ಬೆಂಗಳೂರು : ಜಮೀನುಗಳ ಪಹಣಿಗಳನ್ನು ವಾರಸುದಾರರಿಗೆ ಖಾತೆ ಮಾಡಲು ಪ್ರಸಕ್ತ ಸಾಲಿನಲ್ಲಿ ಇ-ಪೌತಿ ಆಂಧೋಲನ ಜಾರಿಗೊಳಿಸಲು ಉದ್ದೇಶಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಪಹಣಿಗಳಿಗೆ ಆಧಾರ್ ಜೋಡಣೆ ಮಾಡುವಾಗ ಪೌತಿ ಎಂದು ಗುರುತಿಸಿದ ಜಮೀನುಗಳ ಪಹಣಿಗಳನ್ನು ವಾರಸುದಾರರಿಗೆ ಖಾತೆ ಮಾಡಲು ಪ್ರಸಕ್ತ ಸಾರಿನಲ್ಲಿ ಇ-ಪೌತಿ ಆಂದೋಲನ ಜಾರಿಗೊಳಿಸಲಾಗುವುದು. ಗ್ರಾಮ, ತಾಲೂಕು ಮಟ್ಟದ ಭೂ ದಾಖಲೆಗಳನ್ನು ತಾಳೆ ಮಾಡಿ ಕ್ರಮಬದ್ಧಗೊಳಿಸುವ ವಿಧಾನವಾಗಿರುವ ಜಮಾಬಂದಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಇ- ಜಮಾಬಂದಿ ತಂತ್ರಾಂಶ ಅಭಿವೃದ್ದಿಪಡಿಸಲಾಗುತ್ತದೆ.
ಕರ್ನಾಟಕ ಭೂ ಕಂದಾಯ ಹಳೆಯದಾಗಿದ್ದು, ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮತ್ತು ಹೆಚ್ಚಿನ ಸ್ಪಷ್ಟತೆ ಹಿನ್ನೆಲೆಯಲ್ಲಿ ಸಮಗ್ರ ಅಧ್ಯಯನ ನಡೆಸಿ ಹೊಸ ಭೂ ಕಂದಾಯ ಕಾಯ್ದೆ ತರಲಾಗುವುದು.
ರೈತರು, ಸಾರ್ವಜನಿಕರ ಅನುಕೂಲಕ್ಕಾಗಿ 100 ಹೊಸ ನಾಡಕಛೇರಿಗಳ ನಿರ್ಮಾಣ ಮಾಡಲಾಗುವುದು. ಭೂ ಮಾಪನ ಇಲಾಖೆಯ ದೈನಂದಿನ ಸಾಂಪ್ರದಾಯಿಕ ಸರ್ವೆ ಕಾರ್ಯಗಳನ್ನು ಸಂಪೂರ್ಣ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿ ಡಿಜಿಟಲೀಕರಿಸಿ ಸಾರ್ವಜನಿಕರಿಗೆ ಪಾರದರ್ಶಕ ಸೇವೆ ನೀಡಲಾಗುವುದು.
ಕೇಂದ್ರದ ಸಹಯೋಗದಲ್ಲಿ ನಕ್ಷಾ ಯೋಜನೆಯಡಿ ಪ್ರಾರಂಭಿಕವಾಗಿ ರಾಜ್ಯದ 10 ನಗರಸಭೆ, ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯ ಆಸ್ತಿಗಳನ್ನು ಡ್ರೋನ್ ಬಳಸಿ ಸರ್ವೆ ಮಾಡುವ ಮೂಲಕ ಡಿಜಿಟಲೀಕರಿಸಲಾಗುವುದು. ನೋಂದಣಿ ಕಚೇರಿಗಳ ಆಧುನಿಕರಣ, ಒತ್ತುವರಿಯಾಗಿರುವ ದೇವಾಲಯಗಳು ಆಸ್ತಿ ಸಂರಕ್ಷಣೆ, ಒತ್ತುವರಿ ತೆರವು, ನೋಂದಣಿ ಪ್ರಕ್ರಿಯೆ ಸುಗಮಗೊಳಿಸಲು ಕಾವೇರಿ 2.0 ತಂತ್ರಾಂಶವನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ನಿರ್ವಹಿಸಲು ಕ್ರಮ, ಕಾವೇರಿ 2.0 ತಂತ್ರಾಂಶದ ಮೂಲಕ ಸರ್ಕಾರದ ಇ- ಸ್ಟಾಂಪಿಂಗ್ ವ್ಯವಸ್ಥೆ ಜಾರಿ ಸೇರಿ ಹಲವು ಯೋಜನೆಗಳನ್ನು ಘೋಷಿಸಲಾಗಿದೆ.