಲೆಯಲ್ಲಿ ಈ ಹಿಂದಿನಂತೆಯೇ ವಿಶ್ವದ ಅಗ್ರ 100 ವಿಶ್ವವಿದ್ಯಾಲಯಗಳಲ್ಲಿ ಪಿಹೆಚ್ ಡಿ ವ್ಯಾಸಂಗಕ್ಕೆ ಆಯ್ಕೆಯಾಗುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಈ ಯೋಜನೆಯ ಅನುಕೂಲ ಸಿಗಲಿದೆ. ಈ ಯೋಜನೆಯನ್ನು ಮುಂದುವರೆಸುವ ಕುರಿತು ನಮ್ಮ ಇಲಾಖೆಯ ಅಧಿಕಾರಿಗಳಿಗೆ ನಾನು ಸೂಚನೆ ನೀಡಿದ್ದು, ಸಮುದಾಯದ ಬಂಧುಗಳು ಈ ವಿಷಯದಲ್ಲಿ ಗೊಂದಲಗಳಿಗೆ ಎಡೆ ಮಾಡಿಕೊಡಬಾರದೆಂದು ಈ ಮೂಲಕ ವಿನಂತಿಸಿದ್ದಾರೆ.