ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು, ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನೂತನ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯವನ್ನು ಒದಗಿಸಲು ಕೆ ಎಸ್ ಆರ್ ಟಿಸಿ ಆರೋಗ್ಯ ಯೋಜನೆಗೆ ಇಂದು ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
ಈ ಕುರಿತಂತೆ ಕೆ ಎಸ್ ಆರ್ ಟಿಸಿಯ ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ. ಅದರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು/ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ವೈದ್ಯಕೀಯ ಚಿಕಿತ್ಸೆಯ ನಿಬಂಧನೆಗಳು -1970 ರನ್ವಯ ಹಾಗೂ ಸರ್ಕಾರದ ಮಾರ್ಗಸೂಚಿಗಳನ್ವಯ ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ನಿಗಮದ ಅಧಿಕಾರಿಗಳು/ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರು ಸರ್ಕಾರದ ಮಾನ್ಯತೆ ಹೊಂದಿರುವ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿ/ಹೊರ ರೋಗಿಯಾಗಿ ಪಡೆದ ವೈದ್ಯಕೀಯ ಚಿಕಿತ್ಸೆಯ ವೆಚ್ಚವನ್ನು CGHS 2014 ರ ದರಪಟ್ಟಿಯನ್ವಯ ಮರುಪಾವತಿ ಮಾಡಲಾಗುತ್ತಿದೆ. ಅಲ್ಲದೇ, ಅಧಿಕಾರಿಗಳು/ನೌಕರರು ಹಾಗೂ ಅವರ ಅವಲಂಬಿತ ಸದಸ್ಯರ ತುರ್ತು ಚಿಕಿತ್ಸೆಗೆ ಅನುಕೂಲವಾಗುವಂತೆ ಆಸ್ಪತ್ರೆಗಳಿಂದ ನೀಡುವ ಅಂದಾಜು ಪಟ್ಟಿಯನ್ವಯ ವೈದ್ಯಕೀಯ ಮುಂಗಡವನ್ನು ಮಂಜೂರು ಮಾಡುವ ಕ್ರಮ ಜಾರಿಯಲ್ಲಿರುತ್ತದೆ ಎಂದಿದ್ದಾರೆ.
ಈಗಿರುವ ವ್ಯವಸ್ಥೆಯಲ್ಲಿ ಖಾಸಗಿ ಆಸ್ಪತ್ರೆಗಳು CGHS ದರಗಳಿಗಿಂತ ಹೆಚ್ಚಿನ ದರಗಳನ್ನು ಅಂದರೆ, ಆಸ್ಪತ್ರೆಯ ದರಗಳನ್ನು ವಿಧಿಸುತ್ತಿರುತ್ತವೆ. ತತ್ಸಂಬಂಧ ನೌಕರರು ವೈದ್ಯಕೀಯ ಚಿಕಿತ್ಸೆಗಾಗಿ ಭರಿಸಿದ ಮೊತ್ತವು ಪೂರ್ಣ ಪ್ರಮಾಣದಲ್ಲಿ ಮರುಪಾವತಿಯಾಗುವುದಿಲ್ಲ. ಇದರಿಂದಾಗಿ ನೌಕರರು ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಸಂಸ್ಥೆಯು ನೌಕರರು ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ಉತ್ತಮ ವೈದ್ಯಕೀಯ ಸೌಲಭ್ಯವನ್ನು ಕಲ್ಪಿಸುವ ಸದುದ್ದೇಶವನ್ನು ಹೊಂದಿರುತ್ತದೆ. ಅಲ್ಲದೇ, ನಗದು ರಹಿತ ವೈದ್ಯಕೀಯ ವ್ಯವಸ್ಥೆಯನ್ನು ಜಾರಿಗೆ ತರುವುದು ನೌಕರರ ಬಹುದಿನಗಳ ಬೇಡಿಕೆ ಆಗಿರುತ್ತದೆ. ತತ್ಸಂಬಂಧ ಎಲ್ಲಾ ನೊಂದಾಯಿತ ಕಾರ್ಮಿಕ ಸಂಘಟನೆಗಳು ನೌಕರರ ವಂತಿಕೆಯೊಂದಿಗೆ (Contributory Scheme) ಉತ್ತಮ ನಗದು ರಹಿತಾ ವೈದ್ಯಕೀಯ ಚಿಕಿತ್ಸಾ ಯೋಜನೆಯನ್ನು ಜಾರಿಗೆ ತರುವಂತೆ ನಿರಂತರವಾಗಿ ಒತ್ತಾಯಿಸುತ್ತಿರುತ್ತವೆ ಎಂದು ಹೇಳಿದ್ದಾರೆ.
ದಿನಾಂಕ:13.11.2024 ರಂದು ನಡೆದ ಕರಾರಸಾ ನಿಗಮದ ನಿರ್ದೇಶಕ ಮಂಡಳಿಯ 456 ನೇ ಸಭೆಯಲ್ಲಿ ವಿಷಯವನ್ನು ಮಂಡಿಸಿದ್ದು, ನಿಗಮದ ಎಲ್ಲಾ ನೌಕರರು ಮತ್ತು ಅವಲಂಬಿತ ಕುಟುಂಬದ ಸದಸ್ಯರಿಗೆ ನೌಕರರ ಮಾಸಿಕ ವಂತಿಕೆಯೊಂದಿಗೆ (Contributory Scheme) ನಗದು ರಹಿತ ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆಯನ್ನು ರೂಪಿಸಲು ಮಂಡಳಿ ಠರಾವು ಸಂಖ್ಯೆ:10475/456 ರಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು/ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯವನ್ನು ಒದಗಿಸಲು ನೂತನ “ಕೆ.ಎಸ್.ಆರ್.ಟಿ.ಸಿ ಆರೋಗ” ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ನಿರ್ದೇಶಿಸಿದ್ದಾರೆ.