ಬೆಂಗಳೂರು :ಬಗರ್‌ಹುಕುಂ ಮಂಜೂರಾತಿ ಪಡೆದ ರೈತರಿಗೆ ಡಿಜಿಟಲ್ ಸಾಗುವಳಿ ಚೀಟಿ ನೀಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಇದರಿಂದ ದಾಖಲೆಗಳನ್ನು ಕಳೆದುಕೊಳ್ಳುವ, ಕಚೇರಿಗಳಿಗೆ ಅಲೆದಾಡುವ ತಾಪತ್ರಯ ತಪ್ಪಲಿದೆ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.
ಕಳೆದ ಮೂರು-ನಾಲ್ಕು ದಶಕಗಳಿಂದ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಲಕ್ಷಾಂತರ ರೈತರಿಗೆ ಜಮೀನು ಮಂಜೂರು ಮಾಡಲಾಗಿದೆ. ಆದರೆ, ನಾನಾ ಕಾರಣಗಳಿಂದಾಗಿ ರೈತರಿಗೆ ಸೂಕ್ತ ದಾಖಲೆಗಳನ್ನು ನೀಡಲಾಗಿಲ್ಲ. ಪರಿಣಾಮ ರೈತರು ಸಂಕಷ್ಟಕ್ಕೆ ಒಳಗಾಗಬೇಕಾದ ಸ್ಥಿತಿ ಇದೆ. ರೈತರು ತಮ್ಮ ಪಾಲಿನ ಜಮೀನು ಇದ್ದರೂ ಸಹ ಪೋಡಿಯಾಗದೆ ಸರ್ಕಾರಿ ಕಚೇರಿಗಳಿಗೆ ಸುತ್ತುವುದು ಪರಿಪಾಟವಾಗಿದೆ. ಹೀಗಾಗಿ ರೈತರಿಗೆ ಇಂತಹ ಶೋಷಣೆಗಳಿಂದ ತುಸು ನೆಮ್ಮದಿ ನೀಡಬೇಕು ಎಂಬ ವಿಚಾರದಲ್ಲಿ ರಾಜ್ಯ ಸರ್ಕಾರ ಹಾಗೂ ಕಂದಾಯ ಇಲಾಖೆ ಸ್ಪಷ್ಟವಾಗಿತ್ತು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ನಮೂನೆ 1-5 ಹಾಗೂ 6-10 ಅನ್ನು ಸರಳೀಕರಣಗೊಳಿಸಿ ರೈತರ ಜಮೀನನ್ನು ದುರಸ್ಥಿ ಮಾಡಿಕೊಡಬೇಕು ಹಾಗೂ ಬಡ ರೈತರ ಪಾಲಿನ ಮಹತ್ವಾಕಾಂಕ್ಷೆಯ ಯೋಜನೆಯಾದ ಬಗರ್ ಹುಕುಂ ಅಡಿಯಲ್ಲಿ ಮಂಜೂರು ಮಾಡಲಾಗುವ ಜಮೀನಿಗೆ ಹಕ್ಕುಪತ್ರ ನೀಡುವುದು ಮಾತ್ರವಲ್ಲದೆ, ರಿಜಿಸ್ಟರ್ ಕಚೇರಿಯಲ್ಲಿ ಸ್ವತಃ ತಹಶೀಲ್ದಾರ್ ನೋಂದಣಿ ಮಾಡಿಕೊಡುವಂತಹ ವ್ಯವಸ್ಥೆಯನ್ನು ರೂಪಿಸಬೇಕು ಎಂಬ ವಿಚಾರದಲ್ಲಿ ನಮ್ಮ ಸರ್ಕಾರ ದೃಢ ನಿರ್ಧಾರ ತೆಗೆದುಕೊಂಡಿತ್ತು.
ಅದರಂತೆ ನಮೂನೆ 1-5 ಹಾಗೂ 6-10 ಅನ್ನು ಸರಳೀಕರಣಗೊಳಿಸಿ ಜಮೀನನ್ನು ದುರಸ್ಥಿಗೊಳಿಸುವ ಕುರಿತು ಸುತ್ತೋಲೆ ಹೊರಡಿಸಿ ದುರಸ್ಥಿ ಅಭಿಯಾನವನ್ನು ಆರಂಭಿಸಿದ ಬೆನ್ನಿಗೆ ಇದೀಗ ಬಗರ್ ಹುಕುಂ ಯೋಜನೆಯ ಅಡಿ ಫಲಾನುಭವಿಗೆ ಆತನ ಜಮೀನನ್ನು ನೋಂದಣಿ ಮಾಡಿಸಿಕೊಡುವ ಮೂಲಕ ಕಂದಾಯ ಇಲಾಖೆ-ರಾಜ್ಯ ಸರ್ಕಾರ ಹೊರ ಮನ್ವಂತರಕ್ಕೆ ಮುನ್ನುಡಿ ಬರೆಯುತ್ತಿದೆ.
