ಬೆಂಗಳೂರು : ರೈತರ ಅನುಕೂಲಕ್ಕಾಗಿ ಆಯಾ ಊರಿನ ವ್ಯಾಪ್ತಿಯ ಪೋಡಿ ನಕ್ಷೆಯನ್ನು ಆನ್ ಲೈನ್ ನಲ್ಲಿ ಡೌನ್ ಲೋಡ್ ಮಾಡಲು ರಾಜ್ಯ ಸರ್ಕಾರವು ಅವಕಾಶ ನೀಡಲಾಗುತ್ತಿದೆ. ನೀವು ಪೋಡಿ ನಕ್ಷೆಯನ್ನು ಕುಳಿತಲ್ಲೇ ಡೌನ್ ಲೋಡ್ ಮಾಡಿಕೊಳ್ಳಲು ಮುಂದಿನ ಹಂತಗಳನ್ನು ಅನುಸರಿಸಿ.
ಡಿಜಿಟಲ್ ಆ್ಯಪ್ ಮುಖಾಂತರ ಮಾಡುವುದರಿಂದ ಸರಳ, ವೇಗವಾಗಿ ಕಡತಗಳನ್ನು ತಯಾರಿಸಬಹುದು. ಯಾರ ಬಳಿ ವಿಳಂಬವಾಗಿದೆ ಎಂಬುದು ಪಾರದರ್ಶಕವಿರುವುದರಿಂದ, ವೇಗವಾಗಿ ಕೆಲಸವಾಗಬಹುದು. ಮೂಲ ಮಂಜೂರಿ ದಾಖಲೆಗಳನ್ನು ಸುರಕ್ಷಿತವಾಗಿಡಬಹುದು. ಮುಂದೆ ತಿದ್ದಲು, ನಕಲು ಮಾಡಲು ಸಾಧ್ಯವಿಲ್ಲ. ಒಬ್ಬ ರೈತನಿಗೆ ತಯಾರು ಮಾಡಿದ 1-5 (ನಮೂನೆ)ಕಡತ, ಆ ಸರ್ವೆ ನಂಬರಿನ ಎಲ್ಲಾ ರೈತರಿಗೂ ಅದೇ ಕಡತ ಅನುಕೂಲವಾಗುತ್ತದೆ. 1-5(ನಮೂನೆ)ಕಡತ ಕಾಣೆಯಾಗಲು ಅಥವಾ ಕಳೆದು ಹೋಗಲು ಸಾಧ್ಯವಿಲ್ಲ.
ಕುಟುಂಬದ ಸದಸ್ಯರ ಪಾಲುಗಾರಿಕೆ, ಭೂ ಆಸ್ತಿಯ ಕೆಲವು ಭಾಗ ಮಾರಾಟ, ದಾನಪತ್ರ, ನಿವೇಶನಕ್ಕೆ ಬಳಕೆ, ಭೂ ಪರಿವರ್ತನೆ ಸೇರಿ ಹಲವು ಚಟುವಟಿಕೆಗಳಿಗೆ ಪೋಡಿ ನಕ್ಷೆ ಅವಶ್ಯಕವಾಗಿದೆ. ಒಂದು ಸರ್ವೇ ನಂಬರಿನಲ್ಲಿ ಹಲವರ ಹೆಸರಿದ್ದರೆ ಮುಂದೆ ಸರ್ಕಾರದಿಂದ ಸೌಲಭ್ಯ ಪಡೆಯುವುದಕ್ಕೆ ತೊಂದರಯಾಗುತ್ತದೆ. ಜೊತೆಗೆ ಜಮೀನು ಮಾರಾಟ ಸಂದರ್ಭದಲ್ಲಿಯೂ ತೊಡಕಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ರಾಜ್ಯ ಸರ್ಕಾರವು ಮೊಬೈಲ್ ನಲ್ಲೇ ಪೋಡಿ ನಕ್ಷೆ ಪಡೆಯುವ ಹೊಸ ತಂತ್ರಾಂಶವನ್ನು ಬಿಡುಗಡೆಮಾಡಿದೆ.
