ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದಲ್ಲಿ 371 (ಜೆ) ಅಡಿ ರಾಜ್ಯ ಸರ್ಕಾರದ 46 ಇಲಾಖೆಗಳಲ್ಲಿ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸದೆ ಬಾಕಿ ಇರುವ 14,771 ಹುದ್ದೆಗಳ ನೇಮಕಾತಿ ಹಾಗೂ ಪ್ರಾದೇಶಿಕ ಮತ್ತು ರಾಜ್ಯ ಮಟ್ಟದ ಹುದ್ದೆಗಳಲ್ಲಿ ಶೇಕಡ 8ರ ಮೀಸಲಾತಿಯಂತೆ ಮುಂಬಡ್ತಿ ನೀಡಬೇಕಾದ 8,278 ಹುದ್ದೆಗಳನ್ನು ಬಡ್ತಿ ಮೂಲಕ ತುಂಬಿಸಲು ಸರ್ಕಾರದ ವಿವಿಧ ಇಲಾಖೆಗಳು ತಕ್ಷಣ ಪ್ರಕ್ರಿಯೆ ಆರಂಭಿಸಲು ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆಯ ಸಂಪುಟ ಉಪ ಸಮಿತಿ ಸೂಚನೆ ನೀಡಿದೆ.
ಗುರುವಾರದಂದು ಭಾರತ ಸಂವಿಧಾನದ ಅನುಚ್ಛೇದ 371 (ಜೆ) ಅಡಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿರುವ ಪ್ರಯುಕ್ತ ಹೊರಡಿಸಲಾದ ಆದೇಶಗಳ ಅನುಷ್ಠಾನದ ಪ್ರಗತಿಯನ್ನು ಪರಿಶೀಲಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಸಭೆಯಲ್ಲಿ ಸಚಿವ ಸಂಪುಟ ಉಪಸಮಿತಿ ಸದಸ್ಯರಾದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಾಲ್ಯಾಭಿವೃದ್ಧಿ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್ ಹಾಗೂ ಇತರರು ಭಾಗವಹಿಸಿದ್ದರು.
ಸರ್ಕಾರದ ಆದೇಶದಂತೆ ಸಭೆಯಲ್ಲಿ ಇಲಾಖೆಗಳ ಮುಖ್ಯಸ್ಥರು ಭಾಗವಹಿಸಬೇಕಾಗಿದ್ದು, ಇಂದಿನಸಭೆಯಲ್ಲಿ ಕೆಲವು ಇಲಾಖೆಗಳ ಕಿರಿಯ ಅಧಿಕಾರಿಗಳು ಭಾಗವಹಿಸಿದ್ದನ್ನು ಗಂಭೀರವಾಗಿ ಪರಿಗಣಿಸಿದ ಸಂಪುಟ ಉಪಸಮಿತಿಯ ಅಧ್ಯಕ್ಷರು ಅಂತಹ ಅಧಿಕಾರಿಗಳಿಗಂದ ಮತ್ತು ಸಾಕಷ್ಟು ಕಾಲಾವಕಾಶ ನೀಡಿದಾಗ್ಯೂ ಕಳೆದ ಸಭೆಯ ಅನುಪಾಲನಾ ವರದಿ ಸಲ್ಲಿಸದ ಇಲಾಖಾ ಅಧಿಕಾರಿಗಳಿಂದ ವಿವರಣೆ ಪಡೆಯುವಂತೆ ಸೂಚಿಸಿದರು. ಸಹಕಾರ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಇ-ಆಡಳಿತ ಮುಂತಾದ ಇಲಾಖೆಯ ಅಧಿಕಾರಿಗಳು ಸಭೆಗೆ ಗೈರು ಹಾಜರಾಗಿದ್ದು ಸಂಬಂಧಿಸಿದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲು ಸೂಚಿಸಲಾಯಿತು. ಅನುಪಾಲನ ವರದಿ ಸಲ್ಲಿಸಲು ವಿಫಲವಾದ ಒಳಾಡಳಿತ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ , ಅಬಕಾರಿ ಇಲಾಖೆ ಮತ್ತು ಕರ್ನಾಟಕ ರಾಜ್ಯ ಪೊಲೀಸ್ ವೈರ್ಲೆಸ್ ಘಟಕಗಳಿಂದ ವಿವರಣೆ ಪಡೆಯಲು ಸೂಚನೆ ಕೊಡಲಾಯಿತು.
