ಮಂಡ್ಯ : ಮದ್ದೂರು ತಾಲೂಕಿನ ಜನತೆಗೆ ಉತ್ತಮ ಚಿಕಿತ್ಸೆ ಹಾಗೂ ಆರೋಗ್ಯದ ಸೌಲಭ್ಯಗಳ ದೃಷ್ಟಿಯಿಂದ ನಗರದಲ್ಲಿ ಟ್ರಾಮಾಕೇರ್ ಸೆಂಟರ್ ತೆರೆಯಲು ಸಚಿವರುಗಳ ಸಭೆಯಲ್ಲಿ ತೀರ್ಮಾನವಾಗಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಭಾನುವಾರ ಹೇಳಿದರು.
ಮದ್ದೂರು ನಗರದ ಶ್ರೀ ಗುರುಶಾಂತಪ್ಪ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಪ್ರಯೋಗಾಲಯ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಮದ್ದೂರು ನಗರದಲ್ಲಿ ಟ್ರಾಮಾಕೇರ್ ಸೆಂಟರ್ ಆರಂಭಿಸಲು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಆಡಳಿತಾವಧಿಯಲ್ಲಿ ತೀರ್ಮಾನವಾಗಿತ್ತು. ಆದರೆ ಬದಲಾದ ರಾಜಕೀಯ ಸನ್ನಿವೇಶದಿಂದ ಆ ಕನಸು ಈಡೇರಲಿಲ್ಲ. ಹೀಗಾಗಿ ಮದ್ದೂರಿನಲ್ಲಿಯೇ ಟ್ರಾಮಾ ಕೇರ್ ಸೆಂಟರ್ ತೆರೆಯಲು ಈಗಾಗಲೇ ಕಳೆದೆಂದು ತಿಂಗಳ ಹಿಂದೆಯೇ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಸೇರಿದಂತೆ ನಾನು ಕೂಡ ಅವರ ಜೊತೆಗೂಡಿ ಸಭೆ ನಡೆಸಲಾಗಿದ್ದು, ಸಭೆಯಲ್ಲೂ ಒಮ್ಮತದಿಂದ ನಿರ್ಣಯವಾಗಿದೆ. ಹೀಗಾಗಿ ನಗರದ ಅಭಿವೃದ್ಧಿ ದೃಷ್ಟಿಯಿಂದ ಮದ್ದೂರಿನಲ್ಲೆ ಟ್ರಾಮಾ ಕೇರ್ ಸೆಂಟರ್ ತೆರೆಯಲು ಸರ್ಕಾರದ ಮಟ್ಟದಲ್ಲಿ ಎಲ್ಲಾ ಪ್ರಕ್ರಿಯೆಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಅನುಮೋದನೆ ದೊರಯಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ರಕ್ತ ಪರೀಕ್ಷೆ ಸೇರಿದಂತೆ ವಿವಿಧ ಪರೀಕ್ಷೆಗಳು ಹಾಗೂ ಸೌಲಭ್ಯಗಳನ್ನು ಉಚಿತವಾಗಿ ಪಡೆದುಕೊಳ್ಳಬೇಕೆಂಬ ದೃಷ್ಟಿಯಿಂದ ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ 50 ಲಕ್ಷ ರೂ ವೆಚ್ಚದಲ್ಲಿ ಪ್ರಯೋಗಾಲಯವನ್ನು ನಿರ್ಮಿಸಲಾಗುತ್ತಿದೆ. ಮದ್ದೂರು ತಾಲೂಕು ಹಾಗೂ ನಗರದ ಜನಸಂಖ್ಯೆಗೆ ಅನುಗುಣವಾಗಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಸೌಲಭ್ಯಗಳಿಲ್ಲ. ಹೀಗಾಗಿ ನಾನು ಶಾಸಕನಾದ ಬಳಿಕ ಆಸ್ಪತ್ರೆಯ ಮೂಲ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೇನೆ ಎಂದರು.
