ಕೊಡಗು ಜಿಲ್ಲೆಯಲ್ಲಿ ವಿದ್ಯಾಭ್ಯಾಸ ಸಾಲ ಸಾಮಾನ್ಯವಾಗಿ ವಾಣಿಜ್ಯ ಬ್ಯಾಂಕುಗಳಲ್ಲಿ ಮಾತ್ರ ಪಡೆಯಲು ಅವಕಾಶವಿದೆ. ಆದರೆ ಜಿಲ್ಲೆಯ ರೈತರು ಮತ್ತು ಬ್ಯಾಂಕಿನ ಹಾಲಿ ಗ್ರಾಹಕರ ಮಕ್ಕಳು ದೇಶ ಮತ್ತು ವಿದೇಶದಲ್ಲಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಉನ್ನತ ವ್ಯಾಸಂಗ ಮಾಡಲು ವಿದ್ಯಾಭ್ಯಾಸ ಸಾಲ ಪಡೆಯಲು ವಂಚಿತರಾಗಿರುವುದನ್ನು ಪರಿಗಣಿಸಿ ರೈತರ ಮಕ್ಕಳಿಗೆ ಅನುಕೂಲವಾಗುವಂತೆ ಅವಶ್ಯವಿರುವ “ವಿದ್ಯಾ ಸಹಕಾರ” ವೆಂಬ ವಿದ್ಯಾಭ್ಯಾಸ ಸಾಲದ ಯೋಜನೆಯನ್ನು ಬ್ಯಾಂಕಿನಲ್ಲಿ ಪ್ರಪ್ರಥಮವಾಗಿ ಜಾರಿಗೊಳಿಸಿ ವೈಯಕ್ತಿಕ ಗರಿಷ್ಠ ರೂ.60 ಲಕ್ಷ ವರೆಗೆ ಸಾಲ ನೀಡಲಾಗುತ್ತಿದ್ದು, ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆ ಕೊಡಗು ಜಿಲ್ಲಾ ಕೇಂದ್ರ ಬ್ಯಾಂಕಿನ ಅಧ್ಯಕ್ಷರಾದ ಕೊಡಂದೇರ ಬಾಂಡ್ ಗಣಪತಿ ಅವರು ತಿಳಿಸಿದ್ದಾರೆ.
2023-24 ನೇ ಸಾಲಿನಲ್ಲಿ ಒಟ್ಟು ವ್ಯವಹಾರ ರೂ.2926.07 ಕೋಟಿ ದಾಖಲಿಸಿದೆ. ಕಳೆದ ಸಾಲಿನ ಒಟ್ಟು ವ್ಯವಹಾರಕ್ಕಿಂತ ಈ ಬಾರಿ ರೂ 524.97 ಏರಿಕೆಯನ್ನು ಕಂಡಿದೆ ಎಂದು ಹೇಳಿದ್ದಾರೆ.
ರೈತ ಸದಸ್ಯರ ಬೆಳೆ ಸಾಲದ ಬೇಡಿಕೆಯನ್ನು ಪೂರೈಸಲು ಅನುಕೂಲವಾಗುವಂತೆ ಬ್ಯಾಂಕು ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ತಹಲ್‍ವರೆಗೆ ರೂ.1006.94 ಕೋಟಿ ಮೊತ್ತದ ಎನ್.ಸಿ.ಎಲ್. ಮಂಜೂರಾತಿ ಮಾಡಿ ಈಗಾಗಲೇ ರೂ 730.36 ಕೋಟಿ ಅರ್ಹ ರೈತ ಸದಸ್ಯರಿಗೆ ಸಾಲ ವಿತರಣೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ರಾಜ್ಯ ಸರ್ಕಾರದ ಯೋಜನೆಯಂತೆ ರೂ 3 ಲಕ್ಷ ಮೇಲ್ಪಟ್ಟು ರೂ 5 ಲಕ್ಷ ದವರೆಗೆ ಶೂನ್ಯ ಬಡ್ಡಿ ದರದಲ್ಲಿ ಕೆಸಿಸಿ ಸಾಲವನ್ನು ರಾಜ್ಯದ ಇತರ ಜಿಲ್ಲಾ ಡಿಸಿಸಿ ಬ್ಯಾಂಕುಗಳು ಸ್ವಂತ ಬಂಡವಾಳದಿಂದ ಸಾಲ ನೀಡಲು ಮುಂದೆ ಬಾರದಿದ್ದರು ಕೊಡಗು ಜಿಲ್ಲಾ ಬ್ಯಾಂಕು ಸ್ವಂತ ಬಂಡವಾಳದಿಂದ ಕೆಸಿಸಿ ಸಾಲ ರೂ.318 ಕೋಟಿ ವಿತರಣೆ ಮಾಡಿ ರಾಜ್ಯಕ್ಕೆ ಮಾದರಿಯಾಗಿರುತ್ತದೆಂದು ಅಧ್ಯಕ್ಷರಾದ ಕೊಡಂದೇರ ಪಿ.ಗಣಪತಿ ಅವರು ವಿವರಿಸಿದರು.
ಜಿಲ್ಲೆಯ ಸದಸ್ಯ ಸಹಕಾರ ಸಂಘಗಳಿಗೆ ಹಾಗೂ ಇತರ ಖಾಸಗಿ ಸಂಘ/ ಸಂಸ್ಥೆಗಳಿಗೆ ಅನುಕೂಲವಾಗುವಂತೆ ನಿವೇಶನ/ ಕಟ್ಟಡ ಖರೀದಿಗಾಗಿ 2024-25 ನೇ ಸಾಲಿನಿಂದ ಹೊಸ ಸಾಲ ಯೋಜನೆ ರೂಪಿಸಲಾಗಿದೆ. ಹಾಲಿ ನೀಡುತ್ತಿರುವ ಸೋಲರ್ ಅಳವಡಿಕೆಗೆ ಇರುವ ಸಾಲದ ಮಿತಿಯನ್ನು ರೂ 60 ಲಕ್ಷ ಗಳಿಗೆ ಹೆಚ್ಚಿಸಲಾಗಿದೆ.
ಹಾಗೂ ಸಿಸಿಟಿವಿ ಮತ್ತು ಇನ್ವರ್ಟರ್ ಅಳವಡಿಕೆಗಾಗಿ ರೂ 60 ಲಕ್ಷಗಳವರೆಗೆ ಸಾಲ ನೀಡಿಕೆಗೆ ಹೊಸ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಪ್ರಾಥಮಿಕ ಸಹಕಾರ ಸಂಘಗಳಿಗೆ ನಬಾರ್ಡ್ ವತಿಯಿಂದ ಎಂಎಸ್‍ಸಿ ಸಾಲವನ್ನು ನೀಡುತ್ತಿದ್ದು, ಇತರೆ ಸಂಘಗಳು ಈ ಯೋಜನೆಯಿಂದ ವಂಚಿತರಾಗಿರುವುದರಿಂದ ಸದಸ್ಯ ಸಹಕಾರ ಸಂಘಗಳು ಕೈಗೊಳ್ಳಲು ಉದ್ದೇಶಿಸಿರುವ ವಿವಿದ್ದೋದ್ದೇಶಿತ ಯೋಜನೆಗಳಿಗೆ (ಎಂಎಸ್‍ಸಿ) ಬ್ಯಾಂಕಿನಿಂದ ಯೋಜನಾ ವೆಚ್ಚದ ಶೇ.90 ರಷ್ಟು ಸಾಲವನ್ನು ಶೇ.4 ರಷ್ಟು ಬಡ್ಡಿ ಪ್ರೋತ್ಸಾಹಧನ ಹಾಗೂ ಗರಿಷ್ಠ ರೂ.2.50 ಲಕ್ಷಗಳಷ್ಟು ಅನುದಾನ ಸಹಿತ ಯೋಜನೆಯು ಕಾರ್ಯಗತದಲ್ಲಿದ್ದು, ಬ್ಯಾಂಕು ನಬಾರ್ಡ್ ಮತ್ತು ಎನ್‍ಸಿಡಿಸಿ ಯೋಜನೆಗಳಿಗೆ ಸರಿಸಮವಾಗಿ ಸದಸ್ಯ ಸಹಕಾರ ಸಂಘಗಳ ಯೋಜಿತ ಉದ್ದೇಶಗಳಿಗೆ ಒದಗಿಸಿಕೊಡುವ ಸಾಲ ಸೌಲಭ್ಯದ ಅನುಷ್ಠಾನಕ್ಕಾಗಿ ಬ್ಯಾಂಕು ರೂ.50 ಲಕ್ಷ ಮೊತ್ತವನ್ನು ಈಗಾಗಲೇ ಕಾಯ್ದಿರಿಸಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಸದಸ್ಯ ಸಹಕಾರ ಸಂಘಗಳು ಬ್ಯಾಂಕು ರೂಪಿಸಿರುವ ಈ ವಿಶೇಷ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಬಾಂಡ್ ಗಣಪತಿ ಅವರು ಕೋರಿದ್ದಾರೆ.
2024ರ ಮಾರ್ಚ್ ಅಂತ್ಯಕ್ಕೆ ಬ್ಯಾಂಕಿನ ಅನುತ್ಪಾದಕ ಆಸ್ತಿಗಳು(ಎನ್‍ಪಿಎ) ಪ್ರಮಾಣವು ಹೊರಬಾಕಿ ನಿಂತ ಸಾಲಕ್ಕೆ ಅನುತ್ಪಾದಕ ಆಸ್ತಿಯ ಪ್ರಮಾಣವು ಶೇ.1.88 ರಷ್ಟಿದ್ದು, ರಾಜ್ಯದ ಇತರ ಡಿಸಿಸಿ ಬ್ಯಾಂಕಿಗೆ ಹೋಲಿಸಿದಲ್ಲಿ ಅತೀ ಕಡಿಮೆ ಎನ್‍ಪಿಎ ಪ್ರಮಾಣ ಇರುವ ಬ್ಯಾಂಕು ಕೊಡಗು ಜಿಲ್ಲಾ ಸಹಕಾರ ಬ್ಯಾಂಕು ಎಂದು ಹೇಳಲು ಹೆಮ್ಮೆ ಪಡುತೇನೆಂದು ಎಂದು ಅಧ್ಯಕ್ಷರು ವಿವರಿಸಿದ್ದಾರೆ.