ಸಭೆಯಲ್ಲಿ ತೆಗೆದುಕೊಳ್ಳಲಾದ ಪ್ರಮುಖ ತೀರ್ಮಾನಗಳು
• ಕಲ್ಯಾಣ ಕರ್ನಾಟಕ ಭಾಗದ ನೌಕರರಿಗೆ 371ಜೆ ಪ್ರಕಾರ ರಾಜ್ಯ ವೃಂದದಲ್ಲಿ ಶೇಕಡ 8ರಷ್ಟು ಹುದ್ದೆಗಳನ್ನು ನೀಡುವ ಬಗ್ಗೆ ಜೇಷ್ಟತಾ ಪಟ್ಟಿಗಳನ್ನು ಪ್ರತ್ಯೇಕವಾಗಿ ಪ್ರಕಟಿಸದೇ ಒಂದೇ ಪಟ್ಟಿ ಪ್ರಕಟಿಸಿ ಜೇಷ್ಟತಾ ಪಟ್ಟಿಯಲ್ಲಿ ಅಧಿಕಾರಿ/ನೌಕರರ ಹೆಸರಿನ ಮುಂದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಎಂದು ನಮೂದಿಸುವ ಮಾದರಿಯಲ್ಲಿಯೇ 371ಜೆ ಎಸ್ಸಿ, 371ಜೆ ಎಸ್ಟಿ, 371ಜೆ ಸಾಮಾನ್ಯ, 371ಜೆ ಮಹಿಳೆ ಎಂದು ನಮೂದಿಸಲು ಸೂಕ್ತ ಆದೇಶ ಹೊರಡಿಸಲು ಸೂಚಿಸಲಾಯಿತು.
• ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಶಿಕ್ಷಕರ ಖಾಲಿ ಹುದ್ದೆಗಳು, ಭರ್ತಿ ಮಾಡಬೇಕಾದ ಹುದ್ದೆಗಳ ಬಗ್ಗೆ ನಿಖರ ಮಾಹಿತಿ ಇಲ್ಲದಿರುವುದರಿಂದ ಕ್ರೂಢೀಕೃತ ಮಾಹಿತಿ ಸಲ್ಲಿಸಲು ಹಾಗೂ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ನೇರ ನೇಮಕಾತಿ ಮತ್ತು ಮುಂಬಡ್ತಿ ಪ್ರಕ್ರಿಯೆಗಳನ್ನು ಕೈಗೊಳ್ಳಲು ಸೂಚಿಸಲಾಯಿತು.
• ಕರ್ನಾಟಕ ಲೋಕಸೇವಾ ಆಯೋಗ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ವಿಶ್ವವಿದ್ಯಾಲಯಗಳಲ್ಲಿ ನೇಮಕಾತಿ ಪ್ರಕ್ರಿಯೆಗಳನ್ನು ಪರಿಶೀಲಿಸಲು ಪ್ರತ್ಯೇಕ ಸಭೆ ಕರೆಯಲು ಸಭೆಯಲ್ಲಿ ನಿರ್ಣಯಿಸಲಾಯಿತು.
• ಬಳ್ಳಾರಿ ಜಿಲ್ಲೆ ಎಂದು ಇರುವುದನ್ನು ವಿಜಯನಗರ ಜಿಲ್ಲೆ ಎಂದು ಬದಲಿಸಿ ಆದೇಶ ಹೊರಡಿಸಲು ಸಿಆಸುಇಲಾಖೆಗೆ ಸೂಚಿಸಲಾಯಿತು.
• ವಿಧಾನ ಸಭೆ/ ವಿಧಾನ ಪರಿಷತ್ತಿನ ಸಚಿವಾಲಯಗಳಲ್ಲಿ 371ಜೆ ಮೀಸಲಾತಿ ಅಳವಡಿಸಿರುವ ಬಗ್ಗೆ ಪೂರ್ಣ ವಿವರ ಪಡೆಯಲು ನಿರ್ಣಯಿಸಲಾಯಿತು.
• ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಅಡುಗೆಯವರಿಗೆ ಮುಂಬಡ್ತಿ ನೀಡುವಾಗ ಶೇಕಡ 8ರಷ್ಟು ಮೀಸಲಾತಿ ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಯಿತು.
• ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ ನಿ. ಇಲ್ಲಿ 371ಜೆ ನಿಯಮಗಳಂತೆ ಸ್ಥಳೀಯ ವೃಂದದ ಅಧಿಕಾರಿ ಮತ್ತು ನೌಕರರಿಗೆ ಮುಂಬಡ್ತಿ ಮತ್ತು ಸೇವಾ ಜೇಷ್ಟತೆ ಪರಿಗಣಿಸಲು ಬಗ್ಗೆ ಸೂಚಿಸಲಾಯಿತು.