ಬೆಂಗಳೂರು: ರಾಜ್ಯದಲ್ಲಿ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ವಿಶೇಷ ಪೌಷ್ಟಿಕ ಆಹಾರ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯ ಅಡಿಯಲ್ಲಿ ಸರ್ಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಇನ್ಮುಂದೆ ವಿಶೇಷ ಪೌಷ್ಟಿಕ ಆಹಾರ ಲಭ್ಯವಾಗಲಿದೆ.
ಈ ಕುರಿತಂತೆ ರಾಜ್ಯ ಸರ್ಕಾರ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ರಾಜ್ಯದ ಸರ್ಕಾರಿ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳಿಗೆ, ಮುಖ್ಯವಾಗಿ ಮಕ್ಕಳು, ಗರ್ಭಿಣಿಯರು, ಮತ್ತು ಬಾಣಂತಿಯರಿಗೆ, ಈ ಹಿಂದೆ ಒಂದೇ ರೀತಿಯ ಸಾಮಾನ್ಯ ಆಹಾರವನ್ನು ನೀಡಲಾಗುತ್ತಿತ್ತು. ಇದು ರೋಗಿಗಳ ನಿರ್ದಿಷ್ಟ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಪರಿಣಾಮಕಾರಿಯಾಗಿರಲಿಲ್ಲ. ರೋಗಿಗಳ ಆರೋಗ್ಯ ಸ್ಥಿತಿ ಮತ್ತು ವಯಸ್ಸಿಗೆ ಅನುಗುಣವಾಗಿ ಪೌಷ್ಟಿಕಾಂಶದ ಅಗತ್ಯಗಳು ಭಿನ್ನವಾಗಿರುವುದರಿಂದ, ಎಲ್ಲರಿಗೂ ಒಂದೇ ರೀತಿಯ ಆಹಾರವನ್ನು ನೀಡುವುದು ಸೂಕ್ತವಲ್ಲ.ಈ ಸಮಸ್ಯೆಯನ್ನು ಪರಿಹರಿಸಲು, ಕರ್ನಾಟಕ ಸರ್ಕಾರವು ಸರ್ಕಾರಿ ಆಸ್ಪತ್ರೆಗಳಲ್ಲಿನ ಆಹಾರ ಪದ್ಧತಿಯನ್ನು ಸಂಪೂರ್ಣವಾಗಿ ಪರಿಷ್ಕರಿಸಿದೆ. ಈಗ ರೋಗಿಗಳ ವೈದ್ಯಕೀಯ ಅಗತ್ಯಗಳ ಆಧಾರದ ಮೇಲೆ ಆಹಾರವನ್ನು ವಿಂಗಡಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಇಸ್ಕಾನ್ ಸಂಸ್ಥೆಯು ಸಹಭಾಗಿತ್ವ ನೀಡಿದ್ದು ಈ ಹಿಂದೆ, ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗುವ ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಸೇರಿದಂತೆ ಎಲ್ಲಾ ಒಳರೋಗಿಗಳಿಗೆ ಒಂದೇ ರೀತಿಯ ಆಹಾರವನ್ನು ನೀಡಲಾಗುತ್ತಿತ್ತು. ಆದರೆ, ಈಗ ಈ ಪದ್ಧತಿಯನ್ನು ಬದಲಾಯಿಸಿ, ಸಾಮಾನ್ಯ ಆಹಾರ ಕ್ರಮ (General Diet Plan), ಚಿಕಿತ್ಸಾ ಆಹಾರ ಕ್ರಮ (therapeutic diet) ಗರ್ಭಿಣಿಯರ ಆಹಾರ ಕ್ರಮ(Pregnancy Diet Plan) ಬಾಣಂತಿಯರ ಆಹಾರ ಕ್ರಮ Diet Plan) ಹಾಗು ಮಕ್ಕಳ ಆಹಾರ ಕ್ರಮ (Paediatric diet plan) ಎಂದು ಆಹಾರವನ್ನು ಐದು ಪ್ರಮುಖ ವಿಭಾಗಗಳಾಗಿ ವಿಂಗಡಿಸಿ ನೀಡಲಾಗುತ್ತದೆ.
ಈ ವಿಶೇಷ ಯೋಜನೆಯು ಸಾಮಾನ್ಯ ಆಹಾರವಲ್ಲ, ಬದಲಿಗೆ ರೋಗಿಯ ಆರೋಗ್ಯ ಚೇತರಿಕೆಗೆ ಸಹಕಾರಿಯಾಗುವಂತೆ ವೈದ್ಯಕೀಯ ಉದ್ದೇಶಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು ಮೊದಲ ಹಂತದಲ್ಲಿ ಬೆಂಗಳೂರಿನ ಮೂರು ಪ್ರಮುಖ ಸರ್ಕಾರಿ ಆಸ್ಪತ್ರೆಗಳಾದ ಸಿ.ವಿ. ರಾಮನ್ ಜನರಲ್ ಆಸ್ಪತ್ರೆ, ಜಯನಗರ ಜನರಲ್ ಆಸ್ಪತ್ರೆ, ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಯೋಜನೆಯನ್ನು ಪ್ರಾರಂಭಿಸಲಾಗುವುದು.