ಗುಂಡ್ಲುಪೇಟೆ ತಾಲೂಕು, ತೆರಕಣಾಂಬಿ ಹೋಬಳಿಯ ಬೊಮ್ಮನಹಳ್ಳಿ ಗ್ರಾಮದ ಶ್ರೀ ನಂಜುಂಡಯ್ಯ ಬಿನ್ ಹುಚ್ಚಯ್ಯ ಎಂಬವರಿಗೆ ಶುಕ್ರವಾರ (06/12/2024) ಬಗರ್ ಹುಕುಂ ಅಧಿಕೃತ ಸಾಗುವಳಿ ಡಿಜಿಟಲ್ ಚೀಟಿಯನ್ನು ನೋಂದಣಿ ಮಾಡಿಸಿಕೊಡಲಾಗಿದೆ. ಕಳೆದ ನವೆಂಬರ್ 28ರಂದು (28/11/2024) ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಬಗರ್ ಹುಕುಂ ಸಮಿತಿಯಲ್ಲಿ ಅನುಮೋದನೆ ಪಡೆಯುತ್ತಿದ್ದಂತೆ ರಾಜ್ಯ ಸರ್ಕಾರದ ಪರವಾಗಿ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ತಹಶೀಲ್ದಾರರಾದ ರಮೇಶ್ ಬಾಬು ಅವರು ಶುಕ್ರವಾರ ಅಧಿಕೃತ ಡಿಜಿಟಲ್ ಸಾಗುವಳಿ ಚೀಟಿಯನ್ನು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಯಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಿದ್ದಾರೆ.
ಈ ಮೂಲಕ ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ರಾಜ್ಯದಲ್ಲೇ ಮೊದಲ ನೋಂದಣಿ ಮಾಡಿಸಿದ ಡಿಜಿಟಲ್ ಸಾಗುವಳಿ ಚೀಟಿ ಪಡೆದ ಫಲಾನುಭವಿ ಎಂಬ ಶ್ರೇಯಕ್ಕೆ ಶ್ರೀ ನಂಜುಂಡಯ್ಯ ಬಿನ್ ಹುಚ್ಚಯ್ಯ ಪಾತ್ರರಾಗಿದ್ದಾರೆ. ಸರ್ಕಾರದ ಈ ನಡೆಯಿಂದ ಇನ್ಮುಂದೆ ರೈತರ ಬವಣೆಗಳಿಗೆ ಶಾಶ್ವತ ಪರಿಹಾರ ನೀಡಿದಂತಾಗಿದೆ. ದಾಖಲೆ ಕಳವು-ತಿದ್ದುವುದು ಸೇರಿದಂತೆ ಯಾರೋ ಕೆಲವರು ಮಾಡುವ ಕೃತ್ಯಕ್ಕೆ ರೈತರು ಪ್ರತಿನಿತ್ಯ ಸರ್ಕಾರಿ ಕಚೇರಿಗಳಿಗೆ ಅಲೆಯುವುದು ಶಾಶ್ವತತವಾಗಿ ತಪ್ಪಲಿದೆ. ರೈತರ ಜಮೀನು ಮಾಲೀಕತ್ವಕ್ಕೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ ಈ ಬೆಳವಣಿಗೆ ರಾಜ್ಯದ ರಾಜಕೀಯ ಇತಿಹಾಸದಲ್ಲೇ ಮೈಲುಗಲ್ಲು ಎಂದರೆ ತಪ್ಪಾಗಲಾರದು.
ಬಗರ್ ಹುಕುಂ ಯೋಜನೆಯ ಅಡಿ ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ ಒಟ್ಟಾರೆ 1.26 ಲಕ್ಷ ಅರ್ಜಿದಾರರನ್ನು ಅರ್ಹರು ಎಂದು ಗುರುತಿಸಲಾಗಿದೆ. ಮೊದಲ ಹಂತದಲ್ಲಿ ಡಿಸೆಂಬರ್ ಅಂತ್ಯದೊಳಗೆ ಕನಿಷ್ಟ 5000 ಜನರಿಗೆ ಡಿಜಿಟಲ್ ಸಾಗುವಳಿ ಚೀಟಿ ನೀಡಬೇಕು ಎಂಬ ಗುರಿಯನ್ನು ಹೊಂದಲಾಗಿದೆ. ಜನವರಿ ತಿಂಗಳ ವೇಳೆಗೆ ಈ ಸಂಖ್ಯೆಯನ್ನು 15 ರಿಂದ 20ಸಾವಿರಕ್ಕೆ ಏರಿಸಲಾಗುವುದು. ಅಲ್ಲದೆ, ಮುಂದಿನ ಆರು ತಿಂಗಳೊಳಗಾಗಿ ಎಲ್ಲರಿಗೂ ಸಾಗುವಳಿ ಚೀಟಿ ನೀಡಬೇಕು ಎಂಬುದು ನಮ್ಮ ಉದ್ದೇಶ. ಎಲ್ಲರಿಗೂ ಗುಂಡ್ಲುಪೇಟೆ ಮಾದರಿಯಲ್ಲೇ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಯಿಸಿಯೇ ಹಕ್ಕುಪತ್ರ ನೀಡಲಾಗುವುದು. ಈ ಮೂಲಕ ರೈತರ ಮಾಲೀಕತ್ವಕ್ಕೆ ಸರ್ಕಾರದ ಅಧಿಕೃತ ಮುದ್ರೆ ಒತ್ತಲಾಗುವುದು ಎಂದು ಹೇಳಲು ಸಂತಸವಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.