ಬೆಂಗಳೂರು : ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಕರ್ನಾಟಕದ ರೈಲ್ವೆ ಅಭಿವೃದ್ಧಿಗೆ 7564 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಕೇಂದ್ರ ವಿತ್ತ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್, ದೇಶದ ಮಧ್ಯಮ ವರ್ಗದವರ ಆಶೋತ್ತರಗಳಿಗೆ ಸ್ಪಂದಿಸುವ ಹಾಗೂ ಭಾರತೀಯ ಆರ್ಥಿಕತೆಗೆ ಆದ್ಯತೆ ನೀಡಿದ ಬಜೆಟ್ ಆಗಿದೆ. ಬೆಂಗಳೂರು ಸಬ್ ಅರ್ಬನ್ ರೈಲ್ವೆ ಕಾಮಗಾರಿಗೆ 350 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದರು.
2025-26 ರ ಈ ಬಜೆಟ್‌ನಲ್ಲಿ, ಕೃಷಿಕರ ಏಳ್ಗೆ, ರಸಗೊಬ್ಬರ ಉತ್ಪಾದನೆಯಲ್ಲಿ ಸ್ವಾವಲಂಬನೆ, ವೈದ್ಯಕೀಯ ವ್ಯವಸ್ಥೆಯಲ್ಲಿ ಕ್ರಾಂತಿ, ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರಿಗೆ ಉತ್ತೇಜನ, ಪ್ರವಾಸಿ ತಾಣಗಳ ಅಭಿವೃದ್ಧಿ, ಜಲ್ ಜೀವನ್ ಮಿಷನ್ ವಿಸ್ತರಣೆ ಮುಂತಾದ ಘೋಷಣೆಗಳಲ್ಲದೇ, ಈ ಬಾರಿ ಕರ್ನಾಟಕಕ್ಕೆ ₹7564 ಕೋಟಿ ರೈಲ್ವೆ ಬಜೆಟ್ ನೀಡಿ ಅತ್ಯುತ್ತಮ ಬಜೆಟ್ ಘೋಷಿಸಿರುವುದಕ್ಕಾಗಿ, ಪ್ರಧಾನಿ ಶ್ರೀ ನರೇಂದ್ರ ಮೋದಿಜೀಯವರಿಗೆ ಹಾಗೂ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.