ಚಿತ್ರದುರ್ಗ: ದೇಶದಲ್ಲೇ ಪ್ರಥಮ ಬಾರಿಗೆ ಕರ್ನಾಟಕ ರಾಜ್ಯ ಸರ್ಕಾರ ಇ-ಕಾಮರ್ಸ್ ಫ್ಲಾಟ್ ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರು, ಸಿನಿಮಾ ಮತ್ತು ಸಾಂಸ್ಕøತಿಕ ಕ್ಷೇತ್ರದಲ್ಲಿ ದುಡಿಯುತ್ತಿರುವ ಕಲಾ ಕಾರ್ಮಿಕರು ಹಾಗೂ ಮನೆಗೆಲಸದಲ್ಲಿ ತೊಡಗಿರುವ ಗೃಹ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ಪ್ರತ್ಯೇಕ ಅಧಿನಿಯಮಗಳನ್ನು ರೂಪಿಸಿದೆ. ಮುಂಬರುವ ದಿನಗಳಲ್ಲಿ ಸದನದಲ್ಲಿ ಈ ಅಧಿಸೂಚನೆಗಳನ್ನು ಮಂಡಿಸಿ, ಅನುಮೋದನೆ ಪಡೆದು, ಕಾಯ್ದೆಗಳನ್ನಾಗಿ ಜಾರಿ ಮಾಡುವುದಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಶನಿವಾರ ನಗರದ ಚಳ್ಳಕೆರೆ ರಸ್ತೆಯ ಎಸ್.ಜಿ.ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ವಿವಿಧ ಯೋಜನೆಗಳ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಈಗಾಗಲೇ ಇ-ಕಾಮರ್ಸ್ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರಿಗೆ ವಿಮಾ ಯೋಜನೆ ಜಾರಿಗೊಳಿಸಲಾಗಿದೆ. ಗಿಗ್ ಕಾರ್ಮಿಕರನ್ನು ನೋಂದಾಯಿಸಿ, ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಲು ಹಾಗೂ ಸಂಪನ್ಮೂಲ ಕ್ರೂಢಿಕರಣಕ್ಕಾಗಿ ‘ಕರ್ನಾಟಕ ಫ್ಲಾಟ್ ಫಾರ್ಮ್ ಆಧಾರಿತ ಗಿಗ್ ಕಾರ್ಮಿಕ ಅಧಿನಿಯಮ-2025’ ಜಾರಿ ಮಾಡಲಾಗುವುದು. ರಾಜ್ಯದಲ್ಲಿ ವರ್ಷಕ್ಕೆ ಸುಮಾರು 4 ಕೋಟಿ ಸಿನಿಮಾ ಟಿಕೇಟ್‍ಗಳು ಮಾರಾಟವಾಗುತ್ತವೆ. ಈ ಟೀಕೆಟ್‍ಗಳ ಮೇಲೆ ಸೆಸ್ ವಿಧಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆಸಲಾಗುತ್ತಿದೆ. ಇದಕ್ಕಾಗಿ ‘ಕರ್ನಾಟಕ ಸಿನಿಮಾ ಮತ್ತು ಚಟುವಟಿಕೆಗಳಲ್ಲಿ ತೊಡಗಿದ ಕಾರ್ಮಿಕರ ಸುಂಕ ಅಧಿನಿಯಮ-2024’ ಅನ್ನು ರಚಿಸಲಾಗಿದೆ. ಇದರೊಂದಿಗೆ ಮನೆಗೆಲಸದಲ್ಲಿ ನಿರ್ವಹಿಸುತ್ತಿರುವ ಕಾರ್ಮಿಕರ ಕಲ್ಯಾಣಕ್ಕಾಗಿ ‘ಕರ್ನಾಟಕ ಗೃಹ ಕಾರ್ಮಿಕರ ಅಧಿನಿಯಮ-2025’ ರಚಿಸಲಾಗಿದೆ. ಈ ಎಲ್ಲಾ ಅಧಿನಿಯಮಗಳ ನಿಯಾವಳಿಗಳನ್ನು ರೂಪಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ. ಈ ಅಧಿನಿಯಮಗಲನ್ನು ಸದನದಲ್ಲಿ ಮಂಡಿಸಿ, ಅನುಮೋದನೆ ಪಡೆದು, ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದರು.
