ಬೆಂಗಳೂರು: ಪೋಷಕರಿಗೆ ಗುಡ್ ನ್ಯೂಸ್ ಎನ್ನುವಂತೆ ರಾಜ್ಯಾದ್ಯಂತ 4 ಸಾವಿರಕ್ಕೂ ಅಧಿಕ ಅಂಗನವಾಡಿ ಕೇಂದ್ರಗಳಲ್ಲಿ ಅಕ್ಟೋಬರ್ ವೇಳೆಗೆ ಎಲ್ಕೆಜಿ, ಯುಕೆಜಿ ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಹೌದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರತ್ಯೇಕ ಇಲಾಖೆಯಾಗಿ ಅಕ್ಟೋಬರ್ 2ಕ್ಕೆ 50 ವರ್ಷ ಪೂರ್ಣವಾಗುತ್ತಿದೆ. ಇದರ ಅಂಗವಾಗಿ ರಾಜ್ಯದ 4,000 ಅಧಿಕ ಅಂಗನವಾಡಿ ಕೇಂದ್ರಗಳಲ್ಲಿ ಎಲ್ಕೆಜಿ, ಯುಕೆಜಿ ಆರಂಭಿಸಲು ನಿರ್ಧರಿಸಲಾಗಿದೆ.ಆಧುನಿಕತೆಗೆ ಅನುಗುಣವಾಗಿ ಮಕ್ಕಳ ಕಲಿಕೆಗೆ ಸ್ಮಾರ್ಟ್ ಟಿವಿ, ಕಲಿಕಾ ಪರಿಕರಗಳ ಖರೀದಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಅಂಗನವಾಡಿ ಕಾರ್ಯಕರ್ತರಿಗೆ ತರಬೇತಿ ಕೂಡ ನೀಡಲಾಗುತ್ತಿದ್ದು, ರಾಜ್ಯದಲ್ಲಿ 69 ಸಾವಿರ ಅಂಗನವಾಡಿ ಕೇಂದ್ರಗಳಿವೆ. ಪ್ರತಿ ಕೇಂದ್ರಗಳಲ್ಲಿಯೂ ತಲಾ ಒಬ್ಬರು ಕಾರ್ಯಕರ್ತೆಯರು, ಸಹಾಯಕಿಯರು ಕಾರ್ಯನಿರ್ವಹಿಸುತ್ತಿದ್ದಾರೆ. ಅಂಗನವಾಡಿಗಳಲ್ಲಿ ಎಲ್ಕೆಜಿ, ಯುಕೆಜಿ ಆರಂಭಿಸಿದರೂ, ಪ್ರತ್ಯೇಕ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವುದಿಲ್ಲ. ರಾಜ್ಯದಲ್ಲಿ 10,000 ಅಂಗನವಾಡಿ ಕೇಂದ್ರಗಳನ್ನು ಗುರುತಿಸಲಾಗಿದ್ದು, ಸದ್ಯ 4 ರಿಂದ 5000 ಅಂಗನವಾಡಿಗಳಲ್ಲಿ ಎಲ್.ಕೆ.ಜಿ., ಯುಕೆಜಿ ಆರಂಭಿಸಲಾಗುವುದು.
ಕೇಂದ್ರ ಪಠ್ಯಕ್ರಮವನ್ನು ಮಕ್ಕಳಿಗೆ ಕಲಿಸಲಿದ್ದು, ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸಲಾಗುವುದು, ಎಲ್ಕೆಜಿ, ಯುಕೆಜಿ ಆರಂಭಿಸುವ ಪ್ರತಿ ಅಂಗನವಾಡಿಗೆ 5 ಲಕ್ಷ ರೂ. ಅನುದಾನ ನೀಡಲಾಗುವುದು. ಪ್ರಸ್ತುತ ಸೇವೆಯಲ್ಲಿರುವ ಅಂಗನವಾಡಿ ಶಿಕ್ಷಕರಿಗೆ ಕೌಶಲಾಭಿವೃದ್ಧಿ ತರಬೇತಿ ನೀಡಲಾಗುವುದು. ಅಂಗನವಾಡಿ ಕೇಂದ್ರಗಳನ್ನು ಉನ್ನತೀಕರಣ ಮಾಡುವುದರ ಜೊತೆಗೆ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡುವುದು ನಮ್ಮ ಉದ್ದೇಶ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.