ಬೆಂಗಳೂರು : ರಾಜ್ಯ ಸರ್ಕಾರವು ಪಡಿತರ ಚೀಟಿದಾರರಿಗೆ ಮತ್ತೊಂದು ಸಿಹಿಸುದ್ದಿ ನೀಡಲು ಮುಂದಾಗಿದ್ದು, ಅನ್ನಭಾಗ್ಯದ ಹಣದ ಬದಲಿಗೆ 5 ಕೆಜಿ ಅಕ್ಕಿಗೆ ನೀಡುತ್ತಿದ್ದ ಹಣದ ಬದಲು ತೊಗರಿಬೇಳೆ, ಸಕ್ಕರೆ, ತಾಳೆ ಎಣ್ಣೆ ಹಾಗೂ ಅಯೋಡೈಸ್ಡ್ ಉಪ್ಪು ನೀಡಲು ಚಿಂತನೆ ನಡೆಸಿದೆ.
ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ, ಅನ್ನಭಾಗ್ಯದ ಹಣದ ಬದಲು ತೊಗರಿಬೇಳೆ, ಸಕ್ಕರೆ, ತಾಳೆ ಎಣ್ಣೆ ಹಾಗೂ ಅಯೋಡೈಸ್ಡ್ ಉಪ್ಪು ನೀಡಲು ನಿರ್ಧರಿಸಿದ್ದು, ಈಗಾಗಲೇ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಸಿದೆ. ಹಣಕಾಸು ಅನುಮೋದನೆಗಾಗಿ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ ಎನ್ನಲಾಗಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಬಿಪಿಎಲ್ ಪಡಿತರ ಚೀಟಿದಾರರಿಗೆ ತಲಾ 10 ಕೆಜಿ ಅಕ್ಕಿ ಕೊಡುವುದಾಗಿ ಭರವಸೆ ನೀಡಿತ್ತು. ಆದರೆ ಅಕ್ಕಿ ಕೊರತೆಯಿಂದಾಗಿ 5 ಕೆಜಿ ಅಕ್ಕಿ ಕೊಟ್ಟು ಉಳಿದ 5 ಕೆಜಿಗೆ ನಗದು ಪಾವತಿಸುತ್ತಿತ್ತು. ಇದಕ್ಕೆ ಸರ್ಕಾರ ಪ್ರತಿ ತಿಂಗಳು ಬರೋಬ್ಬರಿ 700 ಕೋಟಿ ರೂ. ಅಧಿಕ ಹಣ ಭರಿಸಬೇಕಾಗುತ್ತದೆ. ಈಗಾಗಲೇ ಅನ್ನಭಾಗ್ಯ ಯೋಜನೆಯಡಿ ಪ್ರತಿ ತಿಂಗಳು 2.29 ಲಕ್ಷ ಮೆಟ್ರಿಕ್ ಟನ್ ಅಕ್ಕಿ ವಿತರಿಸಲಾಗುತ್ತಿದೆ. ಇದೀಗ ಅನ್ನಭಾಗ್ಯದ ಹಣದ ಬದಲು ಇತರೆ ದಿನಸಿ ಪದಾರ್ಥಗಳನ್ನು ನೀಡಲು ನಿರ್ಧರಿಸಿದೆ.