ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸಿಹಿಸುದ್ದಿ ನೀಡಿದ್ದು, ಸಾರಿಗೆ ಇಲಾಖೆಯಲ್ಲಿ ಶೀಘ್ರವೇ 9,000 ಹೊಸ ಸಿಬ್ಬಂದಿಗಳ ನೇಮಕಾತಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಶೀಘ್ರವೇ ಸಾರಿಗೆ ಇಲಾಖೆಯಲ್ಲಿ 9000 ಹೊಸ ಸಿಬ್ಬಂದಿಗಳ ನೇಮಕಾತಿ ಮಾಡಲಾಗುತ್ತದೆ. 4 ನಿಗಮಗಳಿಗೆ ಶಕ್ತಿ ಯೋಜನೆಯ 8,800 ಕೋಟಿ ಹಣ ಬಿಡುಗಡೆ ಆಗಿದೆ. ಕಾಂಗ್ರೆಸ್ ಸರ್ಕಾರ ಬಂದಾಗ ಸಿಬ್ಬಂದಿಗಳಿಗೆ ವೇತನ ಸಮಸ್ಯೆ ಆಗಿಲ್ಲ. ಮೊದಲೇ ಇತ್ತು. ಬಿಜೆಪಿಯವರು ಮಹಿಳಾ ವಿರೋಧಿಗಳು, ಹಾಗಾಗಿ ಶಕ್ತಿ ಯೋಜನೆಯನ್ನು ವಿರೋಧ ಮಾಡುತ್ತಿದ್ದಾರೆ ಎಂದು ಸಚಿವರು ಹೇಳಿದರು.
2020 ಜನವರಿ 26 ರಲ್ಲಿ ಅವರು 12 ಪರ್ಸೆಂಟ್ ಟಿಕೆಟ್ ದರ ಏರಿಕೆ ಮಾಡಿದರು.ಆಗ ಜನರಿಗೆ ತೊಂದರೆ ಆಗಲಿಲ್ಲವೇ? ಬಿಜೆಪಿಯವರು 5,900 ಕೋಟಿ ರೂಪಾಯಿ ಸಾಲ ಬಿಟ್ಟು ಹೋಗಿದ್ದಾರೆ.ಬಿಜೆಪಿಯವರು 5,900 ಕೋಟಿ ಸಾಲ ಬಿಟ್ಟು ಹೋಗದೆ ಇದ್ದಿದ್ದರೆ ನಾವು ಟಿಕೆಟ್ ದರ ಏರಿಕೆ ಮಾಡುವ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಇದೇ ವೇಳೆ ತಿಳಿಸಿದರು.
ಸಂಬಳಕ್ಕೆ ಮೊದಲು 12 ಕೋಟಿ ಆಗುತ್ತಿತ್ತು. ಈಗ 18 ಕೋಟಿ ರೂಪಾಯಿ ಆಗಿದೆ. ಈಗ ಬಿಜೆಪಿಗರು ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಅದು ಮಹಿಳೆಯರಿಗೂ ಆಗುತ್ತೆ ಆ ವೆಚ್ಚ ಸರ್ಕಾರವೇ ಬರಿಸುತ್ತದೆ. ಬಿಜೆಪಿಯವರು ಯಾರು ಬಸ್ ನಲ್ಲಿ ಓಡಾಟ ಮಾಡುತ್ತಾರೆ? ಬೆಂಜ್ ಕಾರಿನಲ್ಲಿ ಓಡಾಡೋರು ಶಕ್ತಿ ಯೋಜನೆಯನ್ನು ಟೀಕೆ ಮಾಡುತ್ತಾರೆ. ಬಿಜೆಪಿಯವರು ಹೊಟ್ಟೆ ತುಂಬಿದವರು ಹಾಗಾಗಿ ಈ ರೀತಿ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಸಾರ್ವಜನಿಕ ಟೀಕೆಯನ್ನು ತಪ್ಪು ಎಂದು ನಾನು ಹೇಳುವುದಿಲ್ಲ. ಬಿಜೆಪಿ 5,900 ಕೋಟಿ ಸಾಲ ಇಟ್ಟಿರುವುದರಿಂದ ಸರ್ಕಾರಕ್ಕೆ ಹೊರೆಯಾಗಿದೆ. ಯಾವುದೇ ಗ್ಯಾರಂಟಿ ಯೋಜನೆಯನ್ನು ನಾವು ನಿಲ್ಲಿಸುವುದಿಲ್ಲ. ರೈಲ್ವೆ ಪ್ರಯಾಣದಲ್ಲೂ ಕೂಡ ನೂರಕ್ಕೆ ನೂರು ಬೆಲೆ ಏರಿಕೆ ಮಾಡಿದ್ದಾರೆ. ಅದರ ಬಗ್ಗೆ ಬಿಜೆಪಿಯವರು ಮಾತನಾಡುವುದಿಲ್ಲ. ಜನರಿಗೆ ತೊಂದರೆ ಆಗುತ್ತದೆ ಹೊರೆಯಾಗುತ್ತದೆ ಎಂದು ನಮಗೆ ಗೊತ್ತಿದೆ. ಆದರೆ ವಿಧಿ ಇಲ್ಲದೆ ಪ್ರಯಾಣದ ದರ ಏರಿಕೆ ಮಾಡಿದ್ದೇವೆ ಎಂದು ಸಚಿವ ರಾಮಲಿಂಗ ರೆಡ್ಡಿ ತಿಳಿಸಿದರು.