ಈಗಾಗಲೇ ಆಸ್ಪತ್ರೆಯ ಆಧುನೀಕರಣ ಕಾಮಗಾರಿ 1.30 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, ಇಂದು ಪ್ರಯೋಗಾಲಯ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಇದರಿಂದ ತಾಲೂಕು ಹಾಗೂ ನಗರದ ಜನರಿಗೆ ಅನುಕೂಲವಾಗಲಿದೆ. ಇಷ್ಟು ದಿನಗಳ ಕಾಲ ಖಾಸಗಿ ಲ್ಯಾಬೋರೇಟರಿಗಳಲ್ಲಿ ನಡೆಯುತ್ತಿದ್ದ ದಂಧೆಗೆ ಇನ್ನು ಮುಂದೆ ಕಡಿವಾಣ ಬೀಳಲಿದೆ ಎಂದು ತಿಳಿಸಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ಹಲವಾರು ದಿನಗಳಿಂದ ಸಿಬ್ಬಂದಿ, ನುರಿತ ತಜ್ಞ ವೈದ್ಯರ ಕೊರತೆ ಸೇರಿದಂತೆ ಹಲವು ಸಮಸ್ಯೆಗಳಿವೆ. ಈಗಾಗಲೇ ಹಂತ ಹಂತವಾಗಿ ಆಧುನೀಕರಣ ಕಾಮಗಾರಿಗೆ ಒತ್ತು ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಸುಸಜ್ಜಿತವಾದ ಆಸ್ಪತ್ರೆ ನಿರ್ಮಾಣ ಮಾಡಲು ಕ್ರಮ ಕೈಗೊಂಡು ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಸಾರ್ವಜನಿಕರ ಸೇವೆಗೆ ಮತ್ತಷ್ಟು ಅನುಕೂಲಗಳನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಈ ಹಿಂದೆಯೇ ಆಸ್ಪತ್ರೆಗೆ ಶ್ರೀ ಗುರುಶಾಂತಪ್ಪ ಸಾರ್ವಜನಿಕ ಆಸ್ಪತ್ರೆ ಎಂದು ನಾಮಕರಣ ಮಾಡಲಾಗಿದೆ. ಆದರೆ ರೋಗಿಗಳಿಗೆ ನೀಡುವ ವೈದ್ಯರ ಚೀಟಿಯಲ್ಲಿ ಮದ್ದೂರು ಸಾರ್ವಜನಿಕ ಆಸ್ಪತ್ರೆ ಎಂದು ನಮೂದಾಗುತ್ತಿದೆ. ಹೀಗಾಗಿ ಮತ್ತೆ ಶ್ರೀ ಗುರುಶಾಂತಪ್ಪ ಸಾರ್ವಜನಿಕ ಆಸ್ಪತ್ರೆ ಎಂದು ವೈದ್ಯರ ಚೀಟಿಯಲ್ಲಿ ನಮೂದಿಸಬೇಕೆಂದು ಆರೋಗ್ಯ ರಕ್ಷಾ ಸಮಿತಿ ಸದಸ್ಯ ಗಿರೀಶ್ ಅವರು ಶಾಸಕ ಉದಯ್ ಅವರಿಗೆ ಮನವಿ ಸಲ್ಲಿಸಿದರು.
ಈ ವಿಚಾರವಾಗಿ ಮಾತನಾಡಿ, ಶುಕ್ರವಾರ ಆಸ್ಪತ್ರೆಯ ಕಛೇರಿಯಲ್ಲಿ ಸಭೆ ನಡೆಸಿ ಶ್ರೀ ಗುರುಶಾಂತಪ್ಪ ಸಾರ್ವಜನಿಕ ಆಸ್ಪತ್ರೆ ಎಂದು ನಮೂದಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಉದಯ್ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ಕೋಕಿಲ ಅರುಣ್, ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ವನಿತಾ, ಸದಸ್ಯರಾದ ಸಿದ್ದರಾಜು, ಎಂ.ಬಿ.ಸಚ್ಚಿನ್, ಕಮಲ್ ನಾಥ್, ಟಿಎಚ್ಓ ರವಿಶಂಕರ್, ಟಿಎಪಿಸಿಎಂಎಸ್ ಉಪಾಧ್ಯಕ್ಷ ರಾಘವಾ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ರಾಜೇಂದ್ರ, ಸಿದ್ದರಾಜು, ತಾ.ಎಸ್ಸಿ ಘಟಕದ ಅಧ್ಯಕ್ಷ ಮಹದೇವಯ್ಯ ಮುಖಂಡರಾದ ವಿಜಯ್ ಕುಮಾರ್, ನಿತಿನ್, ಮಹಾಲಿಂಗು ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
Watch Video: ವೃದ್ಧ ರೋಗಿಯನ್ನು 10 ನಿಮಿಷಗಳ ಕಾಲ ಕಪಾಳ ಮೋಕ್ಷ ಮಾಡಿದ ಇಂಟರ್ನ್ ವೈದ್ಯೆ: ವೀಡಿಯೋ ವೈರಲ್
BIG NEWS: ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರಿಗೆ ‘ಸಚಿವ ಸ್ಥಾನ’ ಫಿಕ್ಸ್!? | Karnataka Cabinet Expansion