ಹಾರೋಹಳ್ಳಿ/ತೊರೆಕಾಡನಹಳ್ಳಿ : “ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾಗಿರುವ 110 ಹಳ್ಳಿಗಳ ಜನರಿಗೆ ಕುಡಿಯಲು ನೀರು ಪೂರೈಸುವ ಕಾವೇರಿ 5ನೇ ಹಂತದ ಕುಡಿಯುವ ನೀರಿನ ಯೋಜನೆಯ ಉದ್ಘಾಟನೆಯನ್ನು ಪಿತೃ ಪಕ್ಷದ ನಂತರ ವಿಜಯ ದಶಮಿ ವೇಳೆಗೆ ನೆರವೇರಿಸುವ ಆಲೋಚನೆಯಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ರಾಮನಗರ ಜಿಲ್ಲೆ ಹಾರೋಹಳ್ಳಿಯ ಕಾವೇರಿ ನೀರು ಪಂಪಿಂಗ್ ಸ್ಟೇಷನ್ ಬಳಿ ಮಾಧ್ಯಮ ಪ್ರತಿಕ್ರಿಯೆ ಹಾಗೂ ಮಂಡ್ಯ ಜಿಲ್ಲೆ ಮಳವಳ್ಳಿಯ ತೊರೆಕಾಡನಹಳ್ಳಿಯ ನೀರು ಶುದ್ಧೀಕರಣ ಮತ್ತು ಪಂಪಿಂಗ್ ಸ್ಟೇಷನ್ ಕಚೇರಿಯಲ್ಲಿ ನಡೆದ ಮಾಧ್ಯಮ ಗೋಷ್ಟಿಯಲ್ಲಿ ಸೋಮವಾರ ಮಾತನಾಡಿದರು.
“ಬೆಂಗಳೂರು ಜನರಿಗೆ ಟ್ಯಾಂಕರ್ ಮೂಲಕ ನೀರು ಕೊಡುವುದನ್ನು ತಪ್ಪಿಸಿ ಮನೆ, ಮನೆಗೂ ಕುಡಿಯುವ ನೀರು ಹರಿಸುವುದು ನಮ್ಮ ಸಂಕಲ್ಪ. ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರಿರುವ 110 ಹಳ್ಳಿಗಳಿಗೆ ಕಾವೇರಿ ನೀರು ನೀಡಬೇಕು ಎಂದು ಕಾಂಗ್ರೆಸ್ ಸರ್ಕಾರ ಈ ಯೋಜನೆ ಆರಂಭಿಸಿತ್ತು.
ಈ ಯೋಜನೆ ಜಾರಿಗೆ ಇದ್ದ ಅಡಚಣೆಗಳನ್ನು ಹಂತ, ಹಂತವಾಗಿ ನಿವಾರಿಸಲಾಗಿದೆ. ಅನೇಕ ಕಡೆಗಳಲ್ಲಿ ಮಧ್ಯೆ ಮಧ್ಯೆ ಸಮಸ್ಯೆಗಳಿದ್ದವು. ಮುಂದೆ ಯಾವುದೇ ತೊಂದರೆ ಆಗಬಾರದು ಎಂದು ಈ ಯೋಜನೆ ಉದ್ಘಾಟಿಸುವ ಮುನ್ನ ಎಲ್ಲವೂ ಸರಿಯಾಗಿದೆಯೇ ಎಂದು ನಾನೇ ಕಣ್ಣಾರೆ ಕಂಡು ಪರಿಶೀಲಿಸಬೇಕು ಎಂದು ಭೇಟಿ ನೀಡಿದ್ದೇನೆ” ಎಂದು ತಿಳಿಸಿದರು.
ಮುಂದಿನ 10 ವರ್ಷ ಬೆಂಗಳೂರಿಗೆ ಕುಡಿಯುವ ನೀರಿನ ತೊಂದರೆ ಇಲ್ಲ
“ಈಗಾಗಲೇ 1,400 ಎಂಎಲ್ ಡಿ ನೀರನ್ನು ನೀಡಲಾಗುತ್ತಿದ್ದು, ಇದಕ್ಕೆ 775 ಎಂಎಲ್ ಡಿಯಷ್ಟು ನೀರು ಸೇರಿಸಲಾಗುವುದು. ಕನಿಷ್ಠ 10 ವರ್ಷ ಬೆಂಗಳೂರಿನಲ್ಲಿ ಕುಡಿಯಲು ನೀರಿನ ತೊಂದರೆ ಆಗಬಾರದು ಎಂದು ಯೋಜನೆ ರೂಪಿಸಲಾಗಿದೆ ಎಂದರು.
