ಮೈಸೂರು : ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, ಪಶುಪಾಲನಾ ಇಲಾಖೆಯಲ್ಲಿ 700 ಮಂದಿ ಡಿ ಗ್ರೂಪ್ ಹಾಗೂ 400 ಪಶು ವೈದ್ಯರ ನೇಮಕಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮತಿ ನೀಡಿದ್ದು, ಶೀಘ್ರದಲ್ಲೇ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ತಿಳಿಸಿದ್ದಾರೆ.
ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಹಾಗೂ ಕರ್ನಾಟಕ ಪಶು ವೈದ್ಯಕೀಯ ಸಂಘದ ಸಹಯೋಗದಲ್ಲಿ ಇಲ್ಲಿನ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಶನಿವಾರ ಆಯೋಜಿಸಿದ್ದ ಪಶುವೈದ್ಯರ ರಾಜ್ಯಮಟ್ಟದ ತಾಂತ್ರಿಕ ವಿಚಾರಸಂಕಿರಣ ಮತ್ತು ಕಾಲುಬಾಯಿ ಜ್ವರದ ವಿರುದ್ಧ 6ನೇ ಸುತ್ತಿನ ಲಸಿಕಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ರಾಜ್ಯ ಸರ್ಕಾರವು 400 ಪಶುವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡಿದ್ದು,. 400 ಕಾಯಂ ವೈದ್ಯರ ನೇಮಕಾತಿಗೆ ಕೆಪಿಎಸ್‌ಸಿ ಮಟ್ಟದಲ್ಲಿ ಪ್ರಕ್ರಿಯೆ ನಡೆದಿದೆ ಎಂದು ಹೇಳಿದ್ದಾರೆ.
ಈಗ ರಾಜ್ಯದಲ್ಲಿ ಖಾಸಗಿ ಪಶುವೈದ್ಯ ಕಾಲೇಜು ಆರಂಭಿಸಲು ನಿರ್ಬಂಧ ವಿಧಿಸಲಾಗಿದೆ. ಹೊಸದಾಗಿ ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಕೊಕಟನೂರ ಹಾಗೂ ಪುತ್ತೂರಲ್ಲಿ ಸರ್ಕಾರಿ ಕಾಲೇಜುಗಳನ್ನು ಈ ವರ್ಷವೇ ಪ್ರಾರಂಭಿಸಲಾಗುವುದು’ ಎಂದು ತಿಳಿಸಿದರು.