ಬೆಂಗಳೂರು: ರಾಜ್ಯ ಸರ್ಕಾರದಿಂದ ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವಂತ ಎನ್ ಹೆಚ್ ಎಂ ನೌಕರರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಎನ್ ಹೆಚ್ ಎಂ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸಾಮಾಜಿಕ ಭದ್ರತಾ ವಿಮಾ ಸೌಲಭ್ಯವನ್ನು ಜಾರಿಗೊಳಿಸಿ ಆದೇಶಿಸಿದೆ.
ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಕರ್ನಾಟಕ ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ತನ್ನ ನೇರ ಗುತ್ತಿಗೆ ಮೂಲಕ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ಕ್ಷೇಮಾಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ವೈಯಕ್ತಿಕ ಅಪಘಾತ ವಿಮೆ ಮತ್ತು ಟರ್ಮ್ ಇನ್ನೂರೆನ್ಸ್ ಸೇವೆಗಳನ್ನು ಪರಿಚಯಿಸುವ ಮೂಲಕ ಮಹತ್ವದ ಹೆಜ್ಜೆ ಇಟ್ಟಿದೆ. ಈ ಪರಿಕಲ್ಪನೆ ಎನ್‌ಎಚ್‌ಎಮ್ ಮತ್ತು ಆಕ್ಸಿಸ್ ಬ್ಯಾಂಕ್ ನಡುವೆ ಕೈಗೊಳ್ಳಲಾದ ಒಡಂಬಡಿಕೆ ಪತ್ರದ (MoU) ಮೂಲಕ ಸಾಧ್ಯವಾಗಿದೆ ಎಂದಿದೆ.
2005 ರಿಂದ, ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸಲು ಮತ್ತು ಕರ್ನಾಟಕದಾದ್ಯಂತ ಅನಿವಾರ್ಯ ಆರೋಗ್ಯ ಸೇವೆಗಳನ್ನು ಒದಗಿಸಲು ಪ್ರಮುಖ ಪಾತ್ರ ವಹಿಸಿದೆ. ಸದರಿ ಯೋಜನೆಯ ಅಡಿಯಲ್ಲಿ ನೇರ ಗುತ್ತಿಗೆ ಆಧಾರಿತ ಉದ್ಯೋಗಿಗಳಿಗೆ ಟರ್ಮ್ ಇನ್ಸೂರೆನ್ಸ್ ಮತ್ತು ವೈಯಕ್ತಿಕ ಅಪಘಾತ ವಿಮೆಯಂತಹ ಸಾಮಾಜಿಕ ಭದ್ರತಾ ಯೋಜನೆಗಳ ಕೊರತೆಯನ್ನು ಮನಗಂಡು, ಎನ್‌ಎಚ್‌ಎಮ್ ಕರ್ನಾಟಕವು ಈ ವಿಮಾ ಯೋಜನೆಯನ್ನು ಶೂನ್ಯ ವೆಚ್ಚದಲ್ಲಿ ಪ್ರಾರಂಭಿಸಿದೆ. ಈ ವಿಮಾ ಯೋಜನೆಗೆ ಉದ್ಯೋಗಿಗಳು ಮತ್ತು ಎನ್‌ಎಚ್‌ಎಮ್ ಕೂಡ ಯಾವುದೇ ಪ್ರೀಮಿಯಂ ಭರಿಸುವ ಅವಶ್ಯಕತೆ ಇಲ್ಲ, ಏಕೆಂದರೆ ಆಕ್ಸಿಸ್ ಬ್ಯಾಂಕ್ ಉಚಿತವಾಗಿ ಸದರಿ ಸೌಲಭ್ಯವನ್ನು ಒದಗಿಸುತ್ತಿದೆ ಎಂಬುದಾಗಿ ತಿಳಿಸಿದೆ.
ವಿಮಾ ಕವಚದ ಪ್ರಮುಖ ಪ್ರಯೋಜನಗಳು:
ವೈಯಕ್ತಿಕ ಅಪಘಾತ ವಿಮಾ ರಕ್ಷಣಾ ಮೊತ್ತ: 60 ಲಕ್ಷ
ಕರ್ತವ್ಯದ ಸಂದರ್ಭದಲ್ಲಿ ಅಥವಾ ಕರ್ತವ್ಯ ಮುಗಿದ ನಂತರ ಯಾವುದೇ ಅಪಘಾತದಿಂದ ಸಂಭವಿಸುವ ಮರಣಕ್ಕೆ ಸಂಪೂರ್ಣ ವಿಮಾ ರಕ್ಷಣೆ.
