ಬೆಂಗಳೂರು: ರಾಜ್ಯದ ಕೆ ಎಸ್ ಆರ್ ಟಿಸಿ ನೌಕರರಿಗೆ ಗುಡ್ ನ್ಯೂಸ್ ಎನ್ನುವಂತೆ ನಗದು ರಹಿತ ಚಿಕಿತ್ಸಾ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇಂದು ಅಧಿಕೃತವಾಗಿ ಸಿಎಂ ಸಿದ್ಧರಾಮಯ್ಯ ಅವರು ಈ ಯೋಜನೆಯನ್ನು ಲೋಕಾರ್ಪಣೆಗೊಳಿಸಿದರು.
ಈ ಕುರಿತಂತೆ ಕೆ ಎಸ್ ಆರ್ ಟಿಸಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಇಂದು, (06.01.2025) ವಿಧಾನಸೌಧದ, ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು “ಕೆ.ಎಸ್.ಆರ್.ಟಿ.ಸಿ ಆರೋಗ್ಯ” ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದರು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದಂತ ಅವರು, ಈ ಯೋಜನೆಯು ಉತ್ತಮವಾಗಿದ್ದು, ನೌಕರರು ಮತ್ತು ಅವರ ಅವಲಂಬಿತ ಕುಟಂಬದ ಸದಸ್ಯರುಗಳು ಈ ಯೋಜನೆಯ ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ನಮ್ಮ ಸರ್ಕಾರವು ಕೆ.ಎಸ್.ಆರ್.ಟಿ.ಸಿ ನೌಕರರಿಗೆ ಒಳ್ಳೆಯ ಕಾರ್ಯ ಮಾಡುತ್ತಿದೆ. ಶಕ್ತಿ ಯೋಜನೆಯು ಜಾರಿಯಾದ ನಂತರ ಲಿಂಗ ತಾರತಮ್ಮ ಹೋಗಲಾಡಿಸಿ, ಆರ್ಥಿಕವಾಗಿ ಮಹಿಳೆಯರನ್ನು ಸಬಲೀಕರಣಗೊಳಿಸಿದೆ. ವೈದ್ಯರನ್ನು ಉದ್ದೇಶಿಸಿ ಮಾತನಾಡಿದ ಮಾನ್ಯರು, ಈ ಯೋಜನೆಯ ಫಲನಾಭವಿಗಳನ್ನು ಯಾವುದೇ ಕಾರಣಕ್ಕೂ ತಿರಸ್ಕಾರ ಮನೋಭಾವದಿಂದ ನೋಡಬಾರದು, ಆಸ್ಪತ್ರೆಗೆ ಬರುವ ಎಲ್ಲಾ ರೋಗಿಗಳಂತೆ ಪರಿಗಣಿಸುವಂತೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಕೆ.ಎಸ್. ಆರ್. ಟಿ.ಸಿ ಟ್ರಸ್ಟ್‌ಗೆ ರೂ.20 ಕೋಟಿಗಳ ಚಕ್‌ನ್ನು ಹಸ್ತಾಂತರಿಸಿದರು ಹಾಗೂ ಆಂತರಿಕ ನಿಯತಕಾಲಿಕ “ಸಾರಿಗೆ ಸಂಪದ” ಸಂಚಿಕೆಯನ್ನು ಹಾಗೂ ಕೆ.ಎಸ್.ಆರ್.ಟಿ.ಸಿ ಆರೋಗ್ಯ ಕೈಪಿಡಿಯನ್ನು ಬಿಡುಗಡೆಗೊಳಿಸಿದರು.
ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಈ ಯೋಜನೆಗೆ ಸುಮಾರು 34,000 ಸಿಬ್ಬಂದಿಗಳು ಮತ್ತು ಅವರ ಅವಲಂಬಿತರು (ಅಂದಾಜು 1.50 ಲಕ್ಷ) ಅರ್ಹರಾಗಿರುತ್ತಾರೆ. ರಾಜ್ಯದ ಸುಮಾರು 275 ಕ್ಕೂ ಹೆಚ್ಚಿನ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವುದಾಗಿ ತಿಳಿಸಿದರು. ಕಾರ್ಮಿಕ ಸಂಘಟನೆಗಳ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಿರುವುದಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಬೆಂ.ಮ.ಸಾ.ಸಂಸ್ಥೆ/ ವಾ.ಕ.ರ.ಸಾ. ಸಂಸ್ಥೆ/ ಕ.ಕ.ರ.ಸಾ.ಸಂಸ್ಥೆಗಳಲ್ಲೂ ಸಹ ಈ ಮುಂದಿನ ಮೂರು ತಿಂಗಳುಗಳಲ್ಲಿ ಜಾರಿಗೆ ತರುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಆಸ್ಪತ್ರೆಗಳ ಮುಖ್ಯಸ್ಥರುಗಳು ಒಡಂಬಡಿಕೆಯನ್ನು ಬದಲಾವಣೆ ಮಾಡಿಕೊಂಡರು.
ನೌಕರರ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆ
ನಿಗಮದಲ್ಲಿ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬ ನೌಕರರು ಉತ್ತಮ ಆರೋಗ್ಯವನ್ನು ಹೊಂದಿದ್ದಲ್ಲಿ ಮಾತ್ರ ನಿಗಮವು ಪ್ರಗತಿ ಕಾಣಲು ಸಾಧ್ಯ. “ಆರೋಗ್ಯವೇ ಭಾಗ್ಯ” ಎಂಬುದರಲ್ಲಿ ಎರಡು ಮಾತಿಲ್ಲ. ನೌಕರರೊಂದಿಗೆ, ಅವರ ಕುಟುಂಬದ ಆರೋಗ್ಯವು ಸುಸ್ಥಿತಿಯಲ್ಲಿದ್ದರೆ ಮಾತ್ರ ನೌಕರನು ನೆಮ್ಮದಿಯ ಮನಸ್ಥಿತಿಯಿಂದ ಕಾರ್ಯ ನಿರ್ವಹಿಸಲು ಸಾಧ್ಯ ಎಂಬುದನ್ನು ನಾವು ಬಲವಾಗಿ ನಂಬುತ್ತೇವೆ.