ಪೋಡಿ ನಕ್ಷೆ ಮಾಡಿಸುವುದಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವುದಕ್ಕಾಗಿ ಸರ್ಕಾರವು ಈಗ ಆನ್ಲೈನ್ ವ್ಯವಸ್ಥೆಯನ್ನು ಮಾಡಿದೆ. ರೈತರು ಸ್ವತಃ ಅವರೆ ಮೊಬೈಲ್ ನಲ್ಲಿ ಜಮೀನಿನ ಪೋಡಿ ನಕ್ಷೆ ತಯಾರಿಸಿಕೊಳ್ಳಬಹುದು. ಸಹೋದರರು, ಸಂಬಂಧಿಕರು ಮನೆಯಲ್ಲಿಯೇ ಕುಳಿತು ತಮ್ಮ ಜಮೀನಿನ ಭಾಗ ಮಾಡಿಕೊಳ್ಳಲು ಇದು ಅವಕಾಶ ಕಲ್ಪಿಸಿದೆ.
ಈ ರೀತಿಯಾಗಿ ಮೊಬೈಲ್ ನಲ್ಲಿ ಪೋಡಿ ನಕ್ಷೆ ಪಡೆಯಬಹುದು
ಮೊದಲು ಅಧಿಕೃತ ವೆಬ್ ಸೈಟ್ https://bhoomojini.karnataka.gov.in/Service27 ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಭೂ ಕಂದಾಯ ಇಲಾಖೆಯ ಸ್ವಾವಲಂಬಿ ಆಯಪ್ ಪೇಜ್ ಓಪನ್ ಆಗುತ್ತದೆ. ರೈತರು ಮೊಬೈಲ್ ನಂಬರ್ ಹಾಕಿ ಕ್ಯಾಪ್ಚ್ಯಾ ಕೋಡ್ ನಮೂದಿಸಬೇಕು.
ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಹೊಸ ಅರ್ಜಿ ಮೇಲೆ ಕ್ಲಿಕ್ ಮಾಡಿ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಬೇಕು. ಆಧಾರ್ ಕಾರ್ಡ್ ನಲ್ಲಿರುವ ಹೆಸರನ್ನು ನಮೂದಿಸಿ ಮುಂದಿನ ಪ್ರಕ್ರಿಯೆ ಪೂರ್ಣಗೊಳಿಸಿದರೆ ಪೋಡಿ ನಕ್ಷೆ ಸಿಗುತ್ತದೆ.
ಇನ್ನು ಕಂದಾಯ ಇಲಾಖೆಯು ಕರ್ನಾಟಕದ ಜನರಿಗೆ ಪ್ರತಿ ಹಳ್ಳಿಯ ಕಂದಾಯ ನಕ್ಷೆಯನ್ನು ಆನ್ ಲೈನ್ ಮೂಲಕವೇ ಡೌನ್ ಲೋಡ್ ಮಾಡಿಕೊಳ್ಳೋದಕ್ಕೆ ಅವಕಾಶ ನೀಡಲಾಗಿದೆ. ಇದಕ್ಕಾಗಿ ನೀವು https://landrecords.karnataka.gov.in/service3/ ಗೆ ಭೇಟಿ ನೀಡಿ.
ಈ ಹಂತ ಅನುಸರಿಸಿ, ಕುಳಿತಲ್ಲೇ ಕಂದಾಯ ನಕ್ಷೆ ಡೌನ್ ಲೋಡ್ ಮಾಡಿ
https://landrecords.karnataka.gov.in/service3/ ಈ ಲಿಂಕ್ ಕ್ಲಿಕ್ ಮಾಡಿ, ಕಂದಾಯ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.
ಈ ಮೇಲ್ಕಂಡ ಲಿಂಕ್ ಕ್ಲಿಕ್ ಮಾಡಿದ ನಂತ್ರ ನಿಮಗೆ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ ಹಾಗೂ ಗ್ರಾಮದ ಆಯ್ಕೆಯನ್ನು ತೋರಿಸುತ್ತದೆ ಅದನ್ನು ಆಯ್ಕೆ ಮಾಡಿಕೊಳ್ಳಿ.
ಇದಾದ ಬಳಿಕ ನಿಮ್ಮ ಹೋಬಳಿಯ ಸಂಪೂರ್ಣ ಹಳ್ಳಿಗಳ ಕಂದಾಯ ನಕ್ಷೆಯನ್ನು ಪಿಡಿಎಫ್ ಪಾರ್ಮೆಟ್ ನಲ್ಲಿ ತೋರಿಸಲಿದೆ.
ನೀವು ನಿಮಗೆ ಬೇಕಾದ ಹಳ್ಳಿಯ ಕಂದಾಯ ನಕ್ಷೆಯನ್ನು ಪಕ್ಕದಲ್ಲಿ ಕಾಣುವಂತ ಪಿಡಿಎಫ್ ಮೇಲೆ ಕ್ಲಿಕ್ ಮಾಡಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.