ಸಂಪೂರ್ಣ ಶಾಶ್ವತ ಅಂಗವೈಕಲ್ಯ ವಿಮಾ ಮೊತ್ತ: 60 ಲಕ್ಷ
ಯಾವುದೇ ಅಪಘಾತದಿಂದಾಗಿ ಸಂಪೂರ್ಣ ಅಂಗವೈಕಲ್ಯಗೊಂಡರೆ ಲಭ್ಯವಿರುವ ವಿಮಾ ರಕ್ಷಣಾ ಮೊತ್ತ
-ಆಂಶಿಕ ಅಂಗವೈಕಲ್ಯ ವಿಮಾ ಮೊತ್ತ: 75% ವರೆಗಿನ ಪರಿಹಾರ
ಯಾವುದೇ ಅಪಘಾತದಿಂದಾಗಿ ಭಾಗಶಃ ಅಂಗವೈಕಲ್ಯವಾದರೆ, ವಿಮಾ ಮೊತ್ತದ ಶೇಕಡಾ 75% ವರೆಗೆ ಪರಿಹಾರ.
ಸಹಜ ಮರಣ ವಿಮಾ ಕವಚ: 710 ಲಕ್ಷ
60 ವರ್ಷ ವಯಸ್ಸಿನ ಒಳಗಿನ ಉದ್ಯೋಗಿಗಳಿಗೆ ಮಾತ್ರ ಅನ್ವಯಿಸುತ್ತದೆ.
ಉದ್ಯೋಗಿಯ ಮಕ್ಕಳ ಶಿಕ್ಷಣ ಸೌಲಭ್ಯ:
ಮಾನ್ಯತೆ ಪಡೆದ ವೈಯಕ್ತಿಕ ಅಪಘಾತ ವಿಮಾ ಕ್ಲಮಿನ ಅಡಿಯಲ್ಲಿ 18 ಲಕ್ಷವರೆಗೆ ಲಭ್ಯ.
ಒಬ್ಬ ಅಥವಾ ಹೆಚ್ಚಿನ ಗಂಡು ಮಕ್ಕಳಿಗೆ: 34 ಲಕ್ಷ*
ಒಂದು ಅಥವಾ ಹೆಚ್ಚಿನ ಹೆಣ್ಣು ಮಕ್ಕಳಿಗೆ: *8 ಲಕ್ಷ* (ಉದ್ಯೋಗಿಯ ಮರಣದ ಸಂದರ್ಭದಲ್ಲಿ ಹೆಣ್ಣು ಮಗು ವಿದ್ಯಾಭ್ಯಾಸ ಮಾಡುತ್ತಿರುವ ಷರತ್ತಿನಡಿ)
ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಇದ್ದರೆ: 8 ಲಕ್ಷ*
ಹೆಣ್ಣುಮಗಳಿಗೆ ಹೆಚ್ಚುವರಿ 14 ಲಕ್ಷ ಸಹ ಒಳಗೊಂಡಿದೆ.
ಅನುಷ್ಠಾನ ಮತ್ತು ವಿಮಾ ವ್ಯಾಪ್ತಿ:
ಉದ್ಯೋಗಿಯ ವೇತನ ಖಾತೆಗೆ ಮೊದಲ ವೇತನ ಜಮೆಯಾದ 15 ದಿನಗಳ ನಂತರ ವಿಮಾ ರಕ್ಷಣೆ ಚಾಲ್ತಿಗೆ ಬರುತ್ತದೆ.
ಈ ಯೋಜನೆಯಿಂದ 28,400 ಅನುಮೋದಿತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 25,000 ನೇರ ಗುತ್ತಿಗೆ ಉದ್ಯೋಗಿಗಳು ಪ್ರಯೋಜನ ಪಡೆಯಲಿದ್ದಾರೆ.
ಇದು ಅವರ ಕುಟುಂಬಗಳಿಗೆ ಆರ್ಥಿಕ ಭದ್ರತೆ ಮತ್ತು ಆತ್ಮಸ್ಥೆರ್ಯವನ್ನು ಒದಗಿಸುತ್ತದೆ.
ಉದ್ಯೋಗಿ ಕಲ್ಯಾಣಕ್ಕೆ ಮಹತ್ವದ ಹೆಜ್ಜೆ
ಈ ಸದರಿ ಯೋಜನೆಯು, ಅನೇಕ ವರ್ಷಗಳಿಂದ ನೇರ ಗುತ್ತಿಗೆ ಮೂಲಕ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುತ್ತಿರುವುದು ಆರೋಗ್ಯ ಇಲಾಖೆಯ ಮಹತ್ವದ ಹೆಜ್ಜೆಯಾಗಿದ್ದು, ಇದು ಉದ್ಯೋಗಿಗಳ ಕ್ಷೇಮಾಭಿವೃದ್ಧಿಗೆ ನೀಡುವ ಆದ್ಯತೆಯನ್ನು ತೋರಿಸುತ್ತದೆ. ಸಮಗ್ರ ವಿಮಾ ಕವಚವನ್ನು ಖಚಿತಪಡಿಸುವ ಮೂಲಕ, ಎನ್‌ಎಚ್‌ಎಮ್ ಕರ್ನಾಟಕವು ತನ್ನ ಉದ್ಯೋಗಿಗಳಿಗೆ ವಿಮಾ ಸೌಲಭ್ಯದ ಮೂಲಕ ಸಾಮಾಜಿಕ ಭದ್ರತೆಯನ್ನು ಒದಗಿಸುತ್ತಿದೆ.