ಮೂಲತಃ ಸಾರಿಗೆ ವೃತ್ತಿಯು ಅತ್ಯಂತ ಕ್ಲಿಷ್ಟಕರವಾಗಿದ್ದು, ನೌಕರರು ತೀವ್ರ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವ ವಾತಾವರಣವಿರುವುದನ್ನು ನಾವು ಅಲ್ಲಗಳೆಯುವಂತಿಲ್ಲ. ನಿಗಮವು ಈಗಾಗಲೇ ತನ್ನ ನೌಕರರಿಗೆ ಉತ್ತಮವಾದ ಆರೋಗ್ಯ ಸೌಲಭ್ಯವನ್ನು ನೀಡುತ್ತಿದ್ದರೂ ಸಹ ಇನ್ನಷ್ಟು ಸಮರ್ಪಕ ಆರೋಗ್ಯ ಸೌಲಭ್ಯ ಒದಗಿಸುವುದು ನಮ್ಮ ಜವಾಬ್ದಾರಿಯಾಗಿರುತ್ತದೆ.
ಪ್ರಸ್ತುತ ನಿಗಮವು ಸರ್ಕಾರದಲ್ಲಿರುವಂತೆ ವೈದ್ಯಕೀಯ ವೆಚ್ಚ ಮರುಪಾವತಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು, ಸಿಬ್ಬಂದಿಗಳು ಮತ್ತು ಅವರ ಪತಿ/ಪತ್ನಿ ಹಾಗೂ ಅವಲಂಬಿತ ಮಕ್ಕಳು ಮತ್ತು ಪೋಷಕರಿಗೆ ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು CGHS-2014 ರ ದರದಲ್ಲಿ ಮರುಪಾವತಿ ಮಾಡಲಾಗುತ್ತಿದೆ.
ವೈದ್ಯಕೀಯ ಮರುಪಾವತಿ CHGS-2014ರ ದರವಾದ್ದರಿಂದ ಹೆಚ್ಚುವರಿ ವೆಚ್ಚಗಳನ್ನು ನೌಕರರೇ ಭರಿಸಬೇಕಾಗುತ್ತಿದೆ. ಹಾಗೂ ಚಿಕಿತ್ಸೆಗೆ ಮುಂಗಡವಾಗಿ ಹಣ ಪಾವತಿಸುವಲ್ಲಿ ನೌಕರರಿಗೆ ಆರ್ಥಿಕವಾಗಿ ಹೊರೆಯಾಗುವುದರಿಂದ ಸಂಪೂರ್ಣವಾಗಿ ನಗದು ರಹಿತ ಆರೋಗ್ಯ ಸೌಲಭ್ಯವನ್ನು ನೀಡಬೇಕೆಂಬುದು ನಿಗಮದ ಕಾರ್ಮಿಕರ ಮತ್ತು ಕಾರ್ಮಿಕ ಸಂಘಟನೆಗಳ ಬಹುದಿನಗಳ ಬೇಡಿಕೆಯಾಗಿರುತ್ತದೆ.
ನಗದು ರಹಿತ ಆರೋಗ್ಯ ಸೌಲಭ್ಯವನ್ನು ನೀಡಲು ಹೆಚ್ಚಿನ ಆರ್ಥಿಕ ಹೊರೆ ಆಗುವುದರಿಂದ ಸಂಸ್ಥೆಯ ಮೇಲೆ ಆರ್ಥಿಕ ಹೊರೆಯಾಗದಂತೆ ನೌಕರರಿಂದಲೂ ವಂತಿಕೆಯನ್ನು ಪಡೆದು “Participatory Scheme” ಉತ್ತಮ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆಯನ್ನು ಜಾರಿಗೊಳಿಸುವಂತೆ ನಿಗಮದ ಎಲ್ಲಾ ನೊಂದಾಯಿತ ಕಾರ್ಮಿಕ ಸಂಘಟನೆಗಳು ಸಹಮತಿ ಸಲ್ಲಿಸಿರುತ್ತಾರೆ.
ಕಾರ್ಮಿಕ ಸಂಘಟನೆಗಳ ಬೇಡಿಕೆ ಸಂಬಂಧ ಚರ್ಚಿಸಲು ದಿನಾಂಕ: 09.10.2024 ರಂದು ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರ ಅಧ್ಯಕ್ಷತೆಯಲ್ಲಿ ಹಾಗೂ ಮಾನ್ಯ ಅಧ್ಯಕ್ಷರು, ಕೆಎಸ್ಆರ್ಟಿಸಿರವರ ಉಪಸ್ಥಿತಿಯಲ್ಲಿ ನಡೆದ ನಿಗಮದ ಎಲ್ಲಾ ನೋಂದಾಯಿತ ಕಾರ್ಮಿಕ ಸಂಘಟನೆಗಳ ಸಭೆಯಲ್ಲಿನ ತೀರ್ಮಾನದಂತೆ ಯೋಜನೆಯನ್ನು ಜಾರಿಗೆ ತರಲಾಗಿದೆ.