ಕೆಂಗೇರಿ ಸೇರಿದಂತೆ ಒಂದಷ್ಟು ಕಡೆ ಕಾಮಗಾರಿ ನಡೆಸಲು ಜಾಗಗಳ ಒತ್ತುವರಿ ತೊಂದರೆ, ಅರಣ್ಯ ಭೂಮಿಗಳ ತೊಂದರೆ ಸೇರಿದಂತೆ ಎಲ್ಲವನ್ನೂ ನಾವುಗಳೇ ಖುದ್ದಾಗಿ ಮಾತನಾಡಿ ಬಗೆಹರಿಸಿದ್ದೇವೆ. ಅವರಿಗೆ ಪರಿಹಾರವಾಗಿ ಟಿಡಿಆರ್ ಕೊಟ್ಟಿದ್ದೇವೆ” ಎಂದು ಮಾಹಿತಿ ನೀಡಿದರು.
5 ಸಾವಿರ ಕೋಟಿ ಮೊತ್ತದ ಯೋಜನೆ
5 ನೇ ಹಂತ ಅನುಷ್ಠಾನದ ಬಳಿಕ 4 ಲಕ್ಷ ಹೊಸ ನೀರಿನ ಸಂಪರ್ಕ ನೀಡಲಾಗುತ್ತದೆ. 5 ಸಾವಿರ ಕೋಟಿ ಮೊತ್ತದಲ್ಲಿ 50 ಲಕ್ಷ ಜನರಿಗೆ ನೀರು ಒದಗಿಸುವ ದೇಶದ ದೊಡ್ಡ ಯೋಜನೆ. ಈ ಕಾರ್ಯಕ್ರಮದ ಅನುಷ್ಠಾನಕ್ಕೆ ಜಪಾನ್ ಇಂಟರ್ ನ್ಯಾಷನಲ್ ಕೋ- ಆಪರೇಷನ್ ಏಜನ್ಸಿ (ಜೈಕಾ) ಸಂಸ್ಥೆ ಜೊತೆ ಸಾಲದ ಒಪ್ಪಂದ ಮಾಡಿಕೊಂಡಿದ್ದೇವೆ” ಎಂದರು.
“ಈ ಐದನೇ ಹಂತ ಕೇವಲ ಒಂದು ಕ್ಷೇತ್ರಕ್ಕೆ ಸೇರಿದ್ದಲ್ಲ, ರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ, ಕೆಂಗೇರಿ, ಆನೇಕಲ್, ಯಶವಂತಪುರ, ಬ್ಯಾಟರಾಯನಪುರ, ಬೊಮ್ಮನಹಳ್ಳಿ, ಮಹದೇವಪುರ ಸೇರಿದಂತೆ ಹಲವು ಭಾಗಗಳಿಗೆ ನೀರು ಒದಗಿಸಲಾಗುವುದು. ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ನಿವಾರಿಸಲೆಂದೇ ಈ ಬೃಹತ್ ಯೋಜನೆ ಅನುಷ್ಠಾನಕ್ಕೆ ತರುತ್ತಿದ್ದೇವೆ” ಎಂದರು.
ಭಾರತದಲ್ಲೇ ಅತಿ ದೊಡ್ಡ ಕುಡಿಯುವ ನೀರಿನ ಯೋಜನೆ
1 ಲಕ್ಷ 45 ಸಾವಿರ ಮೆಗಾ ಟನ್ ಸ್ಟೀಲ್ ಪೈಪ್ ಗಳನ್ನು ಈ ಯೋಜನೆಯಲ್ಲಿ ಬಳಕೆ ಮಾಡಲಾಗಿದೆ. 110 ಕಿ. ಮೀ ಉದ್ದ ಪೈಪ್ ಲೈನ್ ಅಳವಡಿಸಲಾಗಿದೆ. ಕನಕಪುರ ಬಳಿ ತಿರುವು ಮಾಡಲು ತೊಂದರೆ ಆಗಿತ್ತು. ಅದನ್ನು ಬಗೆಹರಿಸಲಾಗಿದೆ. ಇದೊಂದೇ ಹಂತದಲ್ಲಿ 775 ಎಂಎಲ್ ಡಿ ನೀರನ್ನು ಹರಿಸಲಾಗುತ್ತಿದೆ. ಭಾರತದಲ್ಲೇ ಅತಿ ದೊಡ್ಡ ಕುಡಿಯುವ ನೀರಿನ ಯೋಜನೆ.