ಗ್ಯಾರಂಟಿ ಯೋಜನೆಗಳಿಗೆ 5 ವರ್ಷದಲ್ಲಿ 3 ಲಕ್ಷ ಕೋಟಿ ಖರ್ಚು:
ಪ್ರತಿ ವರ್ಷ 56 ರಿಂದ 60 ಸಾವಿರ ಕೋಟಿ ರೂ. ವೆಚ್ಚವಾಗುತ್ತಿದೆ. ಈ ಮೊತ್ತ 5 ವರ್ಷಗಳಲ್ಲಿ 3 ಲಕ್ಷ ಕೋಟಿ ರೂ. ತಲುಪಬಹುದು. ದೇಶದ ಯಾವುದೇ ರಾಜ್ಯದಲ್ಲಿ ಇಷ್ಟೊಂದು ಮೊತ್ತದ ಹಣವನ್ನು ನೇರವಾಗಿ ಜನರ ಕಲ್ಯಾಣಕ್ಕಾಗಿ ವ್ಯಯಿಸುತ್ತಿಲ್ಲ. ರಾಜ್ಯದಲ್ಲಿ 30 ರಿಂದ 40 ಲಕ್ಷ ಅಸಂಘಟಿತ ಕಾರ್ಮಿಕರು ಇದ್ದು, ಕಾರ್ಮಿಕ ಇಲಾಖೆ 91 ವಿವಿಧ ಅಸಂಘಟಿತ ವರ್ಗಗಳ ಕಾರ್ಮಿಕರನ್ನು ಗುರುತಿಸಿದೆ. ಅಸಂಘಟಿತ ಕಾರ್ಮಿಕರನ್ನು ಉಚಿತವಾಗಿ ನೋಂದಾಯಿಸಿಕೊಂಡು ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದೆ. ಇದಕ್ಕಾಗಿ ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆ ಜಾರಿ ಮಾಡಲಾಗಿದೆ. ಇದವರೆಗೂ ರಾಜ್ಯದಲ್ಲಿ 25,45,607 ಕಾರ್ಮಿಕರು, ಚಿತ್ರದುರ್ಗ ಜಿಲ್ಲೆಯಲ್ಲಿ 65,644 ಕಾರ್ಮಿಕರು ನೊಂದಣಿಯಾಗಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ಮೋಟಾರು ಸಾರಿಗೆ ಹಾಗೂ ಇತರೆ ಸಂಬಂಧಿಸಿದ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿಯ ಮೂಲಕ, ಚಾಲಕರು, ನಿರ್ವಾಹಕ, ಕ್ಲೀನರ್, ನಿಲ್ದಾಣ ಸಿಬ್ಬಂದಿ, ಮಾರ್ಗ ಪರಿಶೀಲನಾ ಸಿಬ್ಬಂದಿ, ಬುಕಿಂಗ್, ನಗದು, ಡಿಪೋ ಗುಮಾಸ್ತರು ಸೇರಿದಂತೆ, ಮೋಟಾರು ಕ್ಷೇತ್ರದಲ್ಲಿ ದುಡಿಯತ್ತಿರುವ ಕಾರ್ಮಿಕರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿ ಮಾಡಲಾಗುತ್ತಿದೆ. ರಾಜ್ಯದಲ್ಲಿ ಇ-ಶ್ರಮ್ ಪೋರ್ಟಲ್ ಮೂಲಕ 1.60 ಕೋಟಿ ಕಾರ್ಮಿಕರು ನೊಂದಣಿಯಾಗಿದ್ದಾರೆ. ಖಾಸಗಿ ವಲಯದ ಉದ್ಯೋಗಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುವುದನ್ನು ಉದ್ದೇಶಿಸುವ ದೃಷ್ಠಿಯಿಂದ ‘ಆಶಾದೀಪ’ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಯೋಜನೆಯಡಿ ಉದ್ಯೋಗದಾತ ಮಾಲಿಕರು ಪಾವತಿಸಿದ ಇ.ಎಸ್.ಐ ಮತ್ತು ಇ.ಪಿ.ಎಫ್ ವಂತಿಕೆ ಮರುಪಾವತಿ, ತರಬೇತಿ ನೇಮಿಸಿಕೊಂಡ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳ ಶಿಷ್ಯವೇತನ ಮರುಪಾವತಿ, ಹೊಸ ನೇಮಕಾತಿಗೊಂಡವರಿಗೆ ಪಾವತಿಸಿದ ವೇತನದ ಎರಡು ವರ್ಷಗಳ ಅವಧಿಗೆ ಪ್ರತಿ ಉದ್ಯೋಗಿಯ ಮಾಸಿಕ ತಲಾ 6000 ರೂ. ವೇತನವನ್ನು ಉದ್ಯೋಗದಾತರಿಗೆ ಮರುಪಾವತಿ ಮಾಡಲಾಗುವುದು ಎಂದು ಸಚಿವ ಸಂತೋಷ ಎಸ್ ಲಾಡ್ ತಿಳಿಸಿದರು.
