2024-25ನೇ ಸಾಲಿನ ಬೇಸಿಗೆ ಹಂಗಾಮಿನಲ್ಲಿ ಬೆಳೆವಿಮೆ ಯೋಜನೆಯಡಿ ಹೆಚ್ಚಿನ ಮಳೆ ಅಥವಾ ಗಾಳಿಯಿಂದ ಉಂಟಾಗಿರುವ ಬೆಳೆ ಹಾನಿಯ ಬಗ್ಗೆ ಇನ್ಸೂರೆನ್ಸ್ ಕಂಪನಿ, ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಮಾಹಿತಿ ನೀಡುವಂತೆ ಕೊಪ್ಪಳ ಜಂಟಿಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಅವರು ತಿಳಿಸಿದ್ದಾರೆ.
ಏ. 10 ರಂದು ಕೊಪ್ಪಳ ಜಿಲ್ಲೆಯ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಉದಾಹರಣೆಗೆ, ಕೊಪ್ಪಳ ತಾಲ್ಲೂಕಿನ ಬೆಣಕಲ್, ಭಾನಾಪುರ ಮತ್ತು ಹಲಗೇರಿ ಗ್ರಾಮಗಳಲ್ಲಿ 65 ರಿಂದ 75 ಮಿ.ಮೀ. ಮಳೆಯಾಗಿದ್ದು, ಗಂಗಾವತಿ ಹಾಗೂ ಕಾರಟಗಿ ತಾಲ್ಲೂಕಿನ ಹಣವಾಳ, ಬೇವಿನಾಳ, ಚಿಕ್ಕಡಣಕನಕಲ್ ಮತ್ತು ಹುಲಿಕಲ್ ಗ್ರಾಮಗಳಲ್ಲೂ ಸಹ 35 ರಿಂದ 50 ಮಿ.ಮೀ. ಮಳೆಯಾಗಿದೆ.
ಈ ರೀತಿಯ ಮಳೆಯಿಂದಾಗಿ ರೈತರ ಜಮೀನಿನಲ್ಲಿರುವ ಬೇಸಿಗೆ ಬೆಳೆ ನಷ್ಟವಾಗಿದ್ದರೆ, ಬೆಳೆವಿಮೆಗೆ ನೋಂದಾಯಿಸಿಕೊಂಡಿರುವ ರೈತರು ವಿಮೆಗೆ ನೋಂದಾಯಿಸಿದ ಬೆಳೆಗಳ ವಿವರ, ಹಾನಿಯ ಪ್ರಮಾಣ ಮತ್ತು ಹಾನಿಗೆ ಕಾರಣವಾದ ಪರಿಸ್ಥಿತಿಯನ್ನು ಘಟನೆ ಸಂಭವಿಸಿದ 72 ಗಂಟೆಗಳ ಒಳಗೆ ಟಾಟಾ ಎಐಜಿ ಇನ್ಸೂರೆನ್ಸ್ ಕಂಪನಿಯ ಟೋಲ್ ಫ್ರೀ ಸಂಖ್ಯೆ 1800-209-3536 & 9148442314 ಕ್ಕೆ ಸಂಪರ್ಕಿಸಬಹುದು ಅಥವಾ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಕೊಪ್ಪಳ ಜಿಲ್ಲಾ ಕೃಷಿ ಇಲಾಖೆಯ ಪ್ರಕಟಣೆ ತಿಳಿಸಿದೆ.