ಬೆಂಗಳೂರು: ಗ್ರಾಮಠಾಣ ಒಳಗಿನ ಹಾಗೂ ಹೊರಗಿನ ಆಸ್ತಿ ಅಳತೆಗೆ ಅವಕಾಶ ನೀಡಲಾಗುತ್ತದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇ-ಸ್ವತ್ತು ತಂತ್ರಾಂಶದ ಹೊಸ ಅವತರಣಿಕೆಯನ್ನು ಅಭಿವೃದ್ದಿಪಡಿಸಲಾಗಿದ್ದು ಈ ತಂತ್ರಾಂಶದ ಹೊಸ ಅವತರಣಿಕೆಯನ್ನು ಸಾರ್ವಜನಿಕರ ಸೇವೆಗೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಇ-ಸ್ವತ್ತು ತಂತ್ರಾಂಶದ ಬಳಕೆದಾರರಿಗೆ ಅನುಕೂಲವಾಗುವಂತೆ ಸಮಗ್ರ ಆವೃತ್ತಿಯೊಂದಿಗೆ ಸಜ್ಜುಗೊಳಿಸಲಾಗಿರುವ ಈ ತಂತ್ರಾಂಶದ ಮೂಲಕ ಸಾರ್ವಜನಿಕರ ಆಸ್ತಿಯನ್ನು ಗ್ರಾಮಠಾಣದ ಒಳಗೆ ಆಥವಾ ಹೊರಗೆ ಬರುವ ಬಗ್ಗೆ ಅಳತೆ ಮಾಡಿಸುವ ಪ್ರಕ್ರಿಯೆಯನ್ನು ಗ್ರಾಮ ಪಂಚಾಯತಿಯ ಹಂತದಲ್ಲಿ ದಿಶಾಂಕ್ ಆಫ್ ಮೂಲಕ ನಿರ್ವಹಿಸಲು ಕ್ರಮವಹಿಸಲಾಗುತ್ತಿದೆ.
ಇ-ಸ್ವತ್ತು ತಂತ್ರಾಂಶದ ಹೊಸ ಅವತರಣಿಕೆಯನ್ನು ಲೈವ್ ಮಾಡಲಾಗುತ್ತಿರುವುದರಿಂದ, 2024ರ ಜುಲೈ 27ರಿಂದ 2024ರ ಜುಲೈ 29ರವರೆಗೆ ಇ-ಸ್ವತ್ತು ತಂತ್ರಾಂಶವು ಕಾರ್ಯನಿರ್ವಹಿಸುವುದಿಲ್ಲ ಎಂದೂ ಸಚಿವರು ಮಾಹಿತಿ ನೀಡಿದ್ದಾರೆ.
ಸಾರ್ವಜನಿಕರ ಅನಾನುಕೂಲತೆಯನ್ನು ಕಡಿಮೆ ಮಾಡಲು ತಂತ್ರಾಂಶ ಕಾರ್ಯಾರಂಭಿಸಿದ ನಂತರ ಇ-ಸ್ವತ್ತು ತಂತ್ರಾಂಶದ ಕಾರ್ಯಾವಧಿಯನ್ನು 2 ಆಗಸ್ಟ್ 2024ರವರೆಗೆ ಸಂಜೆ 8 ಗಂಟೆಯವರೆಗೂ ವಿಸ್ತರಿಸಲಾಗುವುದು ಎಂದೂ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.