ಬೆಂಗಳೂರು: ಎಚ್ ಎಸ್ ಆರ್ ಪಿ (ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್) ಅಳವಡಿಕೆಯ ಗಡುವನ್ನು ವಿಸ್ತರಿಸುವ ಬಗ್ಗೆ ಸೆಪ್ಟೆಂಬರ್ 18 ರಂದು ಕರ್ನಾಟಕ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಸಿದ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಸಾರಿಗೆ ಮತ್ತು ರಸ್ತೆ ಸುರಕ್ಷತಾ ಇಲಾಖೆ ಶುಕ್ರವಾರ ತಿಳಿಸಿದೆ.
ಈ ಹಿಂದಿನ ವರದಿಗಳ ಪ್ರಕಾರ, ಸೆಪ್ಟೆಂಬರ್ 16 ರಿಂದ ಎಚ್ಎಸ್ಆರ್ಪಿ ಇಲ್ಲದ ವಾಹನ ಚಾಲಕರಿಗೆ 500 ರೂ ಮತ್ತು ಪುನರಾವರ್ತಿತ ಅಪರಾಧಿಗಳಿಗೆ 1,000 ರೂ ದಂಡ ವಿಧಿಸಲು ಸಾರಿಗೆ ಅಧಿಕಾರಿಗಳು ಯೋಜಿಸುತ್ತಿದ್ದಾರೆ. ಎಚ್ಎಸ್ಆರ್ಪಿ ಅಂಟಿಸುವ ಗಡುವು ಸೆಪ್ಟೆಂಬರ್ 15.ರಂದು ಕೊನೆಗೊಳ್ಳಲಿದೆ.
ತಪ್ಪಿತಸ್ಥ ವಾಹನ ಚಾಲಕರಿಗೆ ದಂಡ ವಿಧಿಸಲು ಅಥವಾ ಎಚ್ಎಸ್ಆರ್ಪಿ ಪಡೆಯಲು ಹೆಚ್ಚಿನ ಸಮಯವನ್ನು ನೀಡಲು ಇಲಾಖೆ ನಿರ್ಧರಿಸಿಲ್ಲ ಎಂದು ಕರ್ನಾಟಕದ ಸಾರಿಗೆ ಆಯುಕ್ತ ಯೋಗೇಶ್ ಎ.ಎಂ ಖಾಸಗಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಸಾರಿಗೆ ಇಲಾಖೆಯ ಪ್ರಕಾರ, ರಾಜ್ಯದ ಎರಡು ಕೋಟಿ ವಾಹನಗಳಲ್ಲಿ ಕೇವಲ 26 ಪ್ರತಿಶತದಷ್ಟು ವಾಹನಗಳು ಮಾತ್ರ ಎಚ್ಎಸ್ಆರ್ಪಿಯನ್ನು ಅಂಟಿಸಿವೆ. ನೀರಸ ಪ್ರತಿಕ್ರಿಯೆಯ ದೃಷ್ಟಿಯಿಂದ ಎಚ್ಎಸ್ಆರ್ಪಿ ಅಂಟಿಸುವ ಗಡುವನ್ನು ಈ ಹಿಂದೆ ಹಲವಾರು ಬಾರಿ ವಿಸ್ತರಿಸಲಾಗಿತ್ತು. ಗಡುವನ್ನು ಮತ್ತೊಮ್ಮೆ ವಿಸ್ತರಿಸುವ ಅಥವಾ ವಾಹನ ಚಾಲಕರ ವಿರುದ್ಧ ದಂಡ ವಿಧಿಸುವ ನಿರ್ಧಾರವನ್ನು ಸೆಪ್ಟೆಂಬರ್ 18 ರ ನ್ಯಾಯಾಲಯದ ವಿಚಾರಣೆಯ ನಂತರವೇ ತೆಗೆದುಕೊಳ್ಳಲಾಗುವುದು. ಅಲ್ಲಿಯವರೆಗೆ ವಾಹನ ಚಾಲಕರ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳುವುದಿಲ್ಲ” ಎಂದು ಯೋಗೇಶ್ ಹೇಳಿದರು.