ಚಿತ್ರದುರ್ಗ : ರೈತರ ಕೃಷಿ ಪಂಪ್‍ಸೆಟ್‍ಗಳಿಗೆ ನಿತ್ಯವೂ 7 ಗಂಟೆಗಳ ಸಮರ್ಪಕವಾಗಿ ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡಬೇಕು. ಇದರಲ್ಲಿ ಯಾವುದೇ ರಾಜಿ ಇಲ್ಲ, ಇದಕ್ಕೆ ಬೇಕಾದ ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಎಂದು ಇಂಧನ ಸಚಿವರಾದ ಕೆ.ಜೆ.ಜಾರ್ಜ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಇಂಧನ ಇಲಾಖೆ ವಿಷಯಗಳ ಕುರಿತು ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಪ್ರಸ್ತುತ ಯಾವುದೇ ಲೋಡ್ ಶೆಡ್ಡಿಂಗ್ ಇರುವುದಿಲ್ಲ. ರಾಜ್ಯದಲ್ಲಿ 19500 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇದ್ದು, ಇದಕ್ಕಾಗಿ ಸಬ್ ಸ್ಟೇಷನ್‍ಗಳು ಹಾಗೂ ಟ್ರಾನ್ಸ್‍ಮಿಷನ್ ಕೇಂದ್ರಗಳು ಸಮರ್ಪಕವಾಗಿರಬೇಕು. ಚಿತ್ರದುರ್ಗ ಜಿಲ್ಲೆಗೆ 100 ಸಬ್ ಸ್ಟೇಷನ್‍ಗಳನ್ನು ಕೊಡಲಾಗುತ್ತಿದ್ದು, ಈ ವರ್ಷ 50 ಸಬ್ ಸ್ಟೇಷನ್‍ಗಳು ಪೂರ್ಣಗೊಳ್ಳಲಿದ್ದು, ಮುಂದಿನ ವರ್ಷ ಬಾಕಿ 50 ಸಬ್ ಸ್ಟೇಷನ್‍ಗಳು ಕಾರ್ಯಾರಂಭ ಮಾಡಲಿವೆ. ಪ್ರಸ್ತುತ ರೈತರಿಗೆ 7 ಗಂಟೆಗಳ ವಿದ್ಯುತ್ ಪೂರೈಕೆ ಮಾಡುವಂತೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಆದೇಶ ಮಾಡಿದ್ದಾರೆ. ಹಾಗಾಗಿ ರೈತರ ಕೃಷಿ ಪಂಪ್‍ಸೆಟ್‍ಗಳಿಗೆ ಹಗಲು ಹೊತ್ತಿನಲ್ಲಿ 4 ಗಂಟೆ ಹಾಗೂ ರಾತ್ರಿ ಸಮಯದಲ್ಲಿ 3 ಗಂಟೆ ವಿದ್ಯುತ್ ಪೂರೈಕೆ ಮಾಡಲೇಬೇಕು. ಸಬ್‍ಸ್ಟೇಷನ್‍ಗಳ ಸಮಸ್ಯೆ ಇದ್ದರೆ ಆಯಾ ಶಾಸಕರ ಗಮನಕ್ಕೆ ತಂದು ಸಬ್‍ಸ್ಟೇಷನ್‍ಗಳ ಸಮಸ್ಯೆ ಬಗೆಹರಿಸಿಕೊಂಡು, ಅವಶ್ಯಕತೆ ಇದ್ದರೆ ಹೊಸ ಸಬ್‍ಸ್ಟೇಷನ್‍ಗಳಿಗೆ ಪ್ರಸ್ತಾವ ಸಲ್ಲಿಸಿ, ವಿದ್ಯುತ್ ಪೂರೈಕೆಗೆ ಕ್ರಮವಹಿಸಬೇಕು ಎಂದರು.
ಕೆಪಿಟಿಸಿಎಲ್‍ನ ಸಬ್‍ಸ್ಟೇಷನ್ ಇರುವ ಕಡೆ ಬೆಸ್ಕಾಂನವರು ಲಿಂಕ್‍ಲೈನ್ ವ್ಯವಸ್ಥೆಯನ್ನು ತಕ್ಷಣ ಮಾಡಬೇಕು ಎಂದು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ತಿಳಿಸಿದರು.
ಇ-ಆಫೀಸ್ ಅನುಷ್ಠಾನ ಮಾಡಿ: ರೈತರು ಹಾಗೂ ಸಾರ್ವಜನಿಕರ ದೂರುಗಳಿಗೆ ತ್ವರಿತವಾಗಿ ಸ್ಪಂದಿಸುವುದು ಹಾಗೂ ಕಚೇರಿಗಳಿಗೆ ಅಲೆದಾಟ ತಪ್ಪಿಸುವ ನಿಟ್ಟಿನಲ್ಲಿ ಕಡ್ಡಾಯವಾಗಿ ಇ-ಆಫೀಸ್ ಅನುಷ್ಠಾನ ಮಾಡುವಂತೆ ಇಂಧನ ಸಚಿವ ಕೆ.ಜೆ. ಜಾರ್ಜ್ ಸೂಚನೆ ನೀಡಿದರು. ಕಚೇರಿಗಳಿಗೆ ಸಲ್ಲಿಕೆಯಾಗುವ ದೂರುಗಳಿಗೆ ತ್ವರಿತವಾಗಿ ಸ್ಪಂದಿಸುವ ಕೆಲಸವಾಗಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
3000 ಹೊಸ ಲೈನ್‍ಮೆನ್‍ಗಳ ನೇಮಕ :
ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್ ಅವರು ಮಾತನಾಡಿ, ಇಂಧನ ಇಲಾಖೆಯಲ್ಲಿ ಲೈನ್‍ಮೆನ್‍ಗಳು ಸೇರಿದಂತೆ ಕೆಳಹಂತದ ಅಧಿಕಾರಿ, ಸಿಬ್ಬಂದಿಗಳು ಬಹಳ ವರ್ಷಗಳಿಂದಲೂ ಒಂದೇ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದು, ಇದರಿಂದಾಗಿ ಹಿರಿಯ ಅಧಿಕಾರಿಗಳ ಮಾತಾಗಲಿ ಅಥವಾ ಜನಪ್ರತಿನಿಧಿಗಳ ಮಾತಿಗೆ ಬೆಲೆ ಕೊಡುತ್ತಿಲ್ಲ. ಹೀಗಾಗಿ ಅಂತಹ ಲೈನ್‍ಮೆನ್ ಹಾಗೂ ಸಿಬ್ಬಂದಿಯನ್ನು ಬೇರೆ ಸ್ಥಳಕ್ಕೆ ವರ್ಗಾವಣೆ ಮಾಡುವುದು ಸೂಕ್ತ. ವಿದ್ಯುತ್ ಪರಿವರ್ತಕಗಳು ಸುಟ್ಟುಹೋದ ಸಂದರ್ಭದಲ್ಲಿ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸುತ್ತಿಲ್ಲ, ವಿನಾಕಾರಣ ವಿಳಂಬ ಮಾಡುತ್ತಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು, ಶೀಘ್ರದಲ್ಲಿಯೇ 3000 ಲೈನ್‍ಮೆನ್‍ಗಳನ್ನು ಹೊಸದಾಗಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಈ ನೇಮಕ ಪ್ರಕ್ರಿಯೆ ಸಂದರ್ಭದಲ್ಲಿ, ಹಲವು ವರ್ಷಗಳಿಂದ ಒಂದೇ ಕಡೆ ಕೆಲಸ ಮಾಡುತ್ತಿರುವ ಲೈನ್‍ಮೆನ್‍ಗಳನ್ನು ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಇನ್ನು ವಿದ್ಯುತ್ ಪರಿವರ್ತಕಗಳ ಬದಲಾವಣೆ ಸಂಬಂಧಿಸಿದಂತೆ ಈಗಾಗಲೆ ಕೃಷಿ ಪಂಪ್‍ಸೆಟ್‍ಗಳ ಅಕ್ರಮ ಸಕ್ರಮ ಕಾರ್ಯ ಪ್ರಗತಿಯಲ್ಲಿದ್ದು, ಈ ಕಾರ್ಯ ಪೂರ್ಣಗೊಂಡ ಬಳಿಕ, ವಿದ್ಯುತ್ ಪೂರೈಕೆ ಸಾಮಥ್ರ್ಯ ಸಮರ್ಪಕಗೊಂಡು, ವಿದ್ಯುತ್ ಟ್ರಾನ್ಸ್‍ಫಾರ್ಮರ್‍ಗಳು ಸುಟ್ಟುಹೋಗುವುದು ನಿಯಂತ್ರಣಕ್ಕೆ ಬರಲಿದೆ ಎಂದರು.
ವರ್ಗಾವಣೆಯ ಎಚ್ಚರಿಕೆ :
ಚಿತ್ರಹಳ್ಳಿ, ಚಿಕ್ಕಜಾಜೂರು, ಸಾಸಲು ಗ್ರಾಮದಲ್ಲಿ ಕೆಪಿಟಿಸಿಎಲ್ ವತಿಯಿಂದ ಸಬ್‍ಸ್ಟೇಷನ್‍ಗಳ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಅಧಿಕಾರಿಗಳಿಂದ ತಪಾಸಣಾ ವರದಿ ನೀಡುವುದು ಬಾಕಿ ಇದೆ. ಕಾಮಗಾರಿ ಪೂರ್ಣಗೊಂಡಿದ್ದರೂ, ಚಿತ್ರದುರ್ಗ ವಿಭಾಗ ಬೆಸ್ಕಾಂ ಕಾರ್ಯಪಾಲಕ ಅಭಿಯಂತರರು ಕೆಪಿಟಿಸಿಎಲ್ ಅಧಿಕಾರಿಗಳೊಂದಿಗೆ ಸಮನ್ವಯ ಮಾಡದೆ, ನಿರ್ಲಕ್ಷ್ಯ ತೋರಿದ್ದಾರೆ. 07 ತಾಸು ವಿದ್ಯುತ್ ಪೂರೈಕೆಗೆ ವ್ಯವಸ್ಥ ಮಾಡಿಕೊಡಲು ಅವಕಾಶವಿದ್ದರೂ ಕ್ರಮಕ್ಕೆ ಮುಂದಾಗಿಲ್ಲ ಎಂದು ಸಚಿವರು ಈ ಸಂದರ್ಭದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಚಿತ್ರದುರ್ಗ ವಿಭಾಗದಲ್ಲಿ ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ಗೆ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳ ಮತ್ತು ಸಾರ್ವಜನಿಕರ ದೂರುಗಳಿಗೆ ಸ್ಪಂದಿಸುತ್ತಿಲ್ಲ, ದೂರವಾಣಿ ಕರೆಯನ್ನು ಕೂಡ ಸ್ವೀಕರಿಸುವುದಿಲ್ಲ, ಅಥವಾ ಮೊಬೈಲ್ ಸ್ವಿಚ್ ಆಫ್ ಮಾಡಿಬಿಡುತ್ತಾರೆ. ಇದರಿಂದ ಸಮಸ್ಯೆಗಳ ಪರಿಹಾರವಾಗದೆ ಸಾರ್ವಜನಿಕರು, ರೈತರು, ಜನಪ್ರತಿನಿಧಿಗಳು ಜಿಲ್ಲಾಧಿಕಾರಿಗಳಿಗೆ ದೂರು ನೀಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಅವರು ಇಂಧನ ಸಚಿವರ ಗಮನಕ್ಕೆ ತಂದರು. ಇದಕ್ಕೆ ದನಿಗೂಡಿಸಿದ ಸಚಿವರು, ನಮಗೂ ಈ ಬಗ್ಗೆ ದೂರುಗಳು ಕೇಳಿಬಂದಿವೆ. ಇಂತಹ ಅಧಿಕಾರಿಗಳ ಕಾರ್ಯ ವೈಖರಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ, ಕೂಡಲೆ ವರ್ಗಾವಣೆಗೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.