ಬೆಂಗಳೂರು : ಅಕ್ರಮ-ಸಕ್ರಮದಡಿ ಜಮೀನು ಹೊಂದಿರುವ ರಾಜ್ಯದ ರೈತರಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, ಇಂದಿನಿಂದ 1-5 ನಮೂನೆ ಪೋಡಿ ದುರಸ್ಥಿ ಕಾರ್ಯವನ್ನು ಅಭಿಯಾನ ಮಾದರಿಯಲ್ಲಿ ರಾಜ್ಯಾದ್ಯಂತ ಜಾರಿಗೊಳಿಸಲಿದೆ.
ಈ ಕುರಿತು ಸಚಿವ ಕೃಷ್ಣ ಬೈರೇಗೌಡ ಅವರು ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ರಾಜ್ಯದಲ್ಲಿ ಸುಮಾರು 10 ಲಕ್ಷ ರೈತರಿಗೆ ಹತ್ತಾರು ವರ್ಷಗಳ ಹಿಂದೆ ಸರ್ಕಾರಿ ಜಮೀನು ಅಕ್ರಮ ಸಕ್ರಮದಡಿ ಮಂಜೂರಾಗಿದ್ದರೂ ಸಹ, ಪೋಡಿ ದುರಸ್ಥಿ ಆಗದೆ ಬಾಕಿ ಉಳಿದಿದೆ. ಲಕ್ಷಾಂತರ ರೈತರು ಅನೇಕ ವರ್ಷಗಳಿಂದ ಪ್ರಯತ್ನ ಮಾಡುತ್ತಿದ್ದರೂ ಸಹ, ಕೆಲವೇ ಕೆಲವರಿಗೆ ಮಾತ್ರ ಪೋಡಿ ದುರಸ್ಥಿಯಾಗಿದ್ದು ಬಹುತೇಕರಿಗೆ ಆಗಿರುವುದಿಲ್ಲ. ಇದರಿಂದಾಗಿ ಹಲವು ರೈತರು ತೀವ್ರ ತೊಂದರೆಗೆ ಸಿಲುಕಿದ್ದು, ಅಧಿಕಾರಿಗಳು ಸೆಪ್ಟೆಂಬರ್ 2 ರಿಂದ ಅಭಿಯಾನ ಮಾದರಿಯಲ್ಲಿ 1-5 ನಮೂನೆ ಪೋಡಿ ದುರಸ್ಥಿ ಕೆಲಸಕ್ಕೆ ಮುಂದಾಗಬೇಕು, ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು” ಎಂದು ಹೇಳಿದ್ದಾರೆ.
ಮುಂದುವರೆದು, “ಜಮೀನು ಮಂಜೂರಾಗಿದ್ದರೂ ಪೋಡಿಯಾಗಿ ಆರ್.ಟಿ.ಸಿ ಆಗದೆ ಇರುವುದರಿಂದ, ಅಂತಹ ರೈತರ ಪರಿಸ್ಥಿತಿ ತ್ರಿಶಂಕುವಿನಂತೆ ಆಗಿದೆ. ತಾಲ್ಲೂಕು ಕಛೇರಿ, ಸರ್ವೆ ಕಛೇರಿಗಳಿಗೆ ಅಲೆದು ಅಲೆದು ಪ್ರಯೋಜನವಾಗದೆ ತೀವ್ರ ತೊಂದರೆಗೆ ತುತ್ತಾಗಿದ್ದಾರೆ. ಈ ಬಗ್ಗೆ ಬಹಳ ವರ್ಷಗಳಿಂದ ಚರ್ಚೆಗಳು, ಪ್ರಯತ್ನಗಳು ಆಗುತ್ತಿದ್ದರೂ ಸರಿಯಾದ ಪರಿಹಾರ ದೊರೆತಿರುವುದಿಲ್ಲ.
ಸಿಎಂ ಸಿದ್ಧರಾಮಯ್ಯನವರು ಈ ಸಮಸ್ಯೆಯನ್ನು ಪರಿಹರಿಸಲು, ಸೂಕ್ತ ಪರಿಹಾರ ಕ್ರಮಕೈಗೊಳ್ಳಲು ಸೂಚಿಸಿದ ಹಿನ್ನೆಲೆಯಲ್ಲಿ, ಕಂದಾಯ ಇಲಾಖೆ ದುರಸ್ಥಿಗೆ ಬಾಕಿಯಿರುವ ಪ್ರಕರಣಗಳ ವಿಲೆಗೆ ವ್ಯವಸ್ಥಿತವಾದ ಯೋಜನೆ ಆರಂಭಿಸಿದೆ” ಎಂದು ಮಾಹಿತಿ ನೀಡಿದರು.
ಈ ಹಿಂದೆ ಪೋಡಿ ದುರಸ್ಥಿ ಮಾಡಲು ಅವಶ್ಯವಿರುವ 1-5 ನಮೂನೆಗಳನ್ನು ತಯಾರಿಸಲು ಕಾಗದದ ಕಡತಗಳನ್ನು ತಯಾರಿಸಲು ಪ್ರಯತ್ನಿಸಲಾಗಿತ್ತು. ಆದರೆ, ಆ ಕೆಲಸವೂ ಸಮರ್ಪಕವಾಗಿ ಆಗಿರುವುದಿಲ್ಲ. ಆದ ಕೆಲವು ಕಡತಗಳು ಕಾಣೆಯಾಗಿವೆ ಅಥವಾ ಕೈಗೆ ಸಿಗುವುದಿಲ್ಲ. ಇದರಿಂದ ಕಡತಗಳು ಇದ್ದರೂ ಅನೇಕರಿಗೆ ಅದರ ಪ್ರಯೋಜನ ಸಿಗುತ್ತಿಲ್ಲ. ಈ ಸಮಸ್ಯೆಗಳಿಂದ ಕಂದಾಯ ಇಲಾಖೆ ಪೋಡಿ ದುರಸ್ಥಿ 1-5 ಕಡತಗಳನ್ನು ಕಂಪ್ಯೂಟರ್ಗಳನ್ನು ಬಳಸಿ ಗಣಕೀಕರಿಸಿದ (ಡಿಜಿಟಲ್) 1-5 ಕಡತಗಳನ್ನು ತಯಾರಿಸಲು ಆರಂಭಿಸಿದೆ.
ಡಿಜಿಟಲ್ ಆ್ಯಪ್ ಮುಖಾಂತರ ಮಾಡುವುದರಿಂದ ಸರಳ, ವೇಗವಾಗಿ ಕಡತಗಳನ್ನು ತಯಾರಿಸಬಹುದು. ಯಾರ ಬಳಿ ವಿಳಂಬವಾಗಿದೆ ಎಂಬುದು ಪಾರದರ್ಶಕವಿರುವುದರಿಂದ, ವೇಗವಾಗಿ ಕೆಲಸವಾಗಬಹುದು. ಮೂಲ ಮಂಜೂರಿ ದಾಖಲೆಗಳನ್ನು ಸುರಕ್ಷಿತವಾಗಿಡಬಹುದು. ಮುಂದೆ ತಿದ್ದಲು, ನಕಲು ಮಾಡಲು ಸಾಧ್ಯವಿಲ್ಲ. ಒಬ್ಬ ರೈತನಿಗೆ ತಯಾರು ಮಾಡಿದ 1-5 (ನಮೂನೆ)ಕಡತ, ಆ ಸರ್ವೆ ನಂಬರಿನ ಎಲ್ಲಾ ರೈತರಿಗೂ ಅದೇ ಕಡತ ಅನುಕೂಲವಾಗುತ್ತದೆ. 1-5(ನಮೂನೆ)ಕಡತ ಕಾಣೆಯಾಗಲು ಅಥವಾ ಕಳೆದು ಹೋಗಲು ಸಾಧ್ಯವಿಲ್ಲ” ಎಂದು ತಿಳಿಸಿದರು.
ಮುಂದುವರೆದು, “ಈ ಅಭಿಯಾನವನ್ನು ಸೆಪ್ಟೆಂಬರ್ 02 ರಿಂದ ರಾಜ್ಯಾದ್ಯಂತ ಆರಂಭಿಸುತ್ತಿದ್ದೇವೆ. ರಾಜ್ಯದಲ್ಲಿ ಎಲ್ಲೆಲ್ಲಿ ರೈತರಿಗೆ ಮಂಜೂರಾಗಿರುವ ಜಮೀನುಗಳ ದುರಸ್ಥಿಯಾಗದೆ ಬಾಕಿ ಉಳಿದಿದೆ ಅಂತಹ ಪ್ರತಿಯೊಂದು ಕಡೆಯಲ್ಲೂ ಡಿಜಿಟಲಾಗಿ 1-5(ನಮೂನೆ)ಕಡತ ಸೆಪ್ಟೆಂಬರ್ 02 ರಿಂದ ತಯಾರಿ ಮಾಡಲಾಗುವುದು. 1-5(ನಮೂನೆ)ಕಡತ ಎಲ್ಲಾ ಸರ್ಕಾರಿ ಜಮೀನಿಗೆ (ರೈತರಿಗೆ ಮಂಜೂರಾಗಿರುವ), ರೈತರ ಅರ್ಜಿಗೆ ಕಾಯದೆ ಕಂದಾಯ ಇಲಾಖೆ ಸ್ವಯಂ ಕಡತಗಳನ್ನು ತಯಾರಿಸಲಿದೆ.
1-5ನಮೂನೆ ಪ್ರಕಾರ ತಯಾರಾದ ಕಡತಗಳನ್ನು ಮುಂದೆ 6-10 ಮಾಡಿ ಅವರಿಗೆ ಸರ್ವೆಯೊಂದಿಗೆ ದುರಸ್ಥಿ ಮಾಡಿದ ನಂತರ ಹೊಸ ಸರ್ವೆ ನಂಬರ್ ಪಹಣಿಯೊಂದಿಗೆ ಸಂಪೂರ್ಣ ದಾಖಲೆ ಮಾಡಿಕೊಡಲಾಗುವುದು. ಇದನ್ನು ಅಭಿಯಾನ ಮಾದರಿಯಲ್ಲಿ ಅನುಷ್ಟಾನ ಮಾಡಲಾಗುವುದು. ಇದೊಂದು ದೀರ್ಘಕಾಲದ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿ ರೈತರಿಗೆ ನೆಮ್ಮದಿಯನ್ನು ನೀಡುವ ಅಭಿಯಾನವಾಗಲಿದೆ. ಹೀಗಾಗಿ ಎಲ್ಲಾ ಅಧಿಕಾರಿಗಳೂ ಈ ಯೋಜನೆ ಯಶಸ್ವಿಯಾಗಲು ಸಹಕರಿಸಬೇಕಿದೆ. ಆ ಮೂಲಕ ರೈತರ ದೀರ್ಘ ಕಾಲದ ಸಮಸ್ಯೆಗಳನ್ನು ಪರಿಹರಿಸಲು ತಮ್ಮಿಂದಾದ ಸಹಕಾರ ನೀಡಬೇಕಿದೆ” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮನವಿ ಮಾಡಿದರು.