ದಿನಾಂಕ: 08.11.2024 ರಂದು ನಿಗಮದ ಎಲ್ಲಾ ನೋಂದಾಯಿತ ಕಾರ್ಮಿಕ ಸಂಘಟನೆಗಳೊಂದಿಗೆ ಸಭೆ ನಡೆಸಿ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆಯ ರೂಪುರೇಷಗಳನ್ನು ಸಿದ್ದಪಡಿಸಲು ಸಲಹೆ/ಅಭಿಪ್ರಾಯ ಪಡೆಯಲಾಗಿರುತ್ತದೆ.
ಸದರಿ ಪ್ರಸ್ತಾವನೆಯನ್ನು ದಿನಾಂಕ: 13.11.2024 ರಂದು ಮಾನ್ಯ ಅಧ್ಯಕ್ಷರು ಕೆ.ಎಸ್.ಆರ್.ಟಿ.ಸಿ ರವರ ಅಧ್ಯಕ್ಷತೆಯಲ್ಲಿ ನಡೆದ ನಿರ್ದೇಶಕ ಮಂಡಳಿ ಸಭೆಯಲ್ಲಿಯೂ ಕೂಡ ಅನುಮೋದಿಸಲಾಗಿರುತ್ತದೆ.
ಕೆಎಸ್ಆರ್ಟಿಸಿ ಆರೋಗ್ಯ ನಗದು ರಹಿತ ಚಿಕಿತ್ಸಾ ಯೋಜನೆಯ ರೂಪುರೇಷೆಗಳು:
ನಿಗಮದ ಎಲ್ಲಾ 34000 ನೌಕರರು ಈ ಯೋಜನೆಗೆ ಅರ್ಹರಾಗಿರುತ್ತಾರೆ.
ನೌಕರ, ಪತ್ನಿ/ಪತಿ ಅವಲಂಬಿತ ಮಕ್ಕಳು ಮತ್ತು ಅವಲಂಬಿತ ತಂದೆ ಮತ್ತು ತಾಯಿ ಯೋಜನೆಯಲ್ಲಿ ಒಳಗೊಳ್ಳುತ್ತಾರೆ.
ಕಣ್ಣಿನ ಹಾಗೂ ದಂತ ಚಿಕಿತ್ಸಾ ವೆಚ್ಚವೂ ಸಹ ಯೋಜನೆಯಲ್ಲಿ ಒಳಗೊಂಡಿರುತ್ತದೆ.
ಒಳರೋಗಿ ಚಿಕಿತ್ಸಾ ವೆಚ್ಚಕ್ಕೆ ಯಾವುದೇ ಗರಿಷ್ಠ ಮೊತ್ತ ನಿಗದಿಯಿಲ್ಲ.
ಆಯುರ್ವೇದ, ಪ್ರಕೃತಿ, ಯುನಾನಿ & ಹೋಮಿಯೋಪತಿ ಚಿಕಿತ್ಸೆಗಳು.
ಪ್ರಾರಂಭದಲ್ಲಿ 275 ಆಸ್ಪತ್ರೆಗಳಲ್ಲಿ ಹಾಗೂ 4 Diagnostics Center ಗಳಲ್ಲಿ CGHS-2014ರ ದರಪಟ್ಟಿಯಂತೆ IP/OPD ನಗದು ರಹಿತ ಚಿಕಿತ್ಸೆಗಾಗಿ ಒಡಂಬಡಿಕೆ ಮಾಡಿಕೊಳ್ಳಲಾಗುವುದು.
ಆಯ್ಕೆ ಮಾಡಿಕೊಂಡ ಆಸ್ಪತ್ರೆಗಳೊಂದಿಗೆ 3+1+1 ವರ್ಷದ ಅವಧಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತದೆ.
ತಂದೆ ಮತ್ತು ತಾಯಿಯ ಒಟ್ಟು ಮಾಸಿಕ ಆದಾಯ ಚಾಲ್ತಿಯಲ್ಲಿರುವ ಕನಿಷ್ಠ ಪಿಂಚಣಿ ರೂ.13500 + ತುಟ್ಟಿ ಭತ್ಯೆಯನ್ನು ಒಳಗೊಂಡ ಮೊತ್ತವನ್ನು ಮೀರಿರಬಾರದು.
ನೂತನ “KSRTC Arogya” ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನಿಗಮದ ವತಿಯಿಂದ ಪ್ರಾರಂಭಿಕ ರೂ.20.00 ಕೋಟಿಗಳನ್ನು Corpus fund ನಿಂದ ಪಾವತಿಸಲಾಗುವುದು. ನಿಗಮದ ಅಧಿಕಾರಿ ಮತ್ತು ಸಿಬ್ಬಂದಿಗಳ ವೇತನದಿಂದ ಮಾಸಿಕ ರೂ.650/- ಗಳನ್ನು ವಂತಿಕೆ ರೂಪದಲ್ಲಿ ಕಡಿತಗೊಳಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ “KSRTC Arogya” ನ್ಯಾಸ ಮಂಡಳಿಯನ್ನು, ನ್ಯಾಸ ಮಂಡಳಿಯ ಮುಖ್ಯ ಸಮಿತಿಯ ಧರ್ಮದರ್ಶಿಗಳು ಹಾಗೂ ಇಬ್ಬರು ಮಹಿಳಾ ಹಾಗೂ ಇಬ್ಬರು ಪುರುಷ ನೌಕರರನ್ನೊಳಗೊಂಡAತೆ ರಚಿಸಲಾಗಿದೆ.
