ಬೆಂಗಳೂರು: ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ ಶೀಘ್ರವೇ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವಂತ 1,500 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗುತ್ತದೆ ಅಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದಂತ ಅವರು, ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಒಟ್ಟು 3927 ಎಎನ್‌ಎಂ ಖಾಲಿ ಹುದ್ದೆಗಳ ಪೈಕಿ 1205 ಹಾಗೂ 2990 ಎಚ್‌ಐಒ ಖಾಲಿ ಹುದ್ದೆಗಳ ಪೈಕಿ 300 ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆ ಈಗಾಗಲೇ ಅನುಮೋದನೆ ನೀಡಿದೆ. ಅಗತ್ಯ ಸೇವೆಗಳಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ವಿಳಂಬ ಮಾಡಬಾರದು ಎಂಬುದಾಗಿ ಸೂಚಿಸಿದರು.
ಹೆಣ್ಣು ಭ್ರೂಣ ಹತ್ಯೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಎಲ್ಲಾ ಸಂಬಂಧಪಟ್ಟ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಆಸ್ಪತ್ರೆಗಳಲ್ಲಿ ಸ್ವಚ್ಛತೆ, ಅಗತ್ಯ ಮೂಲಸೌಕರ್ಯಗಳ ನಿರ್ವಹಣೆಗೆ ವ್ಯವಸ್ಥೆ ಮಾಡಬೇಕು. ನಗರ ಪ್ರದೇಶಗಳಲ್ಲಿ 817 ನಮ್ಮ ಕ್ಲಿನಿಕ್‌ಗಳನ್ನು ಮಂಜೂರು ಮಾಡಲಾಗಿದ್ದು, ಪ್ರಸ್ತುತ 512 ಕಾರ್ಯಾಚರಿಸುತ್ತಿವೆ. ಇವುಗಳನ್ನು ಇನ್ನಷ್ಟು ಬಲಪಡಿಸಲು ಕ್ರಮ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿ ಚಿಕಿತ್ಸಾ ಪ್ಯಾಕೇಜ್ ಮೊತ್ತ ಹೆಚ್ಚಳ ಮಾಡುವ ಕುರಿತು ಪರಿಶೀಲನೆ ಮಾಡಬೇಕು ಎಂದರು.