ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಾವಿರಾರು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದ್ದು, ನೇಮಕಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಪೊಲೀಸ್ ಮಹಾನಿರ್ದೇಶಕರ ಕಚೇರಿ ಸೂಚನೆ ನೀಡಿದೆ.
ಹುದ್ದೆಗಳ ವಿವರ: ಒಟ್ಟು 5764 ಹುದ್ದೆಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಇದರಲ್ಲಿ:
-
ಸಿವಿಲ್ ಪೊಲೀಸ್ ಕಾನ್ಸ್ಟೇಬಲ್: 4114 ಹುದ್ದೆಗಳು.
-
ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್: 1650 ಹುದ್ದೆಗಳು.
ಮರು ಹಂಚಿಕೆ ಮತ್ತು ಪರಿಷ್ಕರಣೆ: ಆಡಳಿತಾತ್ಮಕ ಕಾರಣಗಳಿಂದಾಗಿ ಈ ಹಿಂದೆ ಘೋಷಿಸಲಾಗಿದ್ದ ಹುದ್ದೆಗಳನ್ನು ವಿವಿಧ ಘಟಕಗಳಿಗೆ ಮರು ಹಂಚಿಕೆ ಮಾಡಲಾಗಿದೆ. ಘಟಕವಾರು ಹುದ್ದೆಗಳ ಮರು ಹಂಚಿಕೆಯ ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದ್ದು, ಸಂಬಂಧಪಟ್ಟ ಘಟಕಗಳಿಂದ ಪರಿಷ್ಕೃತ ವರ್ಗೀಕರಣವನ್ನು ಪಡೆದು ಶೀಘ್ರವೇ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳುವಂತೆ ಎಡಿಜಿಪಿ (ಆಡಳಿತ) ಸೌಮೇಂದು ಮುಖರ್ಜಿ ಅವರು ಆದೇಶಿಸಿದ್ದಾರೆ.
ಈ ಕುರಿತು ಪೊಲೀಸ್ ಮಹಾನಿರ್ದೇಶಕರು (ನೇಮಕಾತಿ) ಅವರಿಗೆ ಪತ್ರ ಬರೆಯಲಾಗಿದ್ದು, ಡಿಜಿ ಮತ್ತು ಐಜಿಪಿ ಅವರಿಂದಲೂ ಅನುಮೋದನೆ ದೊರೆತಿದೆ. ಈ ಆದೇಶದ ಪ್ರತಿಯನ್ನು ರಾಜ್ಯದ ಎಲ್ಲಾ ಪೊಲೀಸ್ ಆಯುಕ್ತರುಗಳು, ಜಿಲ್ಲಾ ಪೊಲೀಸ್ ಅಧೀಕ್ಷಕರುಗಳು ಹಾಗೂ ಕೆಎಸ್‌ಆರ್‌ಪಿ ಕಮಾಂಡೆಂಟ್‌ಗಳಿಗೆ ರವಾನಿಸಲಾಗಿದೆ.
ತಮ್ಮ ಘಟಕಗಳಿಗೆ ಮರು ಹಂಚಿಕೆಯಾಗಿರುವ ಹುದ್ದೆಗಳಿಗೆ ಸಂಬಂಧಿಸಿದಂತೆ ವರ್ಗೀಕರಣವನ್ನು ನೇಮಕಾತಿ ವಿಭಾಗಕ್ಕೆ ಶೀಘ್ರವಾಗಿ ಸಲ್ಲಿಸುವಂತೆ ಸೂಚಿಸಲಾಗಿದ್ದು, ಇದರಿಂದ ಪೊಲೀಸ್ ಉದ್ಯೋಗಾಕಾಂಕ್ಷಿಗಳಲ್ಲಿ ಹೊಸ ಭರವಸೆ ಮೂಡಿದೆ.