“ಕುಡಿಯುವ ನೀರಿನ ಸರಬರಾಜು ವಿಚಾರದಲ್ಲಿ ನಾವು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದೇವೆ. ಕಳೆದ ಬೇಸಿಗೆ ವೇಳೆ 7 ಸಾವಿರ ಬೋರ್ ವೆಲ್ ಗಳು ಬತ್ತಿ ಹೋಗಿದ್ದರೂ ಅಧಿಕಾರಿಗಳು, ನೌಕರರು ಜನರ ಬದುಕಿಗೆ ತೊಂದರೆ ಆಗದಂತೆ ನೀರನ್ನು ನೀಡಿದ್ದಾರೆ. ಅವರ ಕೆಲಸಕ್ಕೆ, ಬದ್ಧತೆಗೆ ವಂದನೆಗಳು” ಎಂದರು.
“ಈ ಯೋಜನೆ ಆಧುನಿಕ ಇಂಜಿನಿಯರಿಂಗ್ ನ ಅದ್ಬುತ ಎಂದು ಕರೆಯುತ್ತಾರೆ. ಈ ಯೋಜನೆ ಮೂಲಕ ಬೆಂಗಳೂರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದೇ ನಮ್ಮ ಗುರಿ ಹಾಗೂ ಉದ್ದೇಶ” ಎಂದು ಹೇಳಿದರು.
ಸತ್ತೇಗಾಲ ಯೋಜನೆ ಕೂಡ ವಿಳಂಬವಾಗುತ್ತಿದೆ ಎಂದು ಕೇಳಿದಾಗ, “ಸತ್ತೆಗಾಲಕ್ಕೂ ಮುಂದೊಂದು ದಿನ ಭೇಟಿ ನೀಡಿ ಯೋಜನೆ ಜಾರಿಗೆ ಪ್ರಯತ್ನಿಸುತ್ತೇವೆ” ಎಂದು ಹೇಳಿದರು.
ವರದಿ ಬಂದ ಬಳಿಕ ಕಾವೇರಿ ಆರತಿ ಪ್ರಾರಂಭ
“ಕಾವೇರಿ ಆರತಿ ಪ್ರಾರಂಭ ಮಾಡಲು ನದಿಗಳಿಗೆ ಆರತಿ ನಡೆಸುವ ಸ್ಥಳಗಳಿಗೆ ಅಧ್ಯಯನ ಮಾಡಲು ತಂಡವನ್ನು ಕಳುಹಿಸಲಾಗಿತ್ತು. ಆ ವರದಿ ಬಂದ ಮೇಲೆ ಪ್ರಾರಂಭ ಮಾಡಲಾಗುವುದು. ಇದು ಕೇವಲ ಪ್ರವಾಸದ ವಿಚಾರವಲ್ಲ, ಧಾರ್ಮಿಕ ವಿಚಾರ. ಮೂರು ನಾಲ್ಕು ಇಲಾಖೆಗಳು ಸೇರಿ ಕಾರ್ಯಕ್ರಮ ರೂಪಿಸುತ್ತಾ ಇದ್ದೇವೆ. ಇಡೀ ರಾಜ್ಯದಲ್ಲೇ ಅತ್ಯುತ್ತಮ ಕಾರ್ಯಕ್ರಮ ರೂಪಿಸುತ್ತಿದ್ದೇವೆ” ಎಂದರು.