ಸರ್ಕಾರದಿಂದ ಖಾಸಗಿ ಕಂಪನಿಗಳು ನೀಡುವ ಇ.ಪಿ.ಎಫ್‍ಗಳನ್ನು ಪ್ರತ್ಯೇಕವಾಗಿ ಬ್ಯಾಂಕ್ ಖಾತೆಗಳನ್ನು ತೆರದು ನಿರ್ವಹಣೆ ಮಾಡುವಂತೆ ನಿಯಮ ರೂಪಿಸಲಾಗಿದೆ. ಉದ್ಯೋಗಿ, ಕಂಪನಿ ತೊರೆದ ಸಂದರ್ಭದಲ್ಲಿ ಈ ಹಣ ನೇರವಾಗಿ ಉದ್ಯೋಗಿಯ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ಇದರಿಂದ ಕಾರ್ಮಿಕರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.
ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ಕಾರ್ಮಿಕ ಇಲಾಖೆಯಿಂದ ಅದ್ಭುತ ಯೋಜನೆಗಳನ್ನು ಸಚಿವ ಸಂತೋಷ್ ಎಸ್ ಲಾಡ್ ಜಾರಿಗೊಳಿಸಿದ್ದಾರೆ. ಬಡವರ್ಗದವರ, ಕಾರ್ಮಿಕ ವರ್ಗದವರ ಕಷ್ಟಗಳ ಬಗ್ಗೆ ಅರಿತಿರುವ ಸಚಿವ ಸಂತೋಷ್ ಲಾಡ್ ಅವರು, ಅನೇಕ ಜನಕಲ್ಯಾಣ ಯೋಜನೆಗಳನ್ನು ಕಾರ್ಮಿಕ ಇಲಾಖೆ ಮೂಲಕ ಕಾರ್ಮಿಕರಿಗೆ ತಲುಪಿಸುತ್ತಿದ್ದಾರೆ. ಈ ಎಲ್ಲ ಯೋಜನೆಗಳ ಬಗ್ಗೆ ಹೆಚ್ಚಿನ ಜನ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.
ಚಳ್ಳಕೆರೆ ಶಾಸಕರು ಹಾಗೂ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ಅಧ್ಯಕ್ಷ ಟಿ.ರಘುಮೂರ್ತಿ ಮಾತನಾಡಿ, ಸಚಿವ ಸಂತೋಷ್ ಲಾಡ್ ಕಾರ್ಮಿಕ ಇಲಾಖೆಗೆ ಹೊಸ ಕಾಯಕಲ್ಪ ನೀಡಿದ್ದಾರೆ. ಗ್ಯಾರಂಟಿ ಯೋಜನೆಗಳ ಜೊತೆಗೆ ಕಾರ್ಮಿಕ ಇಲಾಖೆ ವತಿಯಿಂದ ಅಸಂಘಟಿತ ಕಾರ್ಮಿಕರಿಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಇವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿದ್ದಾರೆ ಎಂದರು.
ಹೊಸದುರ್ಗ ಶಾಸಕರು ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷ ಬಿ.ಜಿ. ಗೋವಿಂದಪ್ಪ ಮಾತನಾಡಿ, ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಅವರು, ಸರ್ಕಾರದ ಯೋಜನೆ, ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಕಾರ್ಮಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದು, ಕಾರ್ಮಿಕ ಇಲಾಖೆಯನ್ನು ಚುರುಕಾಗಿ ಮುನ್ನಡೆಸುತ್ತಾ ಜನರಿಗೆ ಸಮಪರ್ಕವಾಗಿ ಯೋಜನೆ, ಸೌಲಭ್ಯಗಳನ್ನು ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ, ಮಾತನಾಡಿದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಕಾರ್ಮಿಕ ಸಚಿವರಾದ ಸಂತೋಷ ಎಸ್ ಲಾಡ್ ಅವರು, ನಕಲಿ ಕಾರ್ಮಿಕ ಕಾರ್ಡ್‍ಗಳನ್ನು ಪತ್ತೆ ಹಚ್ಚಿ ರದ್ದು ಪಡಿಸಿದ್ದಾರೆ. ಇದರಿಂದ ಅರ್ಹ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯ ಅನೇಕ ಯೋಜನೆಗಳು ಸಮರ್ಪಕವಾಗಿ ತಲುಪುವಂತಾಗಿದೆ ಎಂದರು.
