ಬೆಂಗಳೂರು : ರಾಜ್ಯ ಸರ್ಕಾರವು ರೈತರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ರೈತರ ಕೃಷಿ ಪಂಪ್ ಸೆಟ್ ಗಳಿಗೆ ಹಗಲು ಹೊತ್ತಿನಲ್ಲಿ ಉಚಿತ ವಿದ್ಯುತ್ ನೀಡಲು ಸೋಲಾರ್ ಪಾರ್ಕ್ ಸ್ಥಾಪಿಸಲಾಗುತ್ತಿದೆ.
ರಾಜ್ಯದ ರೈತರ ಕೃಷಿ ಮತ್ತು ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕೊರತೆ ನೀಗಿಸುವ ನಿಟ್ಟಿನಲ್ಲಿ ಕುಸುಮ ಯೋಜನೆ ರೈತರಿಗೆ ವರದಾನವಾಗಲಿದೆ. ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಕುಸುಮ್ ಬಿ ಮತ್ತು ಸಿ. ಯೋಜನೆಗೆ ರಾಜ್ಯದಲ್ಲಿ ಈಗಾಗಲೇ ಚಾಲನೆ ನೀಡಲಾಗಿದ್ದು, ಈ ಯೋಜನೆಯಿಂದಾಗಿ ರೈತರಿಗೆ ತಮ್ಮ ಕೃಷಿ ಮತ್ತು ನೀರಾವರಿ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲಿ 7 ಗಂಟೆಗಳ ಕಾಲ ನಿರಂತರ ಗುಣಮಟ್ಟದ ವಿದ್ಯುತ್ ಉಚಿತವಾಗಿ ದೊರೆಯಲಿದೆ.
ಈ ಯೋಜನೆಯಿಂದ ರೈತರಿಗೆ ರಾತ್ರಿಯ ಜೊತೆಗೆ ಹಗಲಿನಲ್ಲಿಯೂ ಉತ್ತಮ ವಿದ್ಯುತ್ ದೊರೆಯಲಿದ್ದು, ಇನ್ನು ಮುಂದೆ ನಿದ್ದೆಗೆಟ್ಟು ನೀರಿಗಾಗಿ ಪರಿತಪಿಸುವುದು ತಪ್ಪಲಿದೆ. ಇದರ ಜೊತೆಗೆ ಹಗಲಿನಲ್ಲಿ ವಿದ್ಯುತ್ ಬೇಡಿಕೆಯ ಒತ್ತಡ ಕಡಿಮೆಯಾಗಿ, ಸಾರ್ವಜನಿಕ ಉದ್ದಿಮೆ ಹಾಗೂ ಸಣ್ಣಪುಟ್ಟ ಕೈಗಾರಿಕೆಗಳಿಗೆ. ನಗರ ಮತ್ತು ಗ್ರಾಮೀಣ ಮನೆಗಳಿಗೆ ಹಗಲು ಹೊತ್ತಿನಲ್ಲಿ ಗುಣಮಟ್ಟದ ವಿದ್ಯುತ್ ಲಭ್ಯವಾಗಲಿದೆ. ರಾತ್ರಿ ವೇಳೆಯ ವಿದ್ಯುತ್ ಬೇಡಿಕೆಗೂ ಒತ್ತಡ ತಗ್ಗಲಿದ್ದು, ಯಥಾ ರೀತಿ. ರಾತ್ರಿ ವೇಳೆಗೆ ನಿಗದಿಪಡಿಸಿದ ವಿದ್ಯುತ್ ಕೂಡ ವಿದ್ಯುತ್ ಫೀಡರ್‌ನಿಂದ ರೈತರಿಗೆ ಪೂರೈಕೆಯಾಗಲಿದೆ.
ಏನಿದು ಕುಸುಮ್ ಯೋಜನೆ?
ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಉಪಕೇಂದ್ರಗಳು ಇರುವ ಸ್ಥಳಗಳ ಹತ್ತಿರ ಒಂದು ಮೆಗಾ ವ್ಯಾಟ್ ಉತ್ಪಾದನೆಗೆ ಕನಿಷ್ಟ ಸುಮಾರು 4 ಎಕರೆಯಂತೆ ಮೆಗಾ ವ್ಯಾಟ್ ಸಾಮರ್ಥ್ಯಕ್ಕೆ ಅನುಗುಣವಾಗಿ ಜಮೀನನ್ನು ಗುರುತಿಸಿ ಅದರಲ್ಲಿ ವಿದ್ಯುತ್ ಉಪಕೇಂದ್ರದ ಸಾಮರ್ಥ್ಯಕ್ಕೆ ಅನುಗುಣವಾಗಿ ಸೋಲಾರ್ ಪಾರ್ಕ್‌ಗಳನ್ನು ಸ್ಥಾಪನೆ ಮಾಡಲಾಗುವುದು. ಹೀಗೆ ಈ ಸೋಲಾರ್ ಪಾರ್ಕ್‌ಗಳಿಂದ ವಿದ್ಯುತ್ ಉತ್ಪಾದನೆ ಮಾಡಿ ಅಲ್ಲಿಯೇ ಪೂರೈಕೆ ಮಾಡಿಕೊಡಲಾಗುವುದು. ಯೋಜನೆಯಡಿ ಖಾಸಗಿಯವರು ಬಂಡವಾಳ ಹೂಡಿಕೆ ಮಾಡುತ್ತಾರೆ. ಸರ್ಕಾರದಿಂದ ಲಭ್ಯವಿರುವೆಡೆ ಸರ್ಕಾರಿ ಭೂಮಿ ನೀಡಲಾಗುವುದು, ಅಲ್ಲದೆ ಸೋಲಾರ್ ಘಟಕಗಳಲ್ಲಿ ಉತ್ಪಾದಿಸುವ ವಿದ್ಯುತ್ ಅನ್ನು ಸರ್ಕಾರವೇ ಗರಿಷ್ಠ 3.17 ರೂ. ನಂತೆ ಖರೀದಿ ಮಾಡುತ್ತದೆ.
ಸರ್ಕಾರಿ ಜಮೀನಿನಲ್ಲಿ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಪ್ರತಿ ಎಕರೆಗೆ ರೂ.25 ಸಾವಿರ ಹಣವನ್ನು ಖಾಸಗಿ ಏಜೆನ್ಸಿಯವರು ಪ್ರತಿ ವರ್ಷ ಪಾವತಿಸಬೇಕು. ಈ ಹಣವನ್ನು ಜಿಲ್ಲಾಧಿಕಾರಿಗಳ ಬಳಿ ಡಿಪಾಸಿಟ್ ಮಾಡಲಾಗುವುದು. ಆಯಾ ಕ್ಷೇತ್ರದ ಸ್ಥಳೀಯ ಶಾಸಕರು. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಆಯಾ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆ, ಅಂಗನವಾಡಿ, ಆಸ್ಪತ್ರೆ ಅಭಿವೃದ್ಧಿಗೆ ಅನುದಾನ ಬಳಕೆ ಮಾಡಬಹುದಾಗಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ 9 ಸೋಲಾರ್ ಪಾರ್ಕ್:
ಕುಸುಮ್ ಯೋಜನೆಯಡಿ ಬಯಲು ಸೀಮೆಯಾದ ಚಿತ್ರದುರ್ಗ ಜಿಲ್ಲೆಯಲ್ಲಿ 9 ಕಡೆಗಳಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡಿ ಸುಮಾರು 60 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಯೋಜಿಸಲಾಗಿದ್ದು, ಈಗಾಗಲೆ ಹೊಸದುರ್ಗ ತಾಲ್ಲೂಕು ನೀರಗುಂದ ಗ್ರಾಮ ಬಳಿ ಕುಸುಮ್-ಸಿ ಯೋಜನೆಯಡಿ 3.1 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗಾಗಿ 12 ಎಕರೆ ಸರ್ಕಾರಿ ಭೂಮಿಯಲ್ಲಿ ಸೋಲಾರ್ ಪಾರ್ಕ್ ಸ್ಥಾಪನೆಗೊಂಡು. ಮಾರಬಗಟ್ಟ, ಸಾಣೆಹಳ್ಳಿ, ಹೊಸದುರ್ಗ ಭಾಗದವರೆಗಿನ ಸುಮಾರು 2 ಸಾವಿರಕ್ಕೂ ಹೆಚ್ಚಿನ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ನಿತ್ಯ ಹಗಲು ಹೊತ್ತಿನಲ್ಲಿ ಅಂದಾಜು 7 ಗಂಟೆಗಳ ಕಾಲ ಗುಣಮಟ್ಟದ ಉಚಿತ ವಿದ್ಯುತ್ ದೊರೆಯುತ್ತಿದ್ದು, ರೈತರು ಸಂತಸಗೊಂಡಿದ್ದಾರೆ.
ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಕಂಚೀಪುರ ಗ್ರಾಮದಲ್ಲಿ 5.4 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ 27 ಎಕರೆ ಸರ್ಕಾರಿ ಭೂಮಿ ಗುರುತಿಸಿ ಏಜೆನ್ಸಿ ಅವರಿಗೆ ನೀಡಲಾಗಿದ್ದು, ಕೆಲವೇ ತಿಂಗಳಿನಲ್ಲಿ ಇಲ್ಲಿ ವಿದ್ಯುತ್ ಉತ್ಪಾದನೆ ಪ್ರಾರಂಭವಾಗಲಿದೆ. ಹೊಸದುರ್ಗ ಪಟ್ಟಣಕ್ಕೆ ಸಮೀಪ 6.5 ಮೆ.ವ್ಯಾ ವಿದ್ಯುತ್ ಉತ್ಪಾದನಾ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು, ಭೂಮಿ ಗುರುತಿಸುವ ಕಾರ್ಯ ನಡೆದಿದೆ. ಎರಡನೆ ಹಂತದಲ್ಲಿ ಇದೇ ತಾಲ್ಲೂಕಿನ ಗರಗ ಗ್ರಾಮ ಬಳಿ 7.5 ಮೆ.ವ್ಯಾ. ವಿದ್ಯುತ್ ಉತ್ಪಾದನೆಗೆ 38 ಎಕರೆ ಭೂಮಿಯ ಅಗತ್ಯವಿದ್ದು, ಇಲ್ಲೂ ಕೂಡ ಜಮೀನು ಗುರುತಿಸಲು ಕ್ರಮ ಕೈಗೊಳ್ಳಲಾಗಿದೆ.
ಹೊಳಲ್ಕೆರೆ ತಾಲ್ಲೂಕಿನ ಚಿತ್ರಹಳ್ಳಿ ಗ್ರಾಮ ಬಳಿ 11 ಮೆ.ವ್ಯಾ. ವಿದ್ಯುತ್ ಉತ್ಪಾದನೆಗೆ ಯೋಜಿಸಿದ್ದು, ಭೂಮಿ ಗುರುತಿಸಿಲ್ಲ, ಗುಂಡೇರಿ ಗ್ರಾಮ ಬಳಿ 13 ಮೆ.ವ್ಯಾ. ವಿದ್ಯುತ್ ಉತ್ಪಾದನೆಗೆ 60 ಎಕರೆ ಭೂಮಿಯನ್ನು ಈಗಾಗಲೆ ಏಜೆನ್ಸಿಗೆ నిండి, నూలారా బార్ో సమాFణ రాయF ಪ್ರಾರಂಭವಾಗಿದೆ. ಚಿತ್ರದುರ್ಗ ತಾಲ್ಲೂಕು ಮಾಡನಾಯಕನಹಳ್ಳಿ ಗ್ರಾಮ ಬಳಿ 6.6 ಮೆ.ವ್ಯಾ. ಉತ್ಪಾದನೆಗಾಗಿ 33 ಎಕರೆ ಸರ್ಕಾರಿ ಭೂಮಿ ಗುರುತಿಸಿ ನೀಡಲಾಗಿದ್ದು, ಇಲ್ಲೂ ಕೂಡ ಸೋಲಾರ್ ಪಾರ್ಕ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.