ಧಾರ್ಮಿಕ ದತ್ತಿ ಇಲಾಖೆ ಸರ್ಕಾರದ ಒಂದು ಭಾಗ
ದೇವಾಲಯ ಹಾಗೂ ಧಾರ್ಮಿಕ ಕ್ಷೇತ್ರಗಳನ್ನು ಖಾಸಗಿಯವರಿಗೆ ನೀಡಬೇಕು ಎನ್ನುವ ವಿಚಾರದ ಬಗ್ಗೆ ಕೇಳಿದಾಗ “ಧಾರ್ಮಿಕ ದತ್ತಿ ಇಲಾಖೆ ಸರ್ಕಾರದ ಒಂದು ಭಾಗ. ಈ ಇಲಾಖೆಯನ್ನು ಇವತ್ತಿನಿಂದ ನಡೆಸಿ ಕೊಂಡು ಬರುತ್ತಿಲ್ಲ. ಕಬ್ಬಾಳಮ್ಮ, ಚಾಮುಂಡಿ ದೇವಸ್ಥಾನ ಯಾರ ಅದೀನದಲ್ಲಿದೆ?. ಸರ್ಕಾರ ದೇವಸ್ಥಾನಾಗಳನ್ನು ನಡೆಸುವುದು ಸಂಪ್ರದಾಯ. ಖಾಸಗಿ ದೇವಾಲಯಗಳನ್ನು ಬೇಕಾದರೆ ಬೇರೆಯವರಿಗೆ ನೀಡಲಿ” ಎಂದರು.
ನಾನು ತಿರುಪತಿ ಲಡ್ಡು ತಿನ್ನುವವನು
ತಿರುಪತಿ ಲಡ್ಡು ಕಲಬೆರಕೆ ಬಗ್ಗೆ ಕೇಳಿದಾಗ “ನಾನು ಲಡ್ಡು ತಿನ್ನುವವನೇ, ಪ್ರಸಾದ ತಿನ್ನುವವನೇ. ನನಗೆ ದೇವರ ಪ್ರಸಾದ ಹೇಗಿದ್ದರೂ ಅದನ್ನು ತಿರುಪತಿ ಲಡ್ಡು ಎಂದು ತಿನ್ನುತ್ತೇನೆ” ಎಂದರು.
ಮಲ್ಲೇಶ್ವರಂನಲ್ಲಿ ಆಟದ ಮೈದಾನದ ಗೇಟ್ ಬಿದ್ದು ಬಾಲಕನ ಸಾವಿನ ಬಗ್ಗೆ ಕೇಳಿದಾಗ, “ಈಗಾಗಲೇ ಸಚಿವ ದಿನೇಶ್ ಗುಂಡೂರಾವ್ ಅವರು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಪರಿಹಾರ ಘೋಷಣೆ ಮಾಡಿದ್ದಾರೆ. ವರದಿ ಬಂದ ನಂತರ ಮಾತನಾಡುತ್ತೇನೆ” ಎಂದರು.
ಚನ್ನಪಟ್ಟಣ ಉಪಚುನಾವಣೆಗೆ ಸುರೇಶ್ ಅವರ ಸ್ಪರ್ಧೆಗೆ ಒತ್ತಡ ಹೆಚ್ಚುತ್ತಿರುವ ಬಗ್ಗೆ ಕೇಳಿದಾಗ, “ಈಗ ರಾಜಕಾರಣ ಬೇಡ. ಮೊದಲು ಅಭಿವೃದ್ಧಿಯ ಬಗ್ಗೆ ಮಾತ್ರ ಮಾತನಾಡೋಣ” ಎಂದರು.
BREAKING : ಮಹಾಲಕ್ಷ್ಮಿ ಹಂತಕ ಬೆಂಗಳೂರಲ್ಲೇ ವಾಸವಿದ್ದ, ಶೀಘ್ರದಲ್ಲಿ ಬಂಧಿಸಲಾಗುತ್ತೆ : ಕಮಿಷನರ್ ಬಿ.ದಯಾನಂದ್
BREAKING : ಪುಣೆ ವಿಮಾನ ನಿಲ್ದಾಣಕ್ಕೆ ‘ಜಗದ್ಗುರು ಸಂತ ತುಕಾರಾಮ್’ ಹೆಸರಿಡುವ ಪ್ರಸ್ತಾವಕ್ಕೆ ‘ಮಹಾ ಸರ್ಕಾರ’ ಒಪ್ಪಿಗೆ