ಬೆಂಗಳೂರು: ಕೃಷಿ ಇಲಾಖೆಯು ಮಳೆ ನೀರನ್ನು ಸಂಗ್ರಹಿಸಿ ಕೃಷಿಯಲ್ಲಿ ಸದ್ಬಳಕೆ ಮಾಡಲು ರೈತರನ್ನು ಉತ್ತೇಜಿಸುವ ಸಲುವಾಗಿ ಕರ್ನಾಟಕ ಸರ್ಕಾರವು ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯಡಿ ವಿವಿದ ಸೌಲಭ್ಯಗಳನ್ನು ಪಡೆದುಕೊಳ್ಳಲು ರೈತರಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಕೃಷಿ ಇಲಾಖೆಯಿಂದ 2024-25 ನೆ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆಯಡಿ ಕ್ಷೇತ್ರ ಬದು ನಿರ್ಮಾಣ, ಕೃಷಿ ಹೊಂಡ, ಪಾಲಿಥೀನ್ ಹೊದಿಕೆ, ಡೀಸೆಲ್, ಪೆಟ್ರೋಲ್ ಪಂಪ್‍ಸೆಟ್ (ಗರಿಷ್ಠ 10 ಎಚ್‍ಪಿ), ಲಘು ನೀರಾವರಿ ಹಾಗೂ ತಂತಿ ಬೇಲಿ ಘಟಕಗಳನ್ನು ಅಳವಡಿಸಿಕೊಳ್ಳಲು ಇಚ್ಛಿಸುವ ಅರ್ಹ ರೈತರು ಸೆಪ್ಟೆಂಬರ್ 25, 2024 ರೊಳಗಾಗಿ ರೈತ ಸಂಪರ್ಕ ಕೇಂದ್ರಕ್ಕೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆ ಹೇಗೆ?
ಆಸಕ್ತ ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿಯನ್ನು ಪಡೆದುಕೊಂಡು, ಭರ್ತಿ ಮಾಡಿದ ಅರ್ಜಿಯೊಂದಿಗೆ ಪಾಸ್ ಪೋರ್ಟ್ ಸೈಜ್ ಪೋಟೊ, ಪಹಣಿ, ಜಾತಿ ಪ್ರಮಾಣ ಪತ್ರ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ ಸೇರಿದಂತೆ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಬೇಕಿದೆ.
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಲು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.