ನಿಗಮದ ಅಧಿಕಾರಿ ಮತ್ತು ಸಿಬ್ಬಂದಿಗಳ ವೇತನದಿಂದ ಮಾಸಿಕ ರೂ.650/- ಗಳನ್ನು ವಂತಿಕೆ ರೂಪದಲ್ಲಿ ಕಡಿತಗೊಳಿಸಲಾಗಿದೆ. ನಂತರದ ವರ್ಷದಲ್ಲಿ ಪ್ರತಿ ನೌಕರರ ವಂತಿಕೆಯನ್ನು ರೂ.50/- ರಂತೆ ಪ್ರತಿ ವರ್ಷ ಹೆಚ್ಚಿಸಲಾಗುವುದು ಹಾಗೂ ಈ ಸೌಲಭ್ಯವನ್ನು ತರಬೇತಿ ನೌಕರರಿಗೂ ನೀಡುತ್ತಿದ್ದು, ಇವರಿಂದ ಯಾವುದೇ ವಂತಿಕೆ ಕಡಿತಗೊಳಿಸುವುದಿಲ್ಲ. ಎಲ್ಲಾ ನೌಕರರಿಗೆ ಪ್ರತ್ಯೇಕ ಹೆಲ್ತ್ ಕಾರ್ಡ್ ವಿತರಿಸಲಾಗುವುದು.
ನಿಗಮವು ಪ್ರತಿ ವರ್ಷ ರೂ.20 ಕೋಟಿ ಹಣವನ್ನು ಸದರಿ ಯೋಜನೆಗೆ ಮೀಸಲಿಡಲಿದ್ದು, ವಂತಿಕೆಯನ್ನು ಪ್ರತಿ ವರ್ಷ ಶೇಕಡ 5 ರಷ್ಟು ದರದಲ್ಲಿ ಹೆಚ್ಚಿಸಲಾಗುವುದು. ವಂತಿಕೆಯನ್ನು ಡಿಸೆಂಬರ್-2024 ವೇತನದಿಂದ ಕಡಿತಗೊಳಿಸಲು ಪ್ರಾರಂಭಿಸಲಾಗುವುದು. CGHS-2014ರ ದರಪಟ್ಟಿಯಲ್ಲಿ ಇಲ್ಲದ ವಸ್ತುಗಳಿಗೆ ಮಾತ್ರ ನೌಕರರೇ ಪಾವತಿಸುವುದು ಉದಾ: Consumables. ನಿಗಮವು 30 ದಿನಗಳೊಳಗಾಗಿ ಚಿಕಿತ್ಸೆಯ ವೆಚ್ಚದ ಮೊತ್ತವನ್ನು ಆಸ್ಪತ್ರೆಗೆ ಪಾವತಿಸುತ್ತದೆ.
ಇತರೇ ಆಸ್ಪತ್ರೆಗಳಲ್ಲಿ ಚಿಕಿತ್ಸೆ IP/OPD ಪಡೆದ ಪ್ರಕರಣಗಳಲ್ಲಿ ಹಾಲಿ ಇರುವ ಪದ್ಧತಿಯನ್ವಯ ಮರುಪಾವತಿ ಮುಂದುವರೆಯಲಿದೆ. ನೌಕರರ ಮತ್ತು ಅವರ ಕುಟುಂಬದವರ ಸಮಸ್ತ ವಿವರಗಳನ್ನು ಸಾರಿಗೆ ಮಿತ್ರ (HRMS) ನಲ್ಲಿ ದಾಖಲಿಸಲಾಗಿರುತ್ತದೆ.
ಈ ಕೆಳಕಂಡ ಸ್ಥಳಗಳಲ್ಲಿ ಆಸ್ಪತ್ರೆಗಳನ್ನು ಗುರುತಿಸಲಾಗಿದೆ.
ಬೆಂಗಳೂರು, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಮಂಗಳೂರು, ಪುತ್ತೂರು, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಕಲಬುರ್ಗಿ, ಯಾದಗಿರಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ವಿಜಯಪುರ, ಹೊಸಪೇಟೆ, ಬೆಳಗಾವಿ, ಹುಬ್ಬಳ್ಳಿ, ಧಾರವಾದ, ಕಾರವಾರ, ಶಿರಸಿ, ಬಾಗಲಕೋಟೆ, ಗದಗ, ಚಿಕ್ಕೋಡಿ, ಹಾವೇರಿ.
ಕರಾರಸಾ ನಿಗಮದ ಎಲ್ಲಾ ನೌಕರರು ಮತ್ತು ಅಧಿಕಾರಿಗಳಿಗೆ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಹಯೋಗದೊಂದಿಗೆ ಹತ್ತು ಮಾದರಿಯ ಹೃದಯ ಸಂಬಂಧಿ ವೈದ್ಯಕೀಯ ತಪಾಸಣೆಗಳು.
