ನವದೆಹಲಿ : ಭಾರತೀಯ ರೀಸರ್ವ್ ಬ್ಯಾಂಕ್ ರೈತರಿಗೆ ಸಿಹಿಸುದ್ದಿ ನೀಡಿದ್ದು, ಏರುತ್ತಿರುವ ಹಣದುಬ್ಬರದಿಂದ ರೈತರಿಗೆ ಪರಿಹಾರ ನೀಡುವ ಸಲುವಾಗಿ ಖಾತರಿಯಿಲ್ಲದೆ 2 ಲಕ್ಷ ರೂ.ವರೆಗೆ ಸಾಲವನ್ನು ನೀಡುವುದಾಗಿ ಘೋಷಿಸಿದೆ.
ಪ್ರಸ್ತುತ ಈ ಮಿತಿ 1.6 ಲಕ್ಷ ರೂ. ಇದ್ದು, ಇನ್ಮುಂದೆ ಕೃಷಿ ಸಾಲವನ್ನು 2 ಲಕ್ಷ ರೂ.ವರೆಗೆ ನೀಡಲಾಗುವುದು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಘೋಷಣೆ ಮಾಡಿದ್ದಾರೆ.
ವಿತ್ತೀಯ ನೀತಿ ಪರಾಮರ್ಶೆ ಕುರಿತು ಮಾಹಿತಿ ನೀಡಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು, ಹಣದುಬ್ಬರ ಮತ್ತು ಕೃಷಿಯಲ್ಲಿ ಬಳಸುವ ಕಚ್ಚಾ ವಸ್ತುಗಳ ಬೆಲೆಯಲ್ಲಿನ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಗ್ಯಾರಂಟಿ ರಹಿತ ಕೃಷಿ ಸಾಲದ ಮಿತಿಯನ್ನು 1.6 ಲಕ್ಷದಿಂದ ರೂ. 2 ಲಕ್ಷ” ಎಂದು ನಿರ್ಧರಿಸಲಾಗಿದೆ. ಇದರಿಂದ ಸಣ್ಣ ಮತ್ತು ಅತಿಸಣ್ಣ ರೈತರು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವ ವ್ಯಾಪ್ತಿ ಹೆಚ್ಚಲಿದೆ ಎಂದರು. 2010ರಲ್ಲಿ ಆರ್‌ಬಿಐ ಯಾವುದೇ ಗ್ಯಾರಂಟಿ ಇಲ್ಲದೆ ಕೃಷಿ ಕ್ಷೇತ್ರಕ್ಕೆ 1 ಲಕ್ಷ ರೂ.ಗಳ ಮಿತಿಯನ್ನು ನಿಗದಿಪಡಿಸಿತ್ತು ಎಂಬುದು ಗಮನಾರ್ಹ. ನಂತರ, 2019 ರಲ್ಲಿ ಅದನ್ನು 1.6 ಲಕ್ಷ ರೂ.ಗೆ ಹೆಚ್ಚಿಸಲಾಯಿತು. ಈ ಸಂಬಂಧ ಶೀಘ್ರದಲ್ಲೇ ಸುತ್ತೋಲೆ ಹೊರಡಿಸಲಾಗುವುದು ಎಂದು ಆರ್‌ಬಿಐ ತಿಳಿಸಿದೆ.