ಬೆಂಗಳೂರು: ಕಂದಾಯ ಇಲಾಖೆಯ ಸೇವೆಯಾಗಿರುವಂತ ಪಹಣಿಯಲ್ಲಿ ರಾಜ್ಯದ ರೈತರ ಬ್ಯಾಂಕ್ ಸಾಲ, ತೀರುವಳಿ ಸೇರಿದಂತೆ ವಿವಿಧ ಮಾಹಿತಿಗಳು ದಾಖಲಾಗೋದಕ್ಕೆ ಗ್ರಾಮಾಧಿಕಾರಿಗಳು ದೃಢೀಕರಣದ ನಂತ್ರ ದಾಖಲಾಗುತ್ತಿದ್ದವು. ಆದ್ರೇ ಇದಕ್ಕೆ ತಿಲಾಂಜನಿ ನೀಡಲಾಗಿದೆ. ಇನ್ಮುಂದೆ ಪಹಣಿಯಲ್ಲಿ ಈ ಎಲ್ಲಾ ವಿವರಗಳು ಸ್ವಯಂಚಾಲಿತವಾಗಿ ದಾಖಲಾಗಲಿದ್ದಾವೆ.
ಈ ಕುರಿತಂತೆ ಮಾಹಿತಿ ನೀಡಿದಂತ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು, ಬ್ಯಾಂಕ್‌ಗಳಲ್ಲಿ ಸಾಲ ಪಡೆದರೆ, ಸಾಲ ತೀರುವಳಿಯಾದರೆ, ವಿಭಾಗ ಮಾಡಕೊಂಡರೆ, ಆಸ್ತಿಯನ್ನು ಅಡಮಾನ ಇಟ್ಟರೆ, ಎಸಿ ನ್ಯಾಯಾಲಯದ ಆದೇಶಗಳಾಗಿದ್ದರೆ ಹೀಗೆ ಸಣ್ಣಪುಟ್ಟ ಬದಲಾವಣೆಗಳು ಆದಾಗ ಅದರ ವಿವರವನ್ನು ಪಹಣಿಯಲ್ಲಿ ದಾಖಲಿಸುವುದನ್ನು ಸ್ವಯಂಚಾಲಿತ ಮಾಡಲಾಗಿದೆ. ಇದಕ್ಕಾಗಿ ಗ್ರಾಮಾಧಿಕಾರಿಗಳು ಧೃಢೀಕರಣ (ಥಂಬ್ ಕೊಡುವುದು) ಮಾಡುವುದು ಅಗತ್ಯವಿಲ್ಲ ಎಂದು ಹೇಳಿದರು.
ಆಯಾ ಪಹಣಿ ಮೇಲೆ ಬ್ಯಾಂಕ್‌ಗಳು, ನ್ಯಾಯಾಲಯಗಳು ಹೀಗೆ ವಿವಿಧ ಮೂಲಗಳಿಂದ ನೀಡುವ ಮಾಹಿತಿಯನ್ನು ನೇರವಾಗಿ ಪಡೆದು ಅದನ್ನು ಪಹಣಿಯಲ್ಲಿ ದಾಖಲಿಸಲಾಗುತ್ತದೆ. ಇದಕ್ಕಾಗಿ ರೈತರು ಸರ್ಕಾರಿ ಕಚೇರಿಗಳಿಗೆ ಹತ್ತಾರು ಬಾರಿ ಅಲೆದಾಡುವ ಅಗತ್ಯವನ್ನು ತಪ್ಪಿಸಲಾಗುತ್ತಿದೆ. ಇದರಿಂದ ರೈತರ ಸಮಯ, ಅಧಿಕಾರಿಗಳ ಸಮಯ ಪೋಲಾಗುವುದು ಮತ್ತು ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿದಂತಾಗುತ್ತದೆ ಎಂದು ಹೇಳಿದರು.
ಈಗಾಗಲೇ 14,21,116 ಪಹಣಿಗಳಲ್ಲಿ ಈ ರೀತಿ ಸ್ವಯಂಚಾಲಿತ ದಾಖಲೀಕರಣ ಮಾಡಲಾಗಿದೆ. ಇದರಲ್ಲಿ ಶೇ.72ರಷ್ಟು ಸ್ವಯಂ ಚಾಲಿತ ಮಾಡಿದರೆ, ಉಳಿದ ಶೇ.28ರಷ್ಟು ಪ್ರಕರಣಗಳ ಪಹಣಿಗಳನ್ನು ಹಳೆಯ ವ್ಯವಸ್ಥೆಯಲ್ಲಿ ಉಳಿಸಿಕೊಳ್ಳಲಾಗಿದೆ. ಕಾರಣ ಹಕ್ಕು ಬದಲಾವಣೆ, ಇಂಡೀಕರಣ, ಸಿವಿಲ್ ನ್ಯಾಯಾಲಯಗಳಲ್ಲಿ ವ್ಯಾಜ್ಯ ಇರುವಂತಹ ಪ್ರಕರಣಗಳಲ್ಲಿ 15 ದಿನಗಳ ಕಾಲ ಆಕ್ಷೇಪಣೆಗೆ ಕಾಲಾವಕಾಶ ಒದಗಿಸಿ ಆ ಬಳಿಕ ದಾಖಲೀಕರಣ ಮಾಡಬೇಕಾಗಿರುತ್ತದೆ. ಆದ್ದರಿಂದ ಇದರಲ್ಲಿ ಹಳೆಯ ವ್ಯವಸ್ಥೆ ಇಟ್ಟುಕೊಂಡು, ಮುಂದೆ ಎಲ್ಲಾ ಪಹಣಿಗಳಿಗೆ ಆಧಾರ್ ಜೋಡಣೆ ಪೂರ್ಣಗೊಂಡ ಬಳಿಕ ಇವುಗಳನ್ನು ಸಹ ಆಟೋಮ್ಯೂಟೇಷನ್ ವ್ಯಾಪ್ತಿಗೆ ತರುವ ಪ್ರಯತ್ನ ಮಾಡಲಾಗುವುದು ಎಂದರು.
ಗಮನಿಸಿ: ಇನ್ಮುಂದೆ ‘ಭಾನುವಾರ’ವೂ ರಾಜ್ಯದ ‘ಮಹಾನಗರ ಪಾಲಿಕೆ’ ವ್ಯಾಪ್ತಿಯಲ್ಲಿ ‘ಸಬ್ ರಿಜಿಸ್ಟರ್ ಕಚೇರಿ’ ಓಪನ್
‘ನಮ್ಮ ಮೆಟ್ರೋ’ದಲ್ಲಿ ಬೆಚ್ಚಿ ಬೀಳಿಸೋ ಘಟನೆ: ‘ಅಪರಿಚಿತ ವ್ಯಕ್ತಿ’ ಓಡಾಟ, ಕೆಲಕಾಲ ‘ಸಂಚಾರ ಸ್ಥಗಿತ’