ಈ ಹಿಂದೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯವರೊಂದಿಗೆ ದಿನಾಂಕ 02-11-2023 ರಂದು 5 ವರ್ಷಗಳ ಅವಧಿಗೆ ಒಡಂಬಡಿಕೆ ಮಾಡಲಾಗಿದೆ. 40 ವರ್ಷ ಹಾಗೂ ಮೇಲ್ಪಟ್ಟ ಸುಮಾರು 21,000 ನೌಕರರಿಗೆ ಉಚಿತ ಆರೋಗ್ಯ ತಪಾಸಣೆಗೆ ಅವಕಾಶ ಮಾಡಿಕೊಡಲಾಗಿದೆ. ನಿಗಮವು ಪ್ರತಿ ನೌಕರರ ತಪಾಸಣೆಗೆ ವಾರ್ಷಿಕ ರೂ 2.55 ಕೋಟಿ ಭರಿಸಲಿದ್ದು, ಇದುವರೆಗೆ 11828 ಸಿಬ್ಬಂದಿಗಳನ್ನು ಹೃದಯ ಸಂಬಂಧಿ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ. ಸದರಿ ಪರೀಕ್ಷೆಗಳಿಗೆ ಒಳಪಡಿಸುತ್ತಿರುವ ಹಿನ್ನೆಲೆಯಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಮರಣವಾಗುತ್ತಿದ್ದ ಸಿಬ್ಬಂದಿಗಳ ಪ್ರಮಾಣ 40.74% ರಿಂದ 7.69% ಕ್ಕೆ ಇಳಿಕೆಯಾಗಿರುತ್ತದೆ. 41 ಸಿಬ್ಬಂದಿಗಳಿಗೆ ಸ್ಟೆಂಟ್ ಅಳವಡಿಸಲಾಗಿದೆ ಹಾಗೂ ಗಂಭೀರ ಹೃದಯ ಆರೋಗ್ಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ 8 ಸಿಬ್ಬಂದಿಗಳು ತೆರೆದ ಹೃದಯದ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುತ್ತಾರೆ.
ಅಧ್ಯಕ್ಷರು, ಕರಾರಸಾ ನಿಗಮ ಹಾಗೂ ಶಾಸಕರು, ಗುಬ್ಬಿ ವಿಧಾನಸಭಾ ಕ್ಷೇತ್ರ ಅವರು ಕಾರ್ಯಕ್ರಮದಲ್ಲಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರತಿ ದಿನ 8849 ವಾಹನಗಳ ಮೂಲಕ 8068 ಅನುಸೂಚಿಗಳಿಂದ 28.50 ಲಕ್ಷ ಕಿ.ಮೀ ಕ್ರಮಿಸಿ 34.92 ಲಕ್ಷ ಪ್ರಯಾಣಿಕರಿಗೆ ಸಾರಿಗೆ ಸೇವೆಯನ್ನು ಒದಗಿಸುತ್ತಿದ್ದು, ಇದರಲ್ಲಿ ಶೇ.17 ರಷ್ಟು ವಿದ್ಯಾರ್ಥಿಗಳಿಗೆ ಸಾರಿಗೆ ಸೇವೆಯನ್ನು ಕಲ್ಪಿಸಲಾಗುತ್ತಿದೆ. ದೇಶದ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿಯೇ 24,282 ಬಸ್ಸುಗಳನ್ನು ಹೊಂದಿದ್ದು, ಪ್ರಥಮ ಸ್ಥಾನದಲ್ಲಿದೆ. ಇದರ ಅರ್ಥ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳನ್ನು ಸಶಕ್ತಗೊಳಿಸಿದೆ.
ನಮ್ಮ ಸರ್ಕಾರವು ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ 5800 ಹೊಸ ಬಸ್ಸುಗಳ ಸೇರ್ಪಡೆಗೆ ಅನುಮೋದನೆ ನೀಡಿದ್ದು, ಈ ಪೈಕಿ ನಾಲ್ಕು ನಿಗಮಗಳಲ್ಲಿ ಕಳೆದ ಒಂದು ವರ್ಷದಲ್ಲಿ 4301 ಬಸ್ಸುಗಳನ್ನು ಸೇರ್ಪಡೆಗೊಳಿಸಲಾಗಿದೆ. ನಾಲ್ಕು ನಿಗಮಗಳಲ್ಲಿ 9000 ಹುದ್ದೆಗಳ ನೇಮಕಾತಿಗೆ ನಮ್ಮ ಸರ್ಕಾರವು ಅನುಮತಿ ನೀಡಿದ್ದು, ಈ ಪೈಕಿ 2144 ಚಾಲಕ ಕಂ ನಿರ್ವಾಹಕ ಹಾಗೂ ತಾಂತ್ರಿಕ ಸಿಬ್ಬಂದಿಗಳಿಗೆ ನೇಮಕಾತಿ ಆದೇಶ ನೀಡಲಾಗಿದೆ. 6856 ಹುದ್ದೆಗಳ ನೇಮಕಾತಿಗೆ ಪ್ರಕ್ರಿಯೆ ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು.
ಶಕ್ತಿ ಯೋಜನೆ ನಿಗಮಗಳ ವಾಹನಗಳಲ್ಲಿ 363 ಕೋಟಿ ಮಹಿಳೆಯರು ಪ್ರಯಾಣಿಸಿದ್ದು ಅವರ ಪ್ರಯಾಣದ ಶೂನ್ಯ ಟಿಕೇಟ್ ಮೌಲ್ಯ ರೂ. 8782.39 ಕೋಟಿಗಳಾಗಿರುತ್ತದೆ. ಮಹಿಳಾ ಪ್ರಯಾಣಿಕರ ಪ್ರಯಾಣದ ಪ್ರಮಾಣ ಶೇ.58.10 ಆಗಿರುತ್ತದೆ. ಶಕ್ತಿ ಯೋಜನೆ ಜಾರಿಗೆ ಮುನ್ನ ನಾಲ್ಕು ನಿಗಮಗಳ ವಾಹನಗಳಲ್ಲಿ ಸರಾಸರಿ 82.51 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಪ್ರಸ್ತುತ 108.09 ಲಕ್ಷಗಳಿಗೆ ಹೆಚ್ಚಳವಾಗಿರುತ್ತದೆ. ಶಕ್ತಿ ಯೋಜನೆ ಜಾರಿಗೆ ಬರುವ ಮುನ್ನ ಪ್ರತಿದಿನ ನಾಲ್ಕು ನಿಗಮಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆಗೊಳಿಸುತ್ತಿದ್ದ 1,54,955 ಟ್ರಿಪ್ಗಳ ಪ್ರಮಾಣವನ್ನು 1,74,908 ಟ್ರಿಪ್ಗಳಿಗೆ ಹೆಚ್ಚಿಸಲಾಗಿದೆ, ಪ್ರತಿ ದಿನ 19,953 ಹೆಚ್ಚುವರಿ ಟ್ರಿಪ್ಪುಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.