ಅಂತರ್‌ಜಿಲ್ಲಾ ವರ್ಗಾವಣೆಗೆ ಅವಕಾಶ
ಎನ್‌ಎಚ್‌ಎಂ ನೇರ ಗುತ್ತಿಗೆ ಸಿಬ್ಬಂದಿಗಳು ಸಾಮಾನ್ಯವಾಗಿ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗುತ್ತಿದ್ದು, ಅವರು ತಮ್ಮ ಸಂಪೂರ್ಣ ಕರ್ತವ್ಯದ ಅವಧಿಯುದ್ದಕ್ಕೂ ಆಯಾ ಜಿಲ್ಲೆಯಲ್ಲಿಯೇ ಕೆಲಸ ಮಾಡಬೇಕಾಗಿರುತ್ತದೆ. ಸದರಿ ಸಿಬ್ಬಂದಿಗಳ ಬಹುದಿನದ ಬೇಡಿಕೆಗೆ ಸ್ಪಂದಿಸಿ, ರಾಜ್ಯ ಸರ್ಕಾರವು ಸೇವಾ ಅವಧಿಯಲ್ಲಿ ಒಂದು ಬಾರಿ ಅಂತರ್‌ಜಿಲ್ಲಾ ವರ್ಗಾವಣೆಗೆ ಅವಕಾಶ ಕಲ್ಪಿಸುವ ನಿರ್ಧಾರ ಕೈಗೊಂಡಿದೆ. ಈ ಸಂಬಂಧ ಅತಿ ಶೀಘ್ರದಲ್ಲಿ ಮಾರ್ಗಸೂಚಿಯನ್ನು ಹೊರಡಿಸಲಾಗುವುದು.
ಉದ್ಯೋಗ ಭದ್ರತೆ, ಖಾಯಂ ವಿಚಾರವನ್ನೇ ಕೈಬಿಟ್ಟ ಸರ್ಕಾರ
ಇನ್ನೂ ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವಂತ ಎನ್ ಹೆಚ್ ಎಂ ನೌಕರರ ಹಲವು ವರ್ಷಗಳ ಬಹುಮುಖ್ಯ ಬೇಡಿಕೆ ತಮಗೆ ಉದ್ಯೋಗ ಭದ್ರತೆ ನೀಡಬೇಕು. ನಮ್ಮನ್ನು ಖಾಯಂಗೊಳಿಸಬೇಕು. ವೇತನ ಹೆಚ್ಚಳ ಮಾಡಬೇಕು ಎಂಬುದಾಗಿತ್ತು. ಆದರೇ ಸರ್ಕಾರ ಇದ್ಯಾವುದರ ಬಗ್ಗೆಯೂ ಆದೇಶದಲ್ಲಿ ತಿಳಿಸಿಲ್ಲ. ಕೇವಲ ಸಾಮಾಜಿಕ ಭದ್ರತಾ ವಿಮಾ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂಬುದಾಗಿ ಹೇಳಿದೆ.
ಮುಂದಿನ ವಾರದಿಂದ ಎನ್ ಹೆಚ್ ಎಂ ನೌಕರರ ಪ್ರತಿಭಟನೆ, ಆರೋಗ್ಯ ಸೇವೆಯಲ್ಲಿ ವ್ಯತ್ಯಯ
ರಾಜ್ಯ ಸರ್ಕಾರದ ಇಂತಹ ನಿಲುವಿನ ವಿರುದ್ಧ ನೌಕರರು ಸಿಡೆದಿದ್ದಿದ್ದಾರೆ. ಮುಂದಿನ ವಾರದಿಂದ ಕರ್ತವ್ಯಕ್ಕೆ ಗೈರು ಹಾಜರಾಗಿ ಖಾಯಂ ಮಾಡಬೇಕು, ವೇತನ ಹೆಚ್ಚಳ ಮಾಡಬೇಕು ಎಂಬುದಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಲಿದ್ದಾರೆ. ಈ ವಿಚಾರ ಗಮನಕ್ಕೆ ಬಂದ ನಂತ್ರ ಕಣ್ಣೊರೆಸೋ ತಂತ್ರವೆನ್ನುವಂತೆ ಸರ್ಕಾರ ಇಂತದ್ದೊಂದು ಆದೇಶ ಮಾಡಿದೆ ಎಂಬುದಾಗಿ ನೌಕರರ ಆಕ್ರೋಶವಾಗಿದೆ. ಮುಂದಿನ ವಾರ ಆರೋಗ್ಯ ಇಲಾಖೆಯ ಎನ್ ಹೆಚ್ ಎಂ ನೌಕರರು ಪ್ರತಿಭಟನೆ ನಡೆಸುತ್ತಿರುವ ಕಾರಣ ರಾಜ್ಯಾಧ್ಯಂತ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಉಂಟಾಗೋ ಸಾಧ್ಯತೆ ಇದೆ.
ವರದಿ: ವಸಂತ ಬಿ ಈಶ್ವರಗೆರೆ