ವಿವಿಧ ಸೌಲಭ್ಯಗಳ ವಿತರಣೆ :
ಕಾರ್ಯಕ್ರಮದಲ್ಲಿ ಸಚಿವ ಸಂತೋಷ ಎಸ್ ಲಾಡ್, ಆಶಾದೀಪ ಯೋಜನೆಯಡಿ ನಗರದ ಮೆ.ವೈಟ್ ಓಷಿಯನ್ ಬ್ಯುಸಿನೆಸ್ ವೆಂಚರ್ಸ್ ಎಲ್.ಎಲ್.ಪಿ ಖಾಸಗಿ ಕಂಪನಿಗೆ ರೂ.7,18,838 ರೂಪಾಯಿಗಳ ಮರುಪಾವತಿ ಚೆಕ್ ನೀಡಿದರು. ಅಪಘಾತದಿಂದ ಮರಣ ಹೊಂದಿದ ಖಾಸಗಿ ವಾಣಿಜ್ಯ ಚಾಲಕರ ಅವಲಂಬಿತರಿಗೆ ರೂ.5 ಲಕ್ಷ ಪರಿಹಾರ ಧನ, ಸಾರಿಗೆ ಕಾರ್ಮಿಕರ ಸಹಜ ಮರಣ ಪರಿಹಾರ ಯೋಜನೆಯಡಿ ಅಂತ್ಯಕ್ರಿಯ ವೆಚ್ಚೆ ರೂ.25,000 ಚೆಕ್ ಹಾಗೂ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡುಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಆರಂಭದಲ್ಲಿ ಶುಕ್ರವಾರ ಬೆಳಿಗ್ಗೆ ನಿಧನರಾದ ಮಾಜಿ ವಿಧಾನ ಸಭಾಪತಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ (ಎಂ.ಎಲ್.ಸಿ) ಘಟಕದ ನಿಕಟಪೂರ್ವ ಅಧ್ಯಕ್ಷ ಎನ್. ತಿಪ್ಪಣ್ಣ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಒಂದು ನಿಮಿಷದ ಮೌನ ಆಚರಿಸಲಾಯಿತು. ಕಾರ್ಮಿಕ ಆಯುಕ್ತ ಡಾ.ಎಚ್.ಎನ್. ಗೋಪಾಲಕೃಷ್ಣ ಸಂವಿಧಾನ ಪೀಠಿಕೆ ಬೋಧಿಸಿದರು. ಉಪ ಕಾರ್ಮಿಕ ಆಯುಕ್ತ ಡಾ.ವೆಂಕಟೇಶ್ ಶಿಂದಿಹಟ್ಟಿ ಸ್ವಾಗತಿಸಿದರು. ಜಂಟಿ ಕಾರ್ಮಿಕ ಆಯುಕ್ತ ಡಾ. ಎಸ್.ಬಿ. ರವೀಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಆಕಾಶವಾಣಿ ಡಾ.ನವೀನ್ ಮಸ್ಕಲ್ ಕಾರ್ಯಕ್ರಮ ನಿರೂಪಿಸಿದರು. ಮೊರಾರ್ಜಿ ಕಲಾತಂಡ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಕರ್ನಾಟಕ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಡಾ. ಬಿ. ಯೋಗಿಶ್ ಬಾಬು, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ.ಕೆ. ತಾಜ್‍ಪೀರ್, ಜಿಲ್ಲಾ ಗ್ಯಾರಂಟಿ ಯೋಜನೆ ಪ್ರಾಧಿಕಾರ ಅಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ್, ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಂಟಿ ಕಾರ್ಮಿಕ ಆಯುಕ್ತ ಆಂಜನೇಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
BREAKING: ರಾಜ್ಯದ ‘ಮಹಾನಗರ ಪಾಲಿಕೆ ನೌಕರ’ರ ಪ್ರತಿಭಟನೆ ತಾತ್ಕಾಲಿಕವಾಗಿ ವಾಪಾಸ್
ನೀವು SSLC ಪರೀಕ್ಷೆಯಲ್ಲಿ ಶೇ.95ಕ್ಕೂ ಹೆಚ್ಚು ಅಂಕ ಪಡೆದಿದ್ದೀರಾ? ಈಗಲೇ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