ಕಳೆದ ಒಂದುವರೆ ವರ್ಷದ ಅವಧಿಯಲ್ಲಿ ನಾಲ್ಕು ನಿಗಮಗಳಲ್ಲಿ 1004 ಮೃತ ಸಿಬ್ಬಂದಿಗಳ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿ, ಆದೇಶ ನೀಡಲಾಗಿದೆ.
ಸಾರಿಗೆ ಸುರಕ್ಷಾ ರೂ. 1 ಕೋಟಿ ಅಪಘಾತ ಪರಿಹಾರ ವಿಮಾ ಯೋಜನೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ಸಿಬ್ಬಂದಿಗಳ ಅವಲಂಬಿತರ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕರ್ತವ್ಯದಲ್ಲಿರುವಾಗ ಅಥವಾ ಕರ್ತವ್ಯದಲ್ಲಿಲ್ಲದ ಸಂದರ್ಭದಲ್ಲಿ ಅಪಘಾತದಿಂದ ಮೃತಪಟ್ಟಲ್ಲಿ ರೂ.1 ಕೋಟಿ ಅಪಘಾತ ವಿಮಾ ಪರಿಹಾರ ಒದಗಿಸುವ ಸಾರಿಗೆ ಸುರಕ್ಷಾ ಅಪಘಾತ ವಿಮಾ ಯೋಜನೆಯನ್ನು ಜಾರಿಗೆ ತಂದಿರುತ್ತದೆ.
ಇದುವರೆವಿಗೂ 22 ಜನ ನೌಕರರ ಕುಟುಂಬದವರಿಗೆ ತಲಾ ರೂ. 1 ಕೋಟಿಗಳ ಅಪಘಾತ ವಿಮಾ ಮೊತ್ತವನ್ನು ಈಗಾಗಲೇ ವಿತರಿಸಲಾಗಿದೆ. ಇಂದು, ಖಾಸಗಿ ಅಪಘಾತಕ್ಕೆ ಒಳಪಟ್ಟು ಮೃತಪಟ್ಟ ಇಬ್ಬರು ಅವಲಂಬಿತರಿಗೆ ತಲಾ ರೂ. 1 ಕೋಟಿ ಚೆಕ್ ನೀಡಲಾಗಿದೆ. ಈವರೆಗೂ 24 ಸಿಬ್ಬಂದಿಗಳ ಅವಲಂಭಿತರಿಗೆ ರೂ.24 ಕೋಟಿ ಪರಿಹಾರ ನೀಡಲಾಗಿದೆ.
ನೌಕರರ ಕುಟುಂಬ ಕಲ್ಯಾಣ ಪರಿಹಾರ ಯೋಜನೆ:
ಹೃದಯಾಘಾತ, ಕ್ಯಾನ್ಸರ್, ಸ್ಟ್ರೋಕ್ ಮತ್ತಿತರ ಕಾರಣಗಳಿಂದ ಮರಣವನ್ನಪ್ಪುವ ನೌಕರರ ಸಂಖ್ಯೆಯು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿರುವ ವಿಷಯವನ್ನು ಮನಗಂಡು, ಈ ಕಾರಣದಿಂದ ಮೃತರಾಗುವ ಕುಟುಂಬದ ಅವಲಂಬಿತರು ಅನುಭವಿಸುವ ಕಷ್ಟಗಳನ್ನು ಗಮನಿಸಿ, ಅವರಿಗೆ ನೆರವಾಗಲು ಹೆಚ್ಚಿನ ಮೊತ್ತದ ಪರಿಹಾರವನ್ನು ನೀಡುವ ಸದುದ್ದೇಶದಿಂದ ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳಿಂದ ಬೇಡಿಕೆ ಬಂದ ಹಿನ್ನಲೆಯಲ್ಲಿ ನೌಕರರ ಕುಟುಂಬ ಕಲ್ಯಾಣ ಯೋಜನೆಯಡಿ ನೀಡಲಾಗುತ್ತಿದ್ದ ಪರಿಹಾರ ಮೊತ್ತವಾದ ರೂ. 3 ಲಕ್ಷಗಳನ್ನು ದಿನಾಂಕ: 01.11.2023 ರಿಂದ ರೂ.10 ಲಕ್ಷಗಳಿಗೆ ಹೆಚ್ಚಿಸಿ ಮರಣ ಪ್ರಕರಣಗಳಿಗೆ ಅನ್ವಯವಾಗುವಂತೆ ಜಾರಿಗೆ ತರಲಾಗಿರುತ್ತದೆ.
ಈ ಪರಿಷ್ಕೃತ ಪರಿಹಾರ ಯೋಜನೆ ಅಡಿ ಇದುವರೆವಿಗೂ 81 ಪ್ರಕರಣಗಳಲ್ಲಿ ರೂ.10 ಲಕ್ಷಗಳ ಪರಿಹಾರ ಧನವನ್ನು ನೀಡಿದ್ದು, ನಂತರದಲ್ಲಿ ಕಾಯಿಲೆಗಳಿಂದ ಮರಣ ಹೊಂದಿದ 13 ಸಿಬ್ಬಂದಿಗಳ ಅರ್ಹ ಪ್ರಕರಣಗಳಲ್ಲಿ ಕುಟುಂಬದ ಸದಸ್ಯರಿಗೆ ತಲಾ ರೂ.10.00 ಲಕ್ಷಗಳ ಪರಿಹಾರದ ಚೆಕ್ ಅನ್ನು ಇಂದು ವಿತರಿಸಲಾಯಿತ್ತು. 94 ಸಿಬ್ಬಂದಿಗಳ ಅವಲಂಭಿತರಿಗೆ ರೂ. 9.40 ಕೋಟಿಗಳ ಪರಿಹಾರ ನೀಡಲಾಗಿದೆ.
