ಬೆಂಗಳೂರು: ರಾಜ್ಯದ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಸಹ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವಂತ ಅನೇಕ ಶಿಕ್ಷಕರು ಬಡ್ತಿ ನಿರೀಕ್ಷೆಯಲ್ಲಿದ್ದಾರೆ. ಅವರೆಲ್ಲರನ್ನು ಶೀಘ್ರವೇ ಬಡ್ತಿಗೊಳಿಸಿ ಆದೇಶಿಸಲಾಗುತ್ತದೆ ಎಂಬುದಾಗಿ ಶಾಲಾ ಶಿಕ್ಷಣ ಸಚಿವ ಮಧು ಎಸ್ ಬಂಗಾರಪ್ಪ ಭರವಸೆ ನೀಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಪ್ರೌಢ ಶಾಲಾ ಸಹ ಶಿಕ್ಷಕರ ಬಡ್ತಿಗಾಗಿ ರಾಜ್ಯ ಮಟ್ಟದ ಒಂದೇ ಜೇಷ್ಠತಾ ಪಟ್ಟಿಯನ್ನು ತಯಾರಿಸಲಾಗುತ್ತಿದೆ. ಮೊದಲು ತಾತ್ಕಾಲಿಕ ಪಟ್ಟಿ ಪ್ರಕಟಿಸಿ, ಅದಕ್ಕೆ ಸ್ವೀಕಾರವಾಗುವಂತ ಆಕ್ಷೇಪಗಳನ್ನು ಸರಿಪಡಿಸಿದ ಬಳಿಕ ಅಂತಿಮ ಪಟ್ಟಿಯನ್ನು ಪ್ರಕಟಿಸುವುದಾಗಿ ಹೇಳಿದರು.
ಶಿಕ್ಷಣ ಇಲಾಖೆಯಿಂದ ಈಗಾಗಲೇ 2013ನೇ ಸಾಲಿನವರೆಗೆ ಪದೋನ್ನತಿ ಪ್ರಕ್ರಿಯೆಯನ್ನು ನಡೆಸಲಾಗಿರುತ್ತದೆ. 2024ರ ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಮತ್ತು ಏಪ್ರಿಲ್ ತಿಂಗಳಲ್ಲಿ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರು ಬಡ್ತಿ ಸಂಬಂಧ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ ಎಂದರು.
ಈಗಾಗಲೇ ಈ ಪ್ರಸ್ತಾವನೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಅಕ್ಟೋಬರ್ 16, 2024ರಂದು ನೀಡಿದಂತ ಅಭಿಪ್ರಾಯದ ಅನ್ವಯ ಶಾಲಾ ಶಿಕ್ಷಣ ಇಲಾಖೆಯ ನಾಲ್ಕು ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಂತ ಅರ್ಹ ಸಹ ಶಿಕ್ಷಕರ ಜೇಷ್ಠತಾ ಪಟ್ಟಿಯನ್ನು ಪರಿಶೀಲಿಸಿ, ಸಾಮಾನ್ಯ ಜೇಷ್ಠತಾ ಪಟ್ಟಿಯನ್ನು ಅಂತಿಮಗೊಳಿಸುವುದಾಗಿ ತಿಳಿಸಿದರು.
ಈ ಸಂಬಂಧ ಅಗತ್ಯ ಕ್ರಮವಹಿಸಲು ಬೆಂಗಳೂರಿನ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಿಗೆ, ಧಾರವಾಡ ಮತ್ತು ಕಲಬುರ್ಗಿಯ ಅಪರ ಆಯುಕ್ತರಿಗೆ ಹಾಗೂ ಪದವಿ ಪೂರ್ವ ವಿಭಾಗದ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದೆ. ಈ ನಿರ್ದೇಶನದ ಅನ್ವಯದ ಶೀಘ್ರವೇ ಬಡ್ತಿ ಪ್ರಕ್ರಿಯೆಗೆ ಚಾಲನೆ ಸಿಗಲಿದೆ ಎಂದರು.
ಡಿ.26, 27ರಂದು ಬೆಳಗಾವಿಯಲ್ಲಿ ಬೃಹತ್ ಗಾಂಧಿ ಭಾರತ ಕಾರ್ಯಕ್ರಮ, ಸಾರ್ವಜನಿತ ಸಭೆ: ಡಿಸಿಎಂ ಡಿಕೆಶಿ