ಅಡಕೆಯನ್ನು ಕಡಿಮೆ ಮಳೆ ಆಶ್ರಿತ ಪ್ರದೇಶದಲ್ಲಿಯು ಕೊಳವೆಬಾವಿ ಮೂಲಕ ಬೆಳೆಯಲಾಗುತ್ತಿದ್ದು ಇದರಿಂದ ಅಂತರ್ಜಲ ಮಟ್ಟ ಕುಸಿತಕ್ಕೆ ಕಾರಣವಾಗಿರುವುದರಿಂದ ಅಡಿಕೆ ಪ್ರದೇಶ ವಿಸ್ತೀರ್ಣದ ಬದಲಾಗಿ ಪರ್ಯಾಯ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಯಿಸುವ ಯೋಜನೆ ರೂಪಿಸಲು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ಸೂಚನೆ ನೀಡಿದರು.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕೃಷಿ ಯೋಜನೆಗಳ ಜಿಲ್ಲಾ ಮಟ್ಟದ ಅನುಷ್ಟಾನ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಡಕೆಯನ್ನು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಹೆಚ್ಚು ಬೆಳೆಯಲಾಗುತ್ತಿದೆ. ಆದರೆ ಕೊಳವೆಬಾವಿ ಆಶ್ರಯಿಸಿ ಬೆಳೆಯಲಾಗುತ್ತಿರುವುದರಿಂದ ಅಂತರ್ಜಲ ಮಟ್ಟ ಕುಸಿದ ಅಪಾಯ ಮಟ್ಟ ತಲುಪಿದೆ. ಬೇಸಿಗೆಯಲ್ಲಿ ಅಂತರ್ಜಲ ಮಟ್ಟದ ಇನ್ನೂ ಕೆಳಮಟ್ಟಕ್ಕೆ ಹೋಗಲಿದೆ. ಇದರಿಂದ ರೈತರಿಗೂ ನಷ್ಟವಾಗಲಿದ್ದು ಪ್ರಾಕೃತಿಕ ಸಂಪತ್ತು ವ್ಯರ್ಥವಾಗುತ್ತಿದೆ. ಜಿಲ್ಲೆಯಲ್ಲಿ ಎರಡು ತಾಲ್ಲೂಕುಗಳಲ್ಲಿ ಮಾತ್ರ ಅಂತರ್ಜಲ ಮಟ್ಟ ಉತ್ತಮವಾಗಿದೆ. ಉಳಿದಂತೆ ನಿರ್ಣಾಯಕ ಹಂತ ಮತ್ತು ಬಳಕೆಯ ಮೀರಿದ ಹಂತವನ್ನು ತಲುಪಿದೆ. ಹರಿಹರ, ನ್ಯಾಮತಿ ಹೊರತುಪಡಿಸಿ ದಾವಣಗೆರೆ, ಹೊನ್ನಾಳಿ ನಿರ್ಣಾಯಕ ಹಂತ ತಲುಪಿದ್ದು ಜಗಳೂರು, ಚನ್ನಗಿರಿ ಹೆಚ್ಚು ಬಳಕೆ ಮಾಡಿದ್ದು ಅಂತಿಮ ಹಂತವನ್ನು ಅಂತರ್ಜಲ ಬಳಕೆಯಲ್ಲಿ ತಲುಪಿದೆ. ಆದ್ದರಿಂದ ಅಡಿಕೆಗೆ ಪರ್ಯಾಯವಾಗಿ ಮೆಕೆಡೋನಿಯ, ಸೀತಾಫಲ, ಅಂತರ ಬೆಳೆಯನ್ನಾಗಿ ಕೋಕೋ, ಪೆಪ್ಪರ್ ಬೆಳೆಯಲು ಯೋಜನೆ ರೂಪಿಸಬೇಕೆಂದು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
30 ಹೆಚ್.ಪಿ.ವರೆಗೆ ಟ್ರ್ಯಾಕ್ಟರ್
ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ರೈತರಿಗೆ 30 ಹೆಚ್.ಪಿ.ವರೆಗೆ ಸರ್ಕಾರದ ಸಹಾಯಧನದಡಿ ಟ್ರ್ಯಾಕ್ಟರ್ ನೀಡಲು ಯೋಜನೆ ರೂಪಿಸಲು ತಿಳಿಸಿದ ಅವರು ತೋಟಗಾರಿಕೆ ಇಲಾಖೆಯಿಂದ 30 ಹೆಚ್.ಪಿ.ವರೆಗಿನ 90 ಟ್ರ್ಯಾಕ್ಟರ್ಗಳನ್ನು ಈ ವರ್ಷ ನೀಡಲಾಗುತ್ತದೆ. ಸಾಮಾನ್ಯ ವರ್ಗದವರಿಗೆ ರೂ.75 ಸಾವಿರ ಮತ್ತು ಎಸ್.ಸಿ. ಎಸ್.ಟಿ ವರ್ಗದವರಿಗೆ ರೂ. 2.50 ಲಕ್ಷ ಸಹಾಯಧನ ನೀಡಲಾಗುತ್ತದೆ ಎಂದು ತೋಟಗಾರಿಕೆ ಉಪನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.
ಬೆಳೆ ವಿಮೆ ಹೆಚ್ಚು ನೊಂದಾಯಿಸಲು ಸೂಚನೆ; ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಈವರೆಗೆ ಮುಂಗಾರಿನಲ್ಲಿ 40265 ರೈತರು ಬೆಳೆ ವಿಮೆಗೆ ನೊಂದಾಯಿಸಿದ್ದಾರೆ. ಬೆಳೆ ವಿಮೆ ಜೊತೆಗೆ ಬೆಳೆ ಕಟಾವು ಪ್ರಯೋಗವನ್ನು ಕರಾರುವಕ್ಕಾಗಿ ಮಾಡಬೇಕು. ಮತ್ತು ಬೆಳೆ ಸಮೀಕ್ಷೆಯ ವೇಳೆ ಯಾವುದೇ ವ್ಯತ್ಯಾಸವಾಗದಂತೆ ಸಮೀಕ್ಷೆ ಮಾಡಬೇಕು. ಪರಿಶೀಲನಾ ಹಂತದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಸರಿಯಾಗಿ ಪರಿಶೀಲನೆ ನಡೆಸಬೇಕು, ಯಾವುದೇ ತರಹದ ಲೋಪಗಳು ಕಂಡುಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಲಾಗುತ್ತದೆ. ಕಳೆದ ವರ್ಷ ಸೊಕ್ಕೆ ಹೋಬಳಿಯಲ್ಲಿ ಬೆಳೆ ಇಲ್ಲದಿದ್ದರೂ ಬೆಳೆಯನ್ನು ನೊಂದಾಯಿಸಿದ್ದನ್ನು ನೆನಪಿಸಿದರು.
ರೈತ ಉತ್ಪಾದಕ ಕಂಪನಿಗಳನ್ನು ಹೆಚ್ಚಿಸಿ; ರೈತ ಉತ್ಪಾದಕ ಕಂಪನಿಗಳನ್ನು ಹೆಚ್ಚಿಸುವುದರಿಂದ ರೈತರಿಗೆ ಅನುಕೂಲವಾಗಲಿದೆ. ಜಿಲ್ಲೆಯಲ್ಲಿ ನಬಾರ್ಡ್ನಿಂದ 3, ಕೃಷಿ 16, ತೋಟಗಾರಿಕೆ 7, ಮೀನುಗಾರಿಕೆ 1, ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ 1 ಸೇರಿ ಒಟ್ಟು 28 ರೈತ ಉತ್ಪಾದಕ ಕಂಪನಿಗಳಿದ್ದು ಮಾಯಕೊಂಡ ಹೋಬಳಿಯಲ್ಲಿ ಇನ್ನೊಂದು ಎಫ್ಪಿಓ ಸೇರಿದಂತೆ ಅಗತ್ಯವಿರುವ ಕಡೆ ರೈತ ಉತ್ಪಾದಕ ಕಂಪನಿಗಳನ್ನು ಹೆಚ್ಚಿಸಲು ಸೂಚನೆ ನೀಡಿದರು.
ರಸಗೊಬ್ಬರ ಕೊರತೆಯಾಗಂತೆ ಕ್ರಮವಹಿಸಿ; ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆಯಾಗಂತೆ ಪೂರೈಕೆಗೆ ಕಂಪನಿಗಳು ಮುಂದಾಗಬೇಕು. ಕಳೆದ ವರ್ಷ ಈ ವರ್ಷಕ್ಕಿಂತಲೂ ಹೆಚ್ಚು ಮಳೆಯಾದರೂ ಸಮಸ್ಯೆಯಾಗಿರಲಿಲ್ಲ. ಕಂಪನಿಗಳು ಪೂರೈಕೆ ಮಾಡುವ ಶೇ 95 ರಷ್ಟು ರಸಗೊಬ್ಬರ ಪೂರೈಕೆಯಾಗಿದೆ ಎಂದು ಕಂಪನಿ ಪ್ರತಿನಿಧಿಗಳು ಸಭೆಯಲ್ಲಿ ತಿಳಿಸಿದಾಗ ಕೃಷಿ ಇಲಾಖೆ ಜಾಗೃತ ದಳದವರು ಪರಿಶೀಲನೆ ನಡೆಸಿ ಯಾವುದೇ ಕಾರಣಕ್ಕೂ ಗೊಬ್ಬರದ ಕೊರತೆಯಾಗಂತೆ ಕ್ರಮ ವಹಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸ್ತ್ರೀಶಕ್ತಿ ಸಂಘಗಳ ಆಹಾರ ಉತ್ಪನ್ನಗಳಿಗೆ ಉತ್ತೇಜನ; ಸರ್ಕಾರದಿಂದ ಆಯೋಜಿಸುವ ಸಭೆ, ಸಮಾರಂಭಗಳಲ್ಲಿ ನೀಡಲಾಗುವ ಆಹಾರಗಳ ತಿನಿಸುಗಳನ್ನು ಸ್ತ್ರೀ ಶಕ್ತಿ ಸಂಘ, ಸ್ವಸಹಾಯ ಸಂಘದ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ವಿತರಣೆ ಮಾಡಲು, ಇದನ್ನು ಎಲ್ಲಾ ಇಲಾಖೆ ಮುಖ್ಯಸ್ಥರು ಅನುಸರಿಸಲು ಜಂಟಿ ಸುತ್ತೋಲೆಯನ್ನು ಹೊರಡಿಸಲು ಜಂಟಿ ಕೃಷಿ ನಿರ್ದೇಶಕರಿಗೆ ಸೂಚನೆ ನೀಡಿ ಇದರಿಂದ ಮಾರುಕಟ್ಟೆಯನ್ನು ಹೆಚ್ಚಿಸುವ ಜೊತೆಗೆ ಗುಣಮಟ್ಟದ ಆಹಾರದ ವಿತರಣೆಯಾಗಲಿದೆÀ ಎಂದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕರಾದ ಜಿಯಾವುಲ್ಲಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಘವೇಂದ್ರ ಪ್ರಸಾದ್, ನಬಾರ್ಡ್ ಡಿಡಿಎಂ ರಶ್ಮಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಪಿ.ಸಿ.ಹಿರೇಮಠ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.