ಬಸ್ಸುಗಳ ಪುನಶ್ಚೇತನ ಕಾರ್ಯ:
ಕೋವಿಡ್ ನಂತರ ಪ್ರಯಾಣಿಕರ ಬೇಡಿಕೆ ಹೆಚ್ಚಾದಾಗ ನೂತನ ವಾಹನಗಳನ್ನು ಖರೀದಿಸಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿದ್ದಾಗ 9 ರಿಂದ 10 ಲಕ್ಷ ಕಿ.ಮೀ ಕ್ರಮಿಸಿ ಕವಚ ದುರಸ್ಥಿಯಿಂದ ಕೂಡಿದ ಹಳೆಯ ವಾಹನಗಳನ್ನು ಪುನಶ್ಚೇತನಗೊಳಿಸಲು ಯೋಜನೆಯನ್ನು ರೂಪಿಸಿ, ನಿಗಮದ 2 ಪ್ರಾದೇಶಿಕ ಕಾರ್ಯಾಗಾರಗಳಲ್ಲಿ ಈ ಕಾರ್ಯವನ್ನು ಆರಂಭಿಸಲಾಯಿತು. ಈವರೆಗೂ ಎರಡು ಪ್ರಾದೇಶಿಕ ಕಾರ್ಯಗಾರಗಳಲ್ಲಿ ಹಾಗೂ ವಿಭಾಗಗಳು ಸೇರಿದಂತೆ ಒಟ್ಟಾರೆ 1227 ಹಳೆಯ ವಾಹನಗಳನ್ನು ಪುನಶ್ಚೇತನಗೊಳಿಸಲಾಗಿದೆ. ಇದೇ ರೀತಿ ಇತ್ತೀಚೆಗೆ 10 ರಿಂದ 11 ವರ್ಷಗಳ ಕಾರ್ಯಾಚರಣೆ ಮಾಡಿದ ಪ್ರತಿಷ್ಟಿತ ಹವಾನಿಯಂತ್ರಿತ ವಾಹನಗಳನ್ನೂ ಸಹ ಪುನಶ್ಚೇತನಗೊಳಿಸುತ್ತಿದ್ದು, ಇದುವರೆವಿಗೂ 6 ಪ್ರತಿಷ್ಠಿತ ಹವಾನಿಯಂತ್ರಿತ ವಾಹನಗಳನ್ನು ಪುನಶ್ಚೇತನಗೊಳಸಲಾಗಿದೆ.
ನಿಗಮವು 2024ನೇ ವರ್ಷವನ್ನು ಪ್ರಯಾಣಿಕ ಸ್ನೇಹಿ ವರ್ಷವೆಂದು ಘೋಷಣೆ ಮಾಡಿದೆ.
ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಅಪಘಾತದಿಂದ ಮೃತಪಟ್ಟ ಸಂದರ್ಭದಲ್ಲಿ ಪ್ರಯಾಣಿಕರ ವಾರಸುದಾರರಿಗೆ ಅಪಘಾತ ಪರಿಹಾರ ನಿಧಿಯಿಂದ ಈ ಹಿಂದೆ ರೂ.3.00 ಲಕ್ಷಗಳ ಪರಿಹಾರವನ್ನು ನೀಡಲಾಗುತ್ತಿದ್ದು, ಸದರಿ ಮೊತ್ತವನ್ನು ದಿನಾಂಕ 01-01-2024 ರಿಂದ ಜಾರಿಗೆ ಬರುವಂತೆ ಈ ಪರಿಹಾರ ಮೊತ್ತವನ್ನು ರೂ. 3 ಲಕ್ಷದಿಂದ ರೂ. 10 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೇಟಿಂಗ್ ವ್ಯವಸ್ಥೆ:
ಪ್ರಯಾಣಿಕರಿಗೆ ಗರಿಷ್ಠ ಪ್ರಯಾಣ ಸೌಕರ್ಯ, ಅನುಕೂಲತೆ, ಸುರಕ್ಷತೆ ಮತ್ತು ಪರಿಚಿತತೆಯನ್ನು ಖಚಿತಪಡಿಸುವುದು ಕ.ರಾ.ರ.ಸಾ. ನಿಗಮದ ಮಾರ್ಗದರ್ಶಿ ತತ್ವವಾಗಿದೆ. ಲಭ್ಯವಿರುವ ತಂತ್ರಜ್ಞಾನದ ಪ್ರಕಾರ ಬಸ್ಗಳಲ್ಲಿ ಟಿಕೇಟ್ ವಿತರಿಸುವಾಗ ಡಿಜಿಟಲ್ ಪಾವತಿಗೆ ಅವಕಾಶ ಮಾಡಿಕೊಡಬೇಕೆಂಬ ಸಾರ್ವಜನಿಕ ಪ್ರಯಾಣಿಕರ ಬಹುದಿನಗಳ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ನಿಗಮವು ಪ್ರಯಾಣಿಕರಿಗೆ ಟಿಕೆಟ್ ಮತ್ತು ಪಾಸ್ಗಳ ವಿತರಣೆಯ ಸಮಯದಲ್ಲಿ ಡಿಜಿಟಲ್ ಪಾವತಿಗಳನ್ನು ಸಕ್ರಿಯಗೊಳಿಸುವ ಮೂಲಕ ಬಳಕೆದಾರ ಸ್ನೇಹಿ ಟಿಕೆಟಿಂಗ್ ಯಂತ್ರಗಳು ಮತ್ತು ಟಿಕೆಟಿಂಗ್ ತಂತ್ರಾಂಶವನ್ನು ಜಾರಿಗೆ ತಂದಿದೆ
ಇದು 4G/Wi-Fi ಮೂಲಕ ಕೇಂದ್ರೀಕೃತ ಸರ್ವರ್ಗೆ ನೈಜ ಸಮಯದ ಟಿಕೆಟ್ ಮಾಹಿತಿಯನ್ನು ವರ್ಗಾಯಿಸಲು Android ಆಧಾರಿತ ಸಾಧನವಾಗಿದೆ. ಸಾಧನವು QR ಕೋಡ್ ಮತ್ತು UPI/Debit/Credit card ಮತ್ತು ಇತರ ಡಿಜಿಟಲ್ ವಹಿವಾಟುಗಳನ್ನು ಬೆಂಬಲಿಸುವ RFID ರೀಡರ್ಗಳೊಂದಿಗೆ ಅಂತರ್ಗತವಾಗಿರುತ್ತದೆ. ಈ ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟಿಂಗ್ Dynamic QR Code ವ್ಯವಸ್ಥೆಯನ್ನು ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮವಾಗಿ ಪರಿಚಯಿಸಲಾಗಿದೆ.
ಸಾರಿಗೆ ವಿದ್ಯಾ ಚೇತನ:
ಕ.ರಾ.ರ.ಸಾ. ನಿಗಮದ ಸಿಬ್ಬಂದಿಗಳ ಮಕ್ಕಳಿಗೆ ವಿದ್ಯಾ ಸಹಾಯ ನಿಧಿ ಅಡಿಯಲ್ಲಿ ʼಸಾರಿಗೆ ವಿದ್ಯಾ ಚೇತನʼ ಯೋಜನೆ ಜಾರಿಗೊಳಿಸಿ ಶಿಕ್ಷಣಕ್ಕೆ ಸ್ಕಾಲರ್‌ಶಿಪ್ ನೀಡಲಾಗುತ್ತಿದೆ. 2023-24 ಹಾಗೂ 2024-25ನೇ ಸಾಲಿನಲ್ಲಿ 5052 ಫಲಾನುಭವಿಗಳಿಗೆ ರೂ. 2.51 ಕೋಟಿ ಸ್ಕಾಲರ್‌ಶಿಪ್ ನೀಡಲಾಗಿದ್ದು, ಸದರಿ ಕಾರ್ಯವು ಪ್ರಗತಿಯಲ್ಲಿದೆ.
ನಿಗಮಕ್ಕೆ ಲಭಿಸಿರುವ ಪ್ರಶಸ್ತಿಗಳು:
ಕಳೆದ ಒಂದು ವರ್ಷದ ಅವಧಿಯಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ 112 ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿರುತ್ತದೆ.
ಈ ಕಾರ್ಯಕ್ರಮದಲ್ಲಿ ಡಾ. ಶಾಲಿನಿ ರಜನೀಶ್, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಅಶೋಕ್ ಮಹದೇವಪ್ಪ ಪಟ್ಟಣ, ಮಾನ್ಯ ಸರ್ಕಾರಿ ಮುಖ್ಯ ಸಚೇತಕರು, ನಯನ ಮೋಟ್ಟಮ್ಮ, ಶಾಸಕರು, ಮೂಡಿಗೆರೆ ವಿಧಾನಸಭಾ ಕ್ಷೇತ್ರ, ಮೊಹಮ್ಮದ್ ರಿಜ್ವಾನ್ ನವಾಬ್, ಉಪಾಧ್ಯಕ್ಷರು, ಕರಾರಸಾ ನಿಗಮ, ಸರ್ಕಾರದ ಕಾರ್ಯದರ್ಶಿಗಳು, ಸಾರಿಗೆ ಇಲಾಖೆ, ವ್ಯವಸ್ಥಾಪಕ ನಿರ್ದೇಶಕರು, ಕರಾರಸಾ ನಿಗಮ, ವ್ಯವಸ್ಥಾಪಕ ನಿರ್ದೇಶಕರು, ಬೆಂ.ಮ.ಸಾ. ಸಂಸ್ಥೆ, ನಿರ್ದೇಶಕರು (ಸಿಬ್ಬಂದಿ ಮತ್ತು ಜಾಗೃತ), ಕಾರ್ಮಿಕ ಮುಖಂಡರುಗಳು, ವಿವಿಧ ಆಸ್ಪತ್ರಗಳ ಮುಖ್ಯಸ್ಥರುಗಳು ಹಾಗೂ ಕರಾರಸಾ ನಿಗಮದ ಅಧಿಕಾರಿಗಳು ಭಾಗವಹಿಸಿದ್ದರು.
BREAKING: ನಟ ದರ್ಶನ್ ಗೆ ಮತ್ತೊಂದು ಸಂಕಷ್ಟ: ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್ ಗೆ ಅರ್ಜಿ | Actor Darshan
BIG UPDATE : ಕರ್ನಾಟಕದಲ್ಲಿ 2 ‘HMPV’ ಸೋಂಕು ಧೃಡ : ‘ICMR’ ಸ್ಪಷ್ಟನೆ | HMPV VIRUS