ಕೊಡಗು: ರಾಜ್ಯದ ರೈತರು ಸರ್ಕಾರಿ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿದ್ದರೇ, ಅಂತಹ ರೈತರು ಬಗರ್ ಹುಕುಂಗೆ ಅರ್ಜಿ ಸಲ್ಲಿಸಿದ್ದರೇ, ಅವುಗಳನ್ನು ವಿಲೇಗೆ 8 ತಿಂಗಳಲ್ಲೇ ವಿಲೇವಾರಿ ಮಾಡಲಾಗುತ್ತದೆ. ಸಾಗುವಳಿ ಪತ್ರ ವಿತರಣೆ ಮಾಡಲಾಗುವು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಸೋಮವಾರದಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು,ಜಿಲ್ಲೆಯಲ್ಲಿ ಸಾವಿರಾರು ಬಗರ್ ಹುಕುಂ ಅರ್ಜಿಗಳು ಸಲ್ಲಿಕೆಯಾಗಿದ್ದು ಮುಂದಿನ 8 ತಿಂಗಳಲ್ಲಿ ಈ ಎಲ್ಲಾ ಅರ್ಜಿಗಳನ್ನೂ ವಿಲೇಗೊಳಿಸಿ ಅರ್ಹರಿಗೆ ಭೂಮಿ ನೀಡಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಫಾರ್ಮ್ 57ರ ಅಡಿಯಲ್ಲಿ ಸಲ್ಲಿಸಲಾಗಿರುವ ಬಗರ್ ಹುಕುಂ ಅರ್ಜಿಗಳನ್ನು ಶೀಘ್ರ ವಿಲೇವಾರಿಗೊಳಿಸಬೇಕು ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹೈಕೋರ್ಟ್ ಆದೇಶಿಸಿದೆ. ಹೀಗಾಗಿ ಅಧಿಕಾರಿಗಳು ಬಗರ್ ಹುಕುಂ ಆ್ಯಪ್ ಸಹಾಯದಿಂದ ಅರ್ಹರಿಗೆ ಶೀಘ್ರವಾಗಿ ಸಾಗುವಳಿ ಚೀಟಿ ಮಂಜೂರು ಮಾಡಬೇಕು. ಅಧಿಕಾರಿಗಳು ಯಾವುದೇ ಒತ್ತಡಕ್ಕೂ ಮಣಿಯದೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದರು.
ರೈತರ ಆರ್ಟಿಸಿ ಆಧಾರ್ ಲಿಂಕ್ ಗೆ ಕರೆ
ರೈತರ ಆರ್‌ಟಿಸಿ ಜೊತೆಗೆ ಆಧಾರ್ ಲಿಂಕ್ ಜೋಡಣೆ ನಮ್ಮ ಮುಂದಿನ ಆದ್ಯತೆಯಾಗಬೇಕು ಎಂದು ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಈ ಬಗ್ಗೆ ಗಮನ ಸೆಳೆದ ಅವರು, “ರಾಜ್ಯದಲ್ಲಿ ಸಣ್ಣ ರೈತರ ಸಂಖ್ಯೆ ಕನಿಷ್ಠ ಶೇ.77 ರಷ್ಟಿದೆ. ಆದರೆ, ಕೇಂದ್ರ ಸರ್ಕಾರದ ಅಂಕಿಅಂಶದ ಪ್ರಕಾರ ಈ ಸಂಖ್ಯೆ ಕೇವಲ ಶೇ.44 ರಷ್ಟು ಮಾತ್ರ. ಪರಿಣಾಮ ಕೇಂದ್ರದ ಮಾನದಂಡದ ಪ್ರಕಾರ ರಾಜ್ಯಕ್ಕೆ ಕನಿಷ್ಠ ಮೊತ್ತದ ಬರ ಪರಿಹಾರ ಲಭ್ಯವಾಗುತ್ತಿದೆ. ಹೀಗಾಗಿ ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ಮಾಹಿತಿ ನಮೂದಿಸುವಾಗ ಅವರ ಆರ್ಟಿಸಿ ಜೊತೆಗೆ ಆಧಾರ್ ಲಿಂಕ್ ಮಾಡಬೇಕು. ಆ ಮೂಲಕ ಪರಿಹಾರ ಹಣದ ದುರ್ಬಳಕೆಯನ್ನು ತಡೆಯುವ ಜೊತೆಗೆ ರಾಜ್ಯದ ರೈತರ ನಿಖರ ಅಂಕಿಅಂಶ ಪಡೆಯಬಹುದು ಎಂದು ಅವರು ವಿವರಿಸಿದರು.
ಇ-ಆಫೀಸ್: ಕೊಡಗು ಉತ್ತಮ ಸಾಧನೆ
ಕೊಡಗಿನ ಎಲ್ಲಾ ತಾಲೂಕುಗಳಲ್ಲೂ ಇ-ಆಫೀಸ್ ಯಶಸ್ವಿಯಾಗಿ ಅನುಷ್ಠಾನಗೊಂಡಿರುವುದಕ್ಕೆ ಸಚಿವ ಕೃಷ್ಣ ಬೈರೇಗೌಡ ಅವರು ಸಭೆಯಲ್ಲೇ ಸಂಸತ ವ್ಯಕ್ತಪಡಿಸಿದರು.
ನಾವು ಶೋಕಿಗಾಗಿ ಇ-ಆಫೀಸ್ ಜಾರಿಗೆ ತಂದಿಲ್ಲ. ಬದಲಾಗಿ ಸರ್ಕಾರಿ ಕಚೇರಿಯಲ್ಲಿ ಕಾಯುವ ಶೋಷಣೆಯಿಂದ ಜನಸಾಮಾನ್ಯರಿಗೆ ಮುಕ್ತಿ ನೀಡುವ ಹಾಗೂ ಆಡಳಿತ ಯಂತ್ರಕ್ಕೆ ವೇಗ ನೀಡುವ ಉದ್ದೇಶದಿಂದ ಇ-ಆಫೀಸ್ ಅನುಷ್ಠಾನಗೊಳಿಸಲಾಗಿತ್ತು. ಕೊಡಗಿನ ಇ-ಆಫೀಸ್ ತೃಪ್ತಿಕರವಾಗಿದೆ. ಅಲ್ಲದೆ, ಭಾಗಶಃ ಕಂದಾಯ ಕಚೇರಿಗಳ ಪೈಕಿ ಸಿಸಿಎಂಎಸ್ ಅನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಿರುವ ಮೊದಲ ಜಿಲ್ಲೆ ಕೊಡಗು ಎಂದು ಅವರು ಶ್ಲಾಘಿಸಿದರು.
ಗ್ರಾಮ ಲೆಕ್ಕಿಗರಿಗೆ ಲ್ಯಾಪ್ ಟಾಪ್ ನೀಡಬೇಕು ಎಂದು ನಾವು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದೇವೆ. ಭಾಗಶಃ ಮುಂದಿನ ಬಜೆಟ್ ನಲ್ಲಿ ಇದನ್ನು ಘೋಷಿಸುವ ಸಾಧ್ಯತೆ ಇದೆ. ಹೀಗಾಗಿ ಶೀಘ್ರದಲ್ಲೇ ಗ್ರಾಮ ಲೆಕ್ಕಿಗರಿಗೆ ಲ್ಯಾಪ್ ಟಾಪ್ ಸಿಗಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸಭೆಯಲ್ಲಿ ತಿಳಿಸಿದರು.