ಬೆಂಗಳೂರು : ಈ ವರ್ಷಾಂತ್ಯದೊಳಗೆ ಕನಿಷ್ಟ 2 ಲಕ್ಷ ಸರ್ಕಾರಿ ಭೂ ಮಂಜೂರಿದಾರರಿಗೆ ಅಭಿಯಾನ ಮಾದರಿಯಲ್ಲಿ ಪೋಡಿ ಮಾಡಿಕೊಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ವಿಧಾನ ಪರಿಷತ್ ಗೆ ಮಾಹಿತಿ ನೀಡಿದರು.
ಬುಧವಾರ ಪರಿಷತ್ನಲ್ಲಿ ಸದಸ್ಯರಾದ ಎಂಟಿಬಿ ನಾಗರಾಜ್ ಹಾಗೂ ಹೇಮಲತಾ ನಾಯಕ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, “ಹಿಂದೆ ಎರಡೂ ಸರ್ಕಾರದ ಅವಧಿಯಲ್ಲಿ ಅರ್ಜಿ ಕೊಟ್ಟವರದ್ದು ಮಾತ್ರ ಏಕವ್ಯಕ್ತಿ ಪೋಡಿ ಆಗ್ತಾ ಇತ್ತು. ಆದರೆ, ಈಗ ಏಕವ್ಯಕ್ತಿ ಪೋಡಿಯನ್ನು ಸಂಪೂರ್ಣ ಬಂದ್ಮಾಡಿದ್ದೇವೆ. ಪ್ರಸ್ತುತ ಸರ್ಕಾರ ಯಾರ ಅರ್ಜಿಗೂ ಕಾಯುತ್ತಿಲ್ಲ. ಬದಲಾಗಿ ಮಂಜೂರಿದಾರರ ದಾಖಲೆಗಳನ್ನು ನಾವೇ ತಯಾರು ಮಾಡಿ ಅಭಿಯಾನ ಮಾದರಿಯಲ್ಲಿ ಪೋಡಿ ಮಾಡಿ ಕೊಡುತ್ತಿದ್ದೇವೆ” ಎಂದು ಸದನಕ್ಕೆ ಮಾಹಿತಿ ನೀಡಿದರು.
“ರಾಜ್ಯದಲ್ಲಿ ಎಷ್ಟು ಜನರಿಗೆ ಸರ್ಕಾರಿ ಜಮೀನು ಮಂಜೂರಾಗಿದೆ ಎಂಬ ಸರಿಯಾದ ದಾಖಲೆ ಇಲ್ಲ. ಪ್ರತಿ ಅಧಿವೇಶನದಲ್ಲೂ ಈ ಪ್ರಶ್ನೆ ಸರ್ವೇ ಸಾಮಾನ್ಯ. ಆದರೆ, ಉತ್ತರವಾಗಿ ದೊರಕುವ ಅಂಕಿಸಂಖ್ಯೆ ಮಾತ್ರ ನಿಖರ ಅಲ್ಲ. ಕಾಲದಿಂದ ಕಾಲಕ್ಕೆ ಈ ಸಂಖ್ಯೆ ಬದಲಾಗುತ್ತಲೇ ಇದೆ. ಹೀಗಾಗಿ ಪ್ರಸ್ತುತ ರಾಜ್ಯದ ಎಲ್ಲಾ ಸರ್ಕಾರಿ ಜಮೀನಿನಲ್ಲಿ ಯಾರ್ಯಾರಿಗೆ ಜಮೀನು ಮಂಜೂರು ಆಗಿದೆ ಎಂದು ನಾವೇ ಆನ್ಲೈನ್ ನಲ್ಲಿ 1ಟೂ5 ಮಾಡಿಕೊಡಲು ಮುಂದಾಗಿದ್ದೇವೆ. ಈ ಪ್ರಕ್ರಿಯೆ ಅಂತ್ಯವಾದರೆ ರಾಜ್ಯದಲ್ಲಿ ಎಷ್ಟು ಜನರಿಗೆ ಸರ್ಕಾರಿ ಜಮೀನು ಮಂಜೂರಾಗಿದೆ ಎಂಬ ನಿಖರ ಅಂಕಿಅಂಶ ದೊರಕಲಿದೆ” ಎಂದರು.
“ಇಲ್ಲಿಯವರೆಗೆ 73,390 ಸರ್ವೇ ನಂಬರ್ಗಳಲ್ಲಿ ಮಂಜೂರಿದಾರರು ಇದ್ದಾರೆ ಎಂದು ಪತ್ತೆ ಮಾಡಿದ್ದೇವೆ. ಈ ಸರ್ವೇ ನಂಬರ್ನಲ್ಲಿ 2,51,000 ಮಂಜೂರಿದಾರರು ಇದ್ದಾರೆ. ಇನ್ನೂ 67,000 ಸರ್ವೇ ನಂಬರ್ಗಳಲ್ಲಿ ಈವರೆಗೆ 1ಟೂ5 ಆಗಿಲ್ಲ. ಈ ಕೆಲಸವನ್ನು ಶೀಘ್ರ ಮಾಡಬೇಕಿದೆ. ಇದನ್ನೂ 1ಟೂ5 ಮಾಡಿದಾಗ ಒಟ್ಟಾರೆ ಎಷ್ಟು ಮಂಜೂರಿದಾರರು ಇದ್ದಾರೆ ಎಂಬ ನಿಖರ ಮಾಹಿತಿ ತಿಳಿಯಲಿದೆ” ಎಂದರು.
“ಈ ಮೊದಲು 1ಟೂ5 ಗೆ ಕನಿಷ್ಟ 5 ದಾಖಲೆಗಳ ಅಗತ್ಯ ಇತ್ತು. ಕಳೆದ ಒಂದು ವರ್ಷಗಳಿಂದ ಸತತ ತಿದ್ದಿ ತೀಡಿ ಈಗ ಅದನ್ನು ಮೂರಕ್ಕೆ ಇಳಿಸಿದ್ದೇವೆ. ಮೂರು ದಾಖಲೆ ಇರುವ 1,17,630 ಜನರಿಗೆ ನಾವೇ ಅಳತೆ ಮಾಡಿ ಪೋಡಿ ಮಾಡಿಕೊಡುತ್ತಿದ್ದೇವೆ. 1,33,000 ಮಂಜೂರಿದಾರರಿಗೆ ಕನಿಷ್ಟ ಮೂರು ದಾಖಲೆ ಇಲ್ಲ. ಈ ಎಲ್ಲಾ ಪ್ರಕರಣಗಳೂ ಮಿಸ್ಸಿಂಗ್ ಕಮಿಟಿಗೆ ಹೋಗಿದೆ. ಮಿಸ್ಸಿಂಗ್ ರೆಕಾರ್ಡ್ ಕಮಿಟಿ ಪ್ರತಿ 15 ದಿನಕ್ಕೊಮ್ಮೆ ಮೀಟಿಂಗ್ ಮಾಡಬೇಕು ಎಂಬ ಸೂಚನೆ ನೀಡಲಾಗಿದೆ. ಅಲ್ಲೂ ಸಹ ಮೂರು ಇಲ್ಲದಿದ್ದರೆ ಎರಡು ದಾಖಲೆ ಇದ್ದರೂ ಪೋಡಿ ಮಾಡಿ ಎಂದು ಹೇಳಿದ್ದೇನೆ. ಹೀಗಾಗಿ 30,000 ಪ್ರಕರಣ ಶೀಘ್ರದಲ್ಲೇ ಮುಗಿಯಲಿವೆ. ಪ್ರಸ್ತುತ 1,47,000 ಜನರಿಗೆ ನಾವೇ ಪೋಡಿ ಮಾಡಿಕೊಡುತ್ತಿದ್ದೇವೆ. ಯಾವುದಕ್ಕೂ ಅರ್ಜಿ ಬಂದಿಲ್ಲ ನಾವೇ ಮುಂದೆ ಹೋಗಿ ಜನರ ಕೆಲಸ ಮಾಡಿಕೊಡುತ್ತಿದ್ದೇವೆ. ಡಿಸೆಂಬರ್ಒಳಗೆ ಎರಡು ಲಕ್ಷ ಮಂಜೂರಿದಾರರಿಗೆ ನಾವೇ ಪೋಡಿ ಮಾಡಿಕೊಡಲಿದ್ದೇವೆ” ಎಂದು ಉತ್ತರಿಸಿದರು.
“2013-18ರ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ 5,800 ಮಂಜೂರಿದಾರರಿಗೆ ಮಾತ್ರ ಪೋಡಿ ಆಗಿತ್ತು. 2019 ರಿಂದ 2023 ರ ಬಿಜೆಪಿ ಅವಧಿಯಲ್ಲಿ 8,500 ಮಂಜೂರಿದಾರರಿಗೆ ಮಾತ್ರ ಏಕವ್ಯಕ್ತಿ ಪೋಡಿ ಆಗಿತ್ತು. ಆದರೆ, ನಾವು ಕಳೆದ ಡಿಸೆಂಬರ್ ನಲ್ಲಿ ಆರಂಭಿಸಿ ಈ ಡಿಸೆಂಬರ್ ಗೆ 2,00,000 ಮಂಜೂರಿದಾರರಿಗೆ ಪೋಡಿ ಮಾಡಿಕೊಡಲಿದ್ದೇವೆ. ಏನೆಲ್ಲಾ ಪ್ರಯತ್ನ ಮಾಡಲು ಸಾಧ್ಯವೋ ಆ ಎಲ್ಲವನ್ನೂ ಮಾಡುತ್ತಿದ್ದೇವೆ. ಮೊದಲು ಯಾರ್ಯಾರಿಗೆ ಮಾಡಿಕೊಡಬೇಕೋ ಅವರಿಗೆ ಮಾಡಿಕೊಡ್ತೇವೆ. ಆ ನಂತರ ದಾಖಲೆ ಇಲ್ಲದಿದ್ದರೂ, ನಿಜವಾದ ಮಂಜೂರಿ ದಾರರಾಗಿದ್ದರೆ ಅಂತವರಿಗೆ ಏನಾದರೊಂದು ದಾರಿ ಹುಡುಕಿ ಖಡಾಖಂಡಿತವಾಗಿ ಪೋಡಿ ಮಾಡಿಕೊಡುತ್ತೇವೆ” ಎಂದು ಭರವಸೆ ನೀಡಿದರು.
ಎಲ್ಲಾ ದಾಖಲೆಗಳು ಸ್ಕ್ಯಾನ್:
ರಾಜ್ಯದ ಎಲ್ಲಾ ತಾಲೂಕು ಕಚೇರಿಗಳಲ್ಲಿನ ಮೂಲ ದಾಖಲೆಗಳನ್ನು ಸ್ಕಾನ್ ಮಾಡಿ ಡಿಜಿಟಲೀಕರಣಗೊಳಿಸುತ್ತಿರುವ ಬಗ್ಗೆಯೂ ಪರಿಷತ್ನಲ್ಲಿ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.
ಈ ಬಗ್ಗೆ ಮಾತನಾಡಿದ ಅವರು, “ರಾಜ್ಯದ ಎಲ್ಲಾ ತಾಲೂಕು ಕಚೇರಿಗಳಲ್ಲಿ ಕನಿಷ್ಟ 100 ಕೋಟಿ ಪುಟಗಳಷ್ಟು ಮೂಲ ದಾಖಲಾತಿಗಳಿವೆ ಎಂದು ಅಂದಾಜಿಸಲಾಗಿದೆ. ಈ ಪೈಕಿ 33 ಕೋಟಿ ಪುಟಗಳನ್ನು ಈಗಾಗಲೇ ಸ್ಕ್ಯಾನ್ ಮಾಡಲಾಗಿದೆ. ಮುಂದಿನ ಫೆಬ್ರವರಿ ಒಳಗೆ ಎಲ್ಲಾ ದಾಖಲೆಗಳನ್ನೂ ಸ್ಕ್ಯಾನ್ಮಾಡಿ ಮೊಬೈಲ್ನಲ್ಲಿ ಸಾರ್ವಜನಿಕರ ಕೈಗೆ ಸಿಗುವಂತೆ ಮಾಡುವುದೇ ನಮ್ಮ ಉದ್ದೇಶ. ಇದರಿಂದ ನಕಲಿ ದಾಖಲೆ ಸೃಷ್ಟಿ, ದಾಖಲೆ ತಿದ್ದುವ ಅಥವಾ ಕಳೆದುಹಾಕುವ ಪ್ರಸಂಗಗಳಿಂದ ರೈತರಿಗೆ ಆಗುತ್ತಿದ್ದ ಶೋಷಣೆಗೆ ಪೂರ್ಣ ವಿರಾಮ ನೀಡುವುದು ಕಂದಾಯ ಇಲಾಖೆ ಹಾಗೂ ಸರ್ಕಾರದ ಉದ್ದೇಶ ಎಂದು ಮಾಹಿತಿ ನೀಡಿದರು.
ಹೊಸ ವಿದ್ಯುತ್ ಗ್ರಾಹಕರಿಗೆ ‘ಸ್ಮಾರ್ಟ್ ಮೀಟರ್’ ಅಳವಡಿಕೆ ಕಡ್ಡಾಯ: ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್