ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯ್ತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಂತ ಗ್ರಂಥಾಲಯ ಮೇಲ್ವಿಚಾರಕರಿಗೆ ಸರ್ಕಾರ ಭರ್ಜರಿ ಸಿಹಿಸುದ್ದಿಯನ್ನು ನೀಡಿದೆ. ಅದೇ ರಾಜ್ಯ ಸರ್ಕಾರದಿಂದ ಕನಿಷ್ಠ ವೇತನ, ವಾರ್ಷಿಕ ತುಟ್ಟಿಭತ್ಯೆಯನ್ನು ಜಾರಿಗೊಳಿಸಿ ಆದೇಶಿಸಿದೆ.
ಈ ಕುರಿತಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಆದೇಶ ಹೊರಡಿಸಲಾಗಿದ್ದು, ಕಾರ್ಮಿಕ ಇಲಾಖೆಯಿಂದ ಜುಲೈ.28, 2022ರಂದು ಕನಿಷ್ಠ ವೇತನ ಪರಿಷ್ಕರಣೆ ಮಾಡಿದೆ. ಅದರಂತೆ ರಾಜ್ಯ ಸರ್ಕಾರದಿಂದ ಗ್ರಾಮ ಪಂಚಾಯ್ತಿ ಗ್ರಾಂಥಾಲಯ ಮೇಲ್ವಿಚಾರಕರಿಗೆ ಕನಿಷ್ಠ ವೇತನ ಹಾಗೂ ವಾರ್ಷಿಕ ವ್ಯತ್ಯಾಸವಾಗು ತುಟ್ಟಿಭತ್ಯೆಯನ್ನು ಪಾವತಿಸುವಂತೆ ಸೂಚಿಸಲಾಗಿದೆ.
ಕನಿಷ್ಠ ವೇತನದ ಅನುಸಾರವಾಗಿ ಗ್ರಾಮ ಪಂಚಾಯ್ತಿ ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗೆ ಸೇರಿದವರಿಗೆ ಈಗ ವ್ಯತ್ಯಾಸ ಉಂಟಾಗುತ್ತಿದೆ. ಈ ಹಿನ್ನಲೆಯಲ್ಲಿ ಗ್ರಂಥಾಲಯ ಮೇಲ್ವಿಚಾರಕರಿಗೆ 16,382 ರೂ.ಗಳನ್ನು ಕನಿಷ್ಠ ವೇತನ ನಿಗದಿಪಡಿಸಿದೆ. ಅಲ್ಲದೇ ವಾರ್ಷಿಕ ವ್ಯತ್ಯಾಸವಾಗುವ ತುಟ್ಟಿ ಭತ್ಯೆಯನ್ನು ಪಾವತಿಸಲು ಆದೇಶಿಸಲಾಗಿದೆ.
ಇನ್ನೂ 2023-24ನೇ ಸಾಲಿಗೆ ಗ್ರಂಥಾಲಯ ಮೇಲ್ವಿಚಾರಕರಿಗೆ ಮಾಸಿಕ ಕನಿಷ್ಠ ವೇತನ 16,382 ಮತ್ತು ವ್ಯತ್ಯಾಸವಾಗುವ ತುಟ್ಟಿ ಭತ್ಯೆ 1,542 ರೂ. ಸೇರಿ 17,924 ರೂ,ಗಳನ್ನು ಪಾವತಿಸುವಂತೆ ಆದೇಶ ಹೊರಡಿಸಲಾಗಿದೆ. ಹೀಗಾಗಿ ಇನ್ಮುಂದೆ ಗ್ರಾಮ ಪಂಚಾಯ್ತಿ ಗ್ರಂಥಾಲಯ ಮೇಲ್ವಿಚಾರಕರಿಗೆ ಕನಿಷ್ಠ ವೇತನ ಜಾರಿಯಿಂದಾಗಿ ಒಟ್ಟು ರೂ.17,924 ವೇತನ ಸಿಕ್ಕಂತೆ ಆಗಲಿದೆ.