ದಾವಣಗೆರೆ : ಕೃಷಿ ಪಂಪ್ ಸೆಟ್ ಗಳಿಗೆ ದಿನದ 7 ತಾಸು ತ್ರಿ ಫೇಸ್ ಹಾಗೂ ಗೃಹ ಬಳಕೆ ಮತ್ತು ಕೈಗಾರಿಕೆಗಳಿಗೆ ದಿನದ 24 ಗಂಟೆ ವಿದ್ಯುತ್ ಪೂರೈಸುವುದು ಸರ್ಕಾರದ ನೀತಿಯಾಗಿದ್ದು, ಇದಕ್ಕೆ ಬದ್ದವಾಗಿ ವಿದ್ಯುತ್ ನೀಡಲಾಗುತ್ತಿದೆ ಎಂದು ಇಂಧನ ಸಚಿವರಾದ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗವಾರ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈ ವರ್ಷ ವಿದ್ಯುತ್ ಕೊರತೆ ಇಲ್ಲ. ಕೆಲವೊಂದು ತಾಂತ್ರಿಕ ಸಮಸ್ಯೆಯಿಂದ ಕೆಲವು ಪ್ರದೇಗಳಲ್ಲಿ ನಿರ್ವಹಣಾ ಕಾರ್ಯಗಳಿಗಾಗಿ ವಿದ್ಯುತ್ ಕಡಿತ ಮಾಡಲಾಗುತ್ತಿದೆಯೇ ಹೊರತು ಲೋಡ್ ಶೆಡ್ಡಿಂಗ್ ಇಲ್ಲ. ಸರ್ಕಾರದ ಬದ್ದತೆಯಂತೆ ಸಮರ್ಪಕ ವಿದ್ಯುತ್ ಪೂರೈಕೆಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ರಾಜ್ಯದಲ್ಲಿ ಪ್ರತಿನಿತ್ಯ 18,500 ಮೆಗಾವ್ಯಾಟ್ ಬೇಡಿಕೆ ಇದ್ದು, ಬೇಸಿಗೆ ಆರಂಭವಾಗಿರುವುದರಿಂದ ಸರಾಸರಿಗಿಂತ ಶೇ. 10 ರಷ್ಟು ವಿದ್ಯುತ್ ಬೇಡಿಕೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಪಂಜಾಬ್ ಮತ್ತು ಉತ್ತರ ಪ್ರದೇಶಗಳಿಂದ ವಿನಿಮಯ ಆಧಾರದಲ್ಲಿ ವಿದ್ಯುತ್ ಪಡೆಯಲಾಗುತ್ತಿದೆ. ರಾಜ್ಯಲ್ಲಿ ವಿದ್ಯುತ್ ಬೇಡಿಕೆ ಕುಸಿದಾಗ ಅಂದರೆ ಜೂನ್‍ನಿಂದ ಆ ರಾಜ್ಯಗಳಿಗೆ ವಿದ್ಯುತ್ ವಾಪಸ್ ನೀಡಾಗುತ್ತದೆ. ಅದಕ್ಕಾಗಿ ಅಲ್ಲಿಂದ ಗ್ರಿಡ್ ಮೂಲಕ ವಿದ್ಯುತ್ ಪಡೆಯಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಗುಣಮಟ್ಟದ ವೋಲ್ಟೇಜ್‍ಗಾಗಿ ಅಗತ್ಯವಿರುವ ಕಡೆ ವಿದ್ಯುತ್ ಉಪ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದ್ದು, ಅಗತ್ಯ ಇರುವ ಕಡೆ ಸ್ಥಾಪಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಕುಸುಮ್- ಸಿ ಅಡಿ 3,000 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಗುರಿ:
ಕುಸುಮ್- ಸಿ ಯೋಜನೆಯಡಿ ಮುಂದಿನ ಒಂದೂವರೆ ವರ್ಷದಲ್ಲಿ ಫೀಡರ್ ಸೋಲರೈಸೇಷನ್ ಮೂಲಕ 3,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿ ಹೊಂದಲಾಗಿದೆ. ಈಗಾಗಲೇ ಈ ಕಾಮಗಾರಿಗೆ ವಿವಿಧ ಸಂಸ್ಥೆಗಳಿಗೆ ಕಾರ್ಯಾದೇಶ ನೀಡಿದ್ದು, ಸೋಲಾರ್ ಪ್ಯಾನಲ್ ಅಳವಡಿಕೆ, ವಿದ್ಯುತ್ ಉತ್ಪಾದನೆ ಹಂತ, ಭೂಮಿ ಸಮತಟ್ಟು ಮಾಡುವ ಕೆಲಸ ಪ್ರಗತಿಯಲ್ಲಿದೆ. ಬರುವ ಏಪ್ರಿಲ್‍ನಲ್ಲಿ 300 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿ ಗ್ರಿಡ್‍ಗೆ ಕಳುಹಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
3000 ಪವರ್ ಮ್ಯಾನ್ ನೇಮಕ:
ಇಂಧನ ಇಲಾಖೆಯಿಂದ ಈಗಾಗಲೇ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಗುಣಮಟ್ಟವನ್ನು ಇನ್ನಷ್ಟು ಸುಧಾರಿಸಲು ಇಂಧನ ಇಲಾಖೆಗೆ ಅಗತ್ಯವಿರುವ 3000 ಪವರ್ ಮ್ಯಾನ್ (ಲೈನ್ ಮೆನ್) ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಯುತ್ತಿದ್ದು, 3 ಲಕ್ಷ ಅರ್ಜಿಗಳು ಸ್ವೀಕೃತವಾಗಿವೆ. ಈಗಾಗಲೇ ಅರ್ಜಿಗಳ ಪರಿಶೀಲನಾ ಹಂತ ಮುಗಿದಿದ್ದು 1:5 ರನ್ವಯ ದೈಹಿಕ ಪರೀಕ್ಷೆಗೆ ಆಯ್ಕೆ ಮಾಡಲಾಗುವುದು. ಬಳಿಕ ಪಾರದರ್ಶಕವಾಗಿ ಮೀಸಲು ಹಾಗೂ ಅಂಕಗಳ ಆಧಾರದ ಮೇಲೆ ಏಪ್ರಿಲ್ ಒಳಗಾಗಿ ನೇಮಕ ನಡೆಯಲಿದೆ. ಆದರೆ, ಆಕಾಂಕ್ಷಿಗಳು ಯಾವುದೇ ಮಧ್ಯವರ್ತಿಗಳ ಬಳಿ ಹಣಕೊಟ್ಟು ಕಳೆದುಕೊಳ್ಳಬೇಡಿ. ಯಾರಾದರೂ ಆಮಿಷವೊಡ್ಡಿದಲ್ಲಿ ಇಲಾಖೆ ಗಮನಕ್ಕೆ ತರಬೇಕು ಎಂದು ತಿಳಿಸಿದರು.
ಗೃಹಜ್ಯೋತಿ;
ದಾವಣಗೆರೆ ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿ 4,33,897 ಆರ್.ಆರ್.ಸಂಖ್ಯೆಗಳು ನೋದಣಿಯಾಗಿದ್ದು, ವಿದ್ಯುತ್ ಸಂಪರ್ಕ ಪಡೆದ ಸ್ಥಾವರಗಳಲ್ಲಿ ಶೇ 88.93 ರಷ್ಟು ಈ ಯೋಜನೆಯಡಿ ಇದೆ. ಈ ಸ್ಥಾವರಗಳಿಗೆ 2023 ರ ಆಗಸ್ಟ್ ನಿಂದ 2024 ರ ಡಿಸೆಂಬರ್ ಅಂತ್ಯದವರೆಗೆ 309 ಕೋಟಿ ರೂ. ಮೊತ್ತದ ವಿದ್ಯುತ್ತನ್ನು ಗ್ರಾಹಕರಿಗೆ ಉಚಿತವಾಗಿ ನೀಡಲಾಗಿದೆ ಎಂದು ಹೇಳಿದರು
ದಾವಣಗೆರೆ ಜಿಲ್ಲೆ ಆನಗೋಡು, ಮಾಯಕೊಂಡ ಭಾಗದಲ್ಲಿ 3 ಅಥವಾ 4 ಗಂಟೆಗಳ ಕಾಲ ಮಾತ್ರ ಕೃಷಿ ಪಂಪ್‍ಸೆಟ್‍ಗಳಿಗೆ ವಿದ್ಯುತ್ ನೀಡಲಾಗುತ್ತದೆ ಎಂದು ಶಾಸಕರಾದ ಕೆ.ಎಸ್.ಬಸವಂತಪ್ಪ ಪ್ರಸ್ತಾಪಿಸಿದಾಗ, ಎಲ್ಲಾ ರೈತರಿಗೂ ದಿನದಲ್ಲಿ 7 ಗಂಟೆಗಳ ಕಾಲ ವಿದ್ಯುತ್ ನೀಡುವುದು ಸರ್ಕಾರದ ನೀತಿಯಾಗಿದ್ದು, ಅದರಂತೆ ಬೆಸ್ಕಾಂ ಕ್ರಮ ಕೈಗೊಳ್ಳಬೇಕು. ಓವರ್ ಲೋಡಿಂಗ್ ಆದರೆ ಅದನ್ನು ಬೇರೆಡೆ ವರ್ಗಾಯಿಸಿ 7 ಗಂಟೆ ಕೃಷಿ ಪಂಪ್‍ಸೆಟ್‍ಗೆ ವಿದ್ಯುತ್ ನೀಡಲೇಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಂಪ್‍ಸೆಟ್‍ಗಳಿಗೆ ಶೀಘ್ರ ಸಂಪರ್ಕಕ್ಕೆ ಕ್ರಮ:
ರೈತರ ಕೃಷಿ ಪಂಪ್‍ಸೆಟ್‍ಗಳಿಗೆ 2004 ರಿಂದಲೂ ಅಕ್ರಮ-ಸಕ್ರಮ ಎಂಬ ಕಾರ್ಯಕ್ರಮದಡಿ ಅನಧಿಕೃತ ಸಂಪರ್ಕವನ್ನು ಸಕ್ರಮ ಮಾಡುತ್ತಾ ಬರಲಾಗಿದೆ. ಇದರಡಿ ಮೂಲಭೂತ ಸೌಕರ್ಯದಡಿ ಮಾರ್ಗ, ಟಿಸಿ ಅಳವಡಿಕೆ ಮಾಡಲಾಗಿದೆ. ಜಿಲ್ಲೆಯಲ್ಲಿ ಬಾಕಿ ಇರುವ 4,946 ಪಂಪ್‍ಸೆಟ್‍ಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಟೆಂಡರ್ ಕರೆಯಲಾಗಿದೆ. ರೈತರು ಸ್ವಂತ ಮೂಲಭೂತ ಸೌಕರ್ಯ ಮಾಡಿಕೊಂಡು ಕೃಷಿ ಪಂಪ್‍ಸೆಟ್‍ಗಳಿಗೆ ತಕ್ಷಣವೇ ಸಂಪರ್ಕ ಪಡೆಯಲು ಹಾಗೂ ಇಲಾಖೆಯಿಂದ ಮೂಲಭೂತ ಸೌಕರ್ಯಕ್ಕಾಗಿ ಸರತಿಯಲ್ಲಿ ಕಾಯುವ ಎರಡು ಅವಕಾಶಗಳನ್ನು ಮಾಡಿಕೊಟ್ಟಲ್ಲಿ ಸ್ವಂತವಾಗಿ ಮಾಡಿಕೊಳ್ಳುವ ರೈತರಿಗೆ ಅನುಕೂಲವಾಗುತ್ತದೆ ಎಂಬ ಚಿಂತನೆ ಮಾಡಲಾಗಿದೆ ಎಂದರು.
ಸಭೆಯಲ್ಲಿ ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್.ಶಿವಶಂಕರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸುರೇಶ್ ಇಟ್ನಾಳ್ ಮತ್ತಿತರರು ಇದ್ದರು.
BREAKING: ಫೆ.20ರವರೆಗೆ ಮೈಸೂರಿಗೆ ತೆರಳಲು ‘ನಟ ದರ್ಶನ್’ಗೆ ಕೋರ್ಟ್ ಅನುಮತಿ | Actor Darshan
BIG NEWS: 9 ಪುಟಗಳ ಪ್ರತ್ಯುತ್ತರದೊಂದಿಗೆ ಬಿ.ವೈ ವಿಜಯೇಂದ್ರ ವಿರುದ್ಧವೇ ದೂರು ನೀಡಿದ ‘ಶಾಸಕ ಯತ್ನಾಳ್’