ಬೆಂಗಳೂರು: ಕೆ ಎಸ್ ಆರ್ ಟಿ ಸಿ ಬಸ್ ಚಾಲಕರಿಗೆ ಅಪಘಾತ ರಹಿತ ಮತ್ತು ಅಪರಾಧ ರಹಿತವಾಗಿ ಸೇವೆ ಸಲ್ಲಿಸಿದವರಿಗೆ ಮಾಸಿಕ ಭತ್ಯೆಯನ್ನು ಮತ್ತು ನಗದು ಪುರಸ್ಕಾರ ನೀಡಲಾಗುತ್ತದೆ. ಈ ನಗದು ಪುರಸ್ಕಾರದ ಮೊತ್ತವನ್ನು ಹೆಚ್ಚಳ ಮಾಡಿ ಕೆ ಎಸ್ ಆರ್ ಟಿಸಿ ಆದೇಶಿಸಿದೆ. ಈ ಮೂಲಕ ಕೆ ಎಸ್ ಆರ್ ಟಿ ಸಿ ಚಾಲಕರಿಗೆ ಗುಡ್ ನ್ಯೂಸ್ ನೀಡಲಾಗಿದೆ.
ಈ ಕುರಿತಂತೆ ಕೆ ಎಸ್ ಆರ್ ಟಿ ಸಿ ವ್ಯವಸ್ಥಾಪಕ ನಿರ್ದೇಶಕರಾದಂತ ಅಕ್ರಂ ಪಾಷಾ ಅವರು ಸುತ್ತೋಲೆ ಹೊರಡಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ನಿಗಮದ ವಾಹನಗಳಲ್ಲಿ ಪಯಾಣಿಸುವವರ ಸುರಕ್ಷತೆಗಾಗಿ ಹಲವಾರು ಯೋಜನೆಗಳನ್ನು ಕೈಗೊಂಡಿದ್ದು, ಅದರಲ್ಲಿ ಮುಖ್ಯವಾಗಿ ಅಪಘಾತ ರಹಿತ ಚಾಲನೆಯ ಪ್ರವೃತ್ತಿಯನ್ನು ಹೊಂದಿರುವ ಚಾಲಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅಪಘಾತ ಮುಕ್ತ ಚಾಲನೆಗೆ ಪ್ರೇರೆಪಿಸುವ ಸಲುವಾಗಿ ಅಪಘಾತರಹಿತ ಮತ್ತು ಅಪರಾಧರಹಿತ ಸೇವೆ ಸಲ್ಲಿಸಿರುವ ಚಾಲಕರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಮತ್ತು ಬೆಳ್ಳಿ ಪದಕ ವಿತರಿಸುವ ಜೊತೆಗೆ ಪ್ರಶಂಸನಾ ಪತ್ರದೊಂದಿಗೆ ನಗದು ಪುರಸ್ಕಾರವನ್ನು ನೀಡಲಾಗುತ್ತಿದೆ. ನಂತರ ಪದಕ ಪಡೆದ ಚಾಲಕರಿಗೆ ಪ್ರತಿ ತಿಂಗಳು ಮಾಸಿಕ ಭತ್ಯೆಯನ್ನು ನೀಡಲಾಗುತ್ತಿದೆ ಎಂದಿದ್ದಾರೆ.
ಮುಂದುವರೆದು, ಮುಖ್ಯ ಮಂತ್ರಿ ಚಿನ್ನದ ಪದಕ ಮತ್ತು ಬೆಳ್ಳಿ ಪದಕ ಪಡೆದ ಚಾಲಕರಿಗೆ ಪಶಂಸನಾ ಪತ್ರದೊಂದಿಗೆ ನೀಡುತ್ತಿದ್ದ ನಗದು ಪುರಸ್ಕಾರ ಮತ್ತು ಪ್ರತಿ ತಿಂಗಳು ನೀಡುತ್ತಿದ್ದ ಮಾಸಿಕ ಭತ್ಯೆಯನ್ನು ದಿನಾಂಕ:16.09.2025 ರಂದು ಜರುಗಿದ 32 ನೇ ಕರಾರಸಾನಿಗಮ ಪುಯಾಣಿಕರ ಅಪಘಾತ ಪರಿಹಾರ ನಿಧಿ ನ್ಯಾಸ ಮಂಡಳಿ ಸಭೆಯ ನಿರ್ಣಯದಂತೆ ಈ ಕೆಳಗಿನಂತೆ ಪರಿಷ್ಕರಿಸಲಾಗಿದೆ ಎಂದು ಹೇಳಿದ್ದಾರೆ.
ಹೀಗಿದೆ ಅಪಘಾತ ರಹಿತ ಮತ್ತು ಅಪರಾಧ ರಹಿತ ಸೇವೆ ಸಲ್ಲಿಸಿದ ಚಾಲನಾ ಸಿಬ್ಬಂದಿಗಳ ಮಾಸಿಕ ಭತ್ಯೆ ಮತ್ತು ನಗದು ಪುರಸ್ಕಾರದ ಹೆಚ್ಚದ ಮೊತ್ತ
1. ಮುಖ್ಯ ಮಂತ್ರಿ ಚಿನ್ನದ ಪದಕಕ್ಕೆ ಅರ್ಹರಾದ ಚಾಲಕರಿಗೆ (ಇಲಾಖಾ ವಾಹನಗಳ ಚಾಲಕರು ಸೇರಿದಂತೆ) ನೀಡುವ ನಗದು ಪುರಸ್ಕಾರವನ್ನು ರೂ.5,000/- ಗಳನ್ನು ಪರಿಷ್ಕರಿಸಿ ರೂ.10,000/- ನಿಗದಿಪಡಿಸಲಾಗಿದೆ.
2. ಮುಖ್ಯ ಮಂತ್ರಿ ಚಿನ್ನದ ಪದಕ ಪಡೆದ ಚಾಲಕರಿಗೆ (ಇಲಾಖಾ ವಾಹನಗಳ ಚಾಲಕರು ಸೇರಿದಂತೆ) ನೀಡುತ್ತಿದ್ದ ಮಾಸಿಕ ಭತ್ಯೆ ರೂ.500/- ಗಳನ್ನು ಪರಿಷ್ಕರಿಸಿ ರೂ.1,000/- ನಿಗದಿಪಡಿಸಲಾಗಿದೆ.
3. ಬೆಳ್ಳಿ ಪದಕಕ್ಕೆ ಅರ್ಹರಾದ ಚಾಲಕರಿಗೆ ನೀಡುವ ನಗದು ಪುರಸ್ಕಾರವನ್ನು ರೂ.2,500/- ಗಳನ್ನು ಪರಿಷ್ಕರಿಸಿ ರೂ.5,000/- ನಿಗದಿಪಡಿಸಲಾಗಿದೆ.
4. ಬೆಳ್ಳಿ ಪದಕ ಪಡೆದ ಚಾಲಕರಿಗೆ ನೀಡುತ್ತಿದ್ದ ಮಾಸಿಕ ಭತ್ಯೆಯನ್ನು ರೂ.250/-ಗಳನ್ನು ಪರಿಷ್ಕರಿಸಿ ರೂ.500/- ನಿಗದಿಪಡಿಸಲಾಗಿದೆ.
5. ಪರಿಷ್ಕರಿಸಿರುವ ನಗದು ಪುರಸ್ಕಾರವನ್ನು 01.01.2026 ಮತ್ತು ನಂತರ ನಡೆಯುವ ಬೆಳ್ಳಿ ಮತ್ತು ಚಿನ್ನದ ಪದಕ ಸಮಾರಂಭದಲ್ಲಿ ಪದಕ ಪಡೆಯುವ ಚಾಲಕರಿಗೆ ನೀಡುವುದು.
6. ಹೆಚ್ಚಿಸಿರುವ ಮಾಸಿಕ ಭತ್ಯೆಯನ್ನು ಈಗ ಮಾಸಿಕ ಭತ್ಯೆ ಪಡೆಯುತ್ತಿರುವ ಚಾಲಕರಿಗೆ ಜನವರಿ- 2026 ರ ಮಾಹೆಯಿಂದ ನೀಡುವುದು.
7. ಮುಂದಿನ ವರ್ಷಗಳಲ್ಲಿ ಪದಕಕ್ಕೆ ಅರ್ಹಗೊಂಡ ವರ್ಷದಿಂದಲೇ ಮಾಸಿಕ ಭತ್ಯೆಯನ್ನು ನೀಡುವುದು. (ಉದಾ: 2025 ನೇ ಸಾಲಿನಲ್ಲಿ ಪದಕಕ್ಕೆ ಅರ್ಹಗೊಂಡಲ್ಲಿ 2026 ನೇ ಜನವರಿಯಿಂದ ಪ್ರೋತ್ಸಾಹ ಧನ ನೀಡಲು ಅರ್ಹಗೊಳಿಸುವುದು)
ಮಾಸಿಕ ಭತ್ಯೆಯನ್ನು ನೀಡುವಾಗ ಸಾಮಾನ್ಯ ಸ್ಥಾಯಿ ಆದೇಶದಲ್ಲಿ ತಿಳಿಸಿರುವ ಎಲ್ಲಾ ಕ್ರಮಗಳನ್ನು ಅನುಸರಿಸುವುದು. ಇನ್ನುಳಿದಂತೆ ಉಲ್ಲೇಖಿತ ಸಾಮಾನ್ಯ ಸ್ಥಾಯಿ ಆದೇಶದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂಬುದಾಗಿ ಹೇಳಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು..

ತಲ್ವಾರ್ ಹಿಡಿದು ರೀಲ್ಸ್ ಮಾಡೋ ಮುನ್ನಾ ಎಚ್ಚರ! ಯಾಕೆ ಅಂತ ಈ ಸುದ್ದಿ ಓದಿ!
ಸಾಗರದ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಚುನಾವಣಾ ಪ್ರಕ್ರಿಯೆ ಮುಂದುವರೆಸಿ: ಡಿಆರ್ ಗೆ ಮನವಿ
BIG NEWS: ರಾಜ್ಯದ 84 ತಾಲ್ಲೂಕುಗಳಿಗೆ ‘ತಾಲ್ಲೂಕು ವೈದ್ಯಾಧಿಕಾರಿ’ ನೇಮಿಸಿ ಸರ್ಕಾರ ಆದೇಶ: ಇಲ್ಲಿದೆ ಪಟ್ಟಿ