ಪ್ರತಿ ಆಸ್ಪತ್ರೆಯಲ್ಲಿ ಸುಮಾರು 250 ರೋಗಿಗಳಿಗೆ ಪ್ರತಿದಿನ ಆಹಾರವನ್ನು ಸರಬರಾಜು ಮಾಡಲು ಇಸ್ಕಾನ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಇದಕ್ಕಾಗಿ 9 ತಿಂಗಳ ಅವಧಿಗೆ ₹1,37,45,700 ವೆಚ್ಚವನ್ನು ಆರೋಗ್ಯ ಇಲಾಖೆಯಿಂದ ಭರಿಸಲಾಗುತ್ತದೆ.
ರೋಗಿಗಳಿಗೆ ಪ್ರತಿದಿನ – ಬೆಳಗಿನ ಉಪಹಾರ, ಬೆಳಿಗ್ಗೆ ಮತ್ತು ಸಂಜೆ ಲಘು ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ವಿತರಿಸಲಾಗುವುದು.
ಈ ಯೋಜನೆಯ ಮುಖ್ಯ ಉದ್ದೇಶಗಳು:
- ನಿರ್ದಿಷ್ಟ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಅಗತ್ಯ ಪೌಷ್ಟಿಕಾಂಶಗಳನ್ನು ಒದಗಿಸುವುದು.
- ರೋಗಿಗಳ ಆರೋಗ್ಯ ಸುಧಾರಣೆಗೆ ಸಹಾಯ ಮಾಡುವ ವೈದ್ಯಕೀಯ ಆಹಾರವನ್ನು ಒದಗಿಸುವುದು.
- ವೈಜ್ಞಾನಿಕವಾಗಿ ರೂಪಿಸಲಾದ ಆಹಾರ ಪದ್ಧತಿಯ ಮೂಲಕ ಚಿಕಿತ್ಸೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸುವುದು.
ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳು ರೋಗನಿರೋಧಕ ಶಕ್ತಿ ಮತ್ತು ಸರಿಯಾದ ಬೆಳವಣಿಗೆಗೆ ವಿಶೇಷ ಪೌಷ್ಟಿಕಾಂಶಗಳನ್ನು ಪಡೆಯುವುದು ಬಹಳ ಮುಖ್ಯ. ಈ ಯೋಜನೆಯು ಇಂತಹ ರೋಗಿಗಳ ಅಗತ್ಯಗಳಿಗೆ ಆದ್ಯತೆ ನೀಡಿದೆ. ಉದಾಹರಣೆಗೆ, ಗರ್ಭಿಣಿಯರಿಗೆ ಗರ್ಭಾವಸ್ಥೆಯ ಆರೋಗ್ಯಕ್ಕೆ ಅಗತ್ಯವಾದ ಕಬ್ಬಿಣ ಮತ್ತು ಫೋಲಿಕ್ ಆಮ್ಲ ಹೆಚ್ಚಿರುವ ಆಹಾರವನ್ನು ನೀಡಲಾಗುತ್ತದೆ. ಬಾಣಂತಿಯರಿಗೆ ಹಾಲು ಉತ್ಪಾದನೆ ಮತ್ತು ಆರೋಗ್ಯಕ್ಕೆ ಸಹಕಾರಿಯಾಗುವ ಆಹಾರವನ್ನು ಒದಗಿಸಲಾಗುತ್ತದೆ. ಸಮರ್ಪಕ ಪೌಷ್ಟಿಕ ಆಹಾರವು ರೋಗಿಗಳನ್ನು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಈ ಯೋಜನೆಯ ಯಶಸ್ಸು ಇತರೆ ಸರ್ಕಾರಿ ಆಸ್ಪತ್ರೆಗಳಿಗೂ ವಿಸ್ತರಿಸುವ ನಿರೀಕ್ಷೆ ಇದೆ.
ಈ ಕಾರ್ಯಕ್ರಮವು ರಾಜ್ಯದಲ್ಲಿ ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಸುಧಾರಿಸುವಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ರೋಗಿಗಳ ಯೋಗಕ್ಷೇಮಕ್ಕೆ ಸರ್ಕಾರವು ನೀಡುತ್ತಿರುವ ಆದ್ಯತೆಯನ್ನು ಇದು ತೋರಿಸುತ್ತದೆ.








