ಮಡಿಕೇರಿ : ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಪ್ರಕ್ರಿಯೆ ಡಿಸೆಂಬರ್ 1 ರಿಂದ ಆರಂಭವಾಗಿದ್ದು, ಜಿಲ್ಲೆಯ ರೈತರು ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ಶ್ರೀಧರಮೂರ್ತಿ ಜೆ.ಬಿ. ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಆದೇಶದಂತೆ 2024-25ನೇ ಸಾಲಿಗೆ ರೈತರಿಂದ ಕನಿಷ್ಟ ಬೆಂಬಲ ಬೆಲೆಯೋಜನೆಯಡಿ ಭತ್ತ ಖರೀದಿ ಮಾಡಲಾಗುತ್ತಿದ್ದು, ಡಿಸೆಂಬರ್, 01 ರಿಂದ ಆರಂಭವಾಗಿದ್ದು, 2025 ರ ಮಾರ್ಚ್, 31 ರವರೆಗೆ ಭತ್ತ ಖರೀದಿ ಮತ್ತು ನೋಂದಣಿಗೆ ಅವಕಾಶ ಇರುತ್ತದೆ.
ಜಿಲ್ಲೆಗೆ ಭತ್ತ ಮತ್ತು ರಾಗಿ ಖರೀದಿಸಲು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯನ್ನು ಖರೀದಿ ಏಜೆನ್ಸಿಯನ್ನಾಗಿ ಸರಕಾರ ನೇಮಕ ಮಾಡಿದ್ದು, ಖರೀದಿ ಪ್ರಕ್ರಿಯೆಯು ಇವರ ಮುಖಾಂತರ ನಡೆಯುತ್ತಿದೆ. ಕೇಂದ್ರ ಸರ್ಕಾರದ ಬೆಂಬಲ ಬೆಲೆಯಡಿ ಡಿಸೆಂಬರ್-2024 ರಿಂದ ರೈತರ ನೋಂದಣಿ ಕಾರ್ಯ ಆರಂಭವಾಗಿದ್ದು, ಸಾಮಾನ್ಯ ಭತ್ತ ಪ್ರತಿ ಕ್ವಿಂಟಾಲ್‍ಗೆ 2300 ರೂ. ನಿಗದಿಪಡಿಸಲಾಗಿದ್ದು, ರಾಗಿ ಪ್ರತಿ ಕ್ವಿಂಟಲ್‍ಗೆ 4290 ರೂ. ನಿಗದಿಪಡಿಸಲಾಗಿರುತ್ತದೆ.
ಜಿಲ್ಲೆಯಾದ್ಯಂತ ರೈತರಿಗೆ ಅನುಕೂಲ ಆಗುವಂತೆ 05 ಕಡೆಗಳಲ್ಲಿ ಮಡಿಕೇರಿ ಎಪಿಎಂಸಿ ಆವರಣ, ಕುಶಾಲನಗರ ಎಪಿಎಂಸಿ ಆವರಣ, ಗೋಣಿಕೊಪ್ಪ ಎಪಿಎಂಸಿ ಆವರಣ ಹಾಗೂ ಸೋಮವಾರಪೇಟೆ ಎಪಿಎಂಸಿ ಮಾರ್ಕೇಟ್ ಆವರಣ ಹಾಗೂ ವಿರಾಜಪೇಟೆ ಎಪಿಎಂಸಿ ಆವರಣದಲ್ಲಿ ಖರೀದಿ ಮಾಡಲಾಗುತ್ತಿದೆ.
2025 ರ ಜನವರಿ, 22 ರಂತೆ ಒಟ್ಟು ಮಡಿಕೇರಿಯಲ್ಲಿ 05 ಹಾಗೂ ಸೋಮವಾರಪೇಟೆ ತಾಲ್ಲೂಕಿನಲ್ಲಿ 04 ಒಟ್ಟು 09 ರೈತರು ಒಟ್ಟು 269.50 ಕ್ವಿಂಟಾಲ್ ಭತ್ತ ನೀಡಲು ನೋಂದಣಿ ಮಾಡಿಕೊಂಡಿದ್ದಾರೆ. ಭತ್ತವನ್ನು ಮಾರಾಟ ಮಾಡಬೇಕಾದ ರೈತರು ಈಗಾಗಲೇ ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿಯಾಗಿರಬೇಕು. ಒಂದು ವೇಳೆ ರೈತರು ನೋಂದಣಿ ಮಾಡದಿದ್ದಲ್ಲಿ ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಂಡು ತಾವು ಬೆಳೆದ ಭತ್ತವನ್ನು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಬಹುದಾಗಿದೆ.
ಖರೀದಿ ಕೇಂದ್ರಗಳಲ್ಲಿ ರೈತರಿಂದ ಖರೀದಿ ಮಾಡಿದ ಭತ್ತದ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ನೋಂದಣಿ ಕೇಂದ್ರದಲ್ಲಿ ರೈತರು ಪ್ರೂಟ್ಸ್ ಐಡಿ, ಆಧಾರ್ ಸಂಖ್ಯೆಗೆ ಜೋಡಣೆಯಾದ ತಮ್ಮ ಎನ್‍ಪಿಸಿಐ ಬ್ಯಾಂಕ್ ಖಾತೆಯ ವಿವರ ನೀಡಬೇಕಿದೆ.
ಸರಕಾರವು ಪೌಷ್ಟಿಕಾಂಶತೆಯಿಂದ ಕೂಡಿದ ಸಾರವರ್ಧಿತ ಅಕ್ಕಿಯನ್ನು ಫಲಾನುಭವಿಗಳಿಗೆ ನೀಡಲು ಉದ್ದೇಶಿಸಿದ್ದು, ಈ ಸಂಬಂಧ ಅಕ್ಕಿಗಿರಣಿಗಳಲ್ಲಿ ಹಲ್ಲಿಂಗ್ ಮಾಡುವಾಗ ಸಾರವರ್ದಿತ ಅಕ್ಕಿಯನ್ನು ತಯಾರು ಮಾಡಲು ಕಡ್ಡಾಯವಾಗಿ ಅಕ್ಕಿ ಗಿರಣಿ ಮಾಲೀಕರುಗಳು ಬ್ಲೆಂಡಿಂಗ್ ಮಿಷನ್‍ನ್ನು ಅಳವಡಿಸಲು ಹಾಗೂ ಅಳವಡಿಸದ ಅಕ್ಕಿಗಿರಣಿಗಳಿಗೆ ಸರಕಾರದ ಆದೇಶದಂತೆ ಹಲ್ಲಿಂಗ್‍ಗೆ ಭತ್ತವನ್ನು ನೀಡಲು ಸಾಧ್ಯವಿರುವುದಿಲ್ಲ. ಹೆಚ್ಚಿನ ಮಾಹಿತಿಗೆ ದೂ.ಸಂ. ಸೋಮಯ್ಯ, ಖರೀದಿ ವ್ಯವಸ್ಥಾಪಕರು, ಕೊಡಗು ಜಿಲ್ಲೆ 8073448843 ನ್ನು ಸಂಪರ್ಕಿಸಬಹುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ಶ್ರೀಧರಮೂರ್ತಿ ಜೆ.ಬಿ. ಅವರು ತಿಳಿಸಿದ್